*ಗೋಣಿಕೊಪ್ಪಲು, ಜು. 6: ಯುವ ಜನಾಂಗವನ್ನು ಕಾಡುವ ಮೋಟಾರ್ ಬೈಕ್ ಚಾಲನೆ, ಮೊಬೈಲ್, ಪ್ರೀತಿ-ಪ್ರೇಮ ಕ್ಕಿಂತಲೂ ಹೆಚ್ಚು ಅಪಾಯಕಾರಿ ಮಾದಕ ದ್ರವ್ಯಗಳ ಬಳಕೆ ಎಂದು ಪೊನ್ನಂಪೇಟೆ ಸಬ್ ಇನ್ಸ್ಪೆಕ್ಟರ್ ಮಹೇಶ್ ಹೇಳಿದರು.
ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಮಾದಕ ದ್ರವ್ಯ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮಾದಕ ವಸ್ತುಗಳು ಮೆದುಳಿನ ನಿಯಂತ್ರಣ ತಪ್ಪಿಸಿ ನೈಸರ್ಗಿಕ ಚಲನೆ ತಪ್ಪಿಸುತ್ತವೆ. ಒಮ್ಮೆ ಕೆಟ್ಟ ಚಟವನ್ನು ಮೈಗೂಡಿಸಿಕೊಂಡರೆ ಅದರಿಂದ ಹೊರಬರುವದು ಕಷ್ಟ ಎಂದು ತಿಳುವಳಿಕೆ ಹೇಳಿದರು. ಗ್ರಾಮ ಪಂಚಾಯಿತಿ ಸದಸ್ಯ ಪೋಡಮಾಡ ಸುಕೇಶ್ ಮಾತನಾಡಿ, ಕೆಟ್ಟ ವ್ಯಕ್ತಿಗಳಿಂದ ಯುವಕರು ದೂರವಿರಬೇಕು. ವ್ಯಾಸಂಗದ ಅವಧಿಯಲ್ಲಿ ಓದುವದನ್ನು ಬಿಟ್ಟು ಕೆಟ್ಟ ಹವ್ಯಾಸಗಳ ಕಡೆಗೆ ಗಮನಹರಿಸಬಾರದು ಎಂದು ತಿಳಿಸಿದರು. ಉಪನ್ಯಾಸಕ ಕೆ.ಜಿ. ಅಶ್ವಿನಿಕುಮಾರ್ ಮಾತನಾಡಿ, ಪೊಲೀಸ್ ಇಲಾಖೆ ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯಗಳ ಬಳಕೆ ಮತ್ತು ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುತ್ತಿರುವದು ಶ್ಲಾಘನೀಯ ಎಂದರು. ಪ್ರಾಂಶುಪಾಲ ಡಾ. ಜೆ. ಸೋಮಣ್ಣ ಅಧ್ಯಕ್ಷತೆ ವಹಿಸಿದ್ದರು. ಪೊಲೀಸ್ ಸಿಬ್ಬಂದಿ ಸಾದಿಲಿ, ಅಧ್ಯಾಪಕರಾದ ಎಂ.ಪಿ. ರಾಘವೇಂದ್ರ, ಸುಬ್ಬಯ್ಯ, ಬೆನಡಿಕ್ಟ ಫರ್ನಾಂಡೀಸ್, ಉಪನ್ಯಾಸಕರಾದ ಎನ್.ಕೆ. ಪ್ರಭು, ಪ್ರತಿಭಾ ಉತ್ತಪ್ಪ ಹಾಜರಿದ್ದರು.