ಮಡಿಕೇರಿ, ಜು. 5: ಸೋಮವಾರಪೇಟೆ ತಾಲೂಕು ಕೇಂದ್ರದಿಂದ ಆರೆಂಟು ಕಿ.ಮೀ. ದೂರದಲ್ಲಿರುವ ಬಜೆಗುಂಡಿ ಗ್ರಾಮಸ್ಥರು, ಇಂದಿಗೂ ನೂರೆಂಟು ಸಮಸ್ಯೆಗಳ ನಡುವೆ ದಿನಗಳನ್ನು ಕಳೆಯುತ್ತಿದ್ದಾರೆ. ಕಳೆದ ಅರ್ಧ ಶತಮಾನಕ್ಕೂ ಹಿಂದಿನಿಂದ ಬೇಳೂರು ಗ್ರಾ.ಪಂ. ವ್ಯಾಪ್ತಿಯ ಈ ಬಜೆಗುಂಡಿ ಗ್ರಾಮಸ್ಥರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದು, ಸರಕಾರಿ ಜಮೀನಿನಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದರೂ, ಹಕ್ಕುಪತ್ರ, ರಸ್ತೆ, ವಿದ್ಯುತ್‍ನಂತಹ ಮೂಲಭೂತ ಸಮಸ್ಯೆಗಳಲ್ಲಿ ಸಿಲುಕಿಕೊಂಡಿದ್ದಾರೆ.
ಬಜೆಗುಂಡಿ ಗ್ರಾಮದ ಜನವಸತಿಯೊಳಗೆ ತಿರುಗಾಡಲು ಸೂಕ್ತ ರಸ್ತೆ ಇಲ್ಲ ಅಲ್ಲಲ್ಲಿ ಗುಂಡಿಗಳ ನಡುವೆ ಬೀಳುವ ಹಂತದಲ್ಲಿರುವ ಒಂದಿಷ್ಟು ವಿದ್ಯುತ್ ಕಂಬಗಳು ಕುಸಿದು ಬೀಳುತ್ತಿರುವ ಮನೆಗಳು ಕಸದ ರಾಶಿ ನಡುವೆ ನಿತ್ಯ ಜೀವನ ಕಳೆಯುವಂತಾಗಿದೆ ಖಾಸಗಿ ಜಮೀನುಗಳಿಂದ ನೆಲಕಚ್ಚಿರುವ ಮರಗಳು, ಕಾಡಾನೆಗಳ ನಿರಂತರ ಉಪಟಳ ನಡುವೆ ಆತಂಕದೊಂದಿಗೆ ಬದುಕುವಂತಾಗಿದೆ.
ಸಭೆಯಲ್ಲಿ ಅಳಲು: ಸೋಮವಾರಪೇಟೆ ತಾಲೂಕು ಪಂಚಾಯಿತಿ ಸಭೆಯಲ್ಲಿ ನಿರ್ಣಯ ಕೈಗೊಂಡು, ಗ್ರಾಮ ಪಂಚಾಯಿತಿಗಳಿಗೆ ಖುದ್ದು ಭೇಟಿ ನೀಡಿ ಆಯ ಗ್ರಾಮಗಳ ಸಮಸ್ಯೆಗಳನ್ನು ಆಲಿಸಲು ನಿರ್ಣಯ ಕೈಗೊಳ್ಳಲಾಗಿದೆ.
ಈ ಸಂಬಂಧ ಸೋಮವಾರಪೇಟೆ ತಾ.ಪಂ. ಪ್ರಮುಖರು, ವಿವಿಧ ಇಲಾಖಾ ಅಧಿಕಾರಿಗಳು ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ನೇತೃತ್ವದಲ್ಲಿ ಬೇಳೂರು ಗ್ರಾ.ಪಂ.ಗೆ ಭೇಟಿ ನೀಡಿದಾಗ ಗ್ರಾಮಸ್ಥರು ಸಮಸ್ಯೆಗಳನ್ನು ಬಿಚ್ಚಿಟ್ಟರು. ಸಮಸ್ಯೆಗಳ ನಡುವೆ ಜೀವನವೇ ಬೇಡವೆನ್ನುವಂತಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಹಕ್ಕುಪತ್ರ ಹೊಂದಿಕೊಳ್ಳಲು ಅರಣ್ಯ ಅಭಿವೃದ್ಧಿ ಸಮಿತಿಯ ಮೂಲಕ ನಿರ್ಣಯ ಅಂಗೀಕರಿಸಿ ರವಾನಿಸಿದ್ದರೂ, ಸಂಬಂಧಿಸಿದ ಅಧಿಕಾರಿಗಳು 280ಕ್ಕೂ ಅಧಿಕ ಕುಟುಂಬಸ್ಥರ ಕಡತಗಳನ್ನು ತಿರಸ್ಕರಿಸಿರುವದಾಗಿ; ಸಭೆಯಲ್ಲಿ ಅಸಮಾಧಾನ ತೋಡಿಕೊಂಡ ಗ್ರಾಮಸ್ಥರು ಈ ಬಗ್ಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಮೇಲ್ಮನೆ ಸದಸ್ಯರ ಗಮನ ಸೆಳೆದರು.
ಅಲ್ಲದೆ, ಕಳೆದ ವರ್ಷದ ಮಳೆಗಾಲದಲ್ಲಿ ಕೆಲವು ಮನೆಗಳು ನೆಲಕಚ್ಚಿದ್ದರೂ, ಇದುವರೆಗೆ ಯಾವದೇ ನೆರವು ಲಭಿಸಿಲ್ಲವೆಂದು ಅಸಹಾಯಕತೆ ತೋಡಿಕೊಂಡರು. ಪರಿಸ್ಥಿತಿಯ ಒತ್ತಡದಲ್ಲಿ ಸಿಲುಕಿರುವ ಅನೇಕ ಕುಟುಂಬಗಳು ಸೂರಿಲ್ಲದೆ ವಿವಿಧ ಇಲಾಖಾ ಕಚೇರಿಗಳಿಗೆ ಅಲೆಯುವಂತಾಗಿದೆ ಎಂದು ಬೊಟ್ಟು ಮಾಡಿದರು.
ಎಂ.ಎಲ್.ಸಿ. ಅಭಯ: ಕುಂದುಕೊರತೆ ಆಲಿಸಿದ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾತನಾಡಿ, ಬಜೆಗುಂಡಿ ಗ್ರಾಮಸ್ಥರ ಸಮಸ್ಯೆಗೆ ಪರಿಹಾರ ಕಲ್ಪಿಸುವಲ್ಲಿ ಜಿಲ್ಲಾಧಿಕಾರಿ ಹಾಗೂ ಕಂದಾಯ ಮತ್ತು ಅರಣ್ಯ ಸಚಿವರಿಗೆ ಪತ್ರ ಬರೆದು ಸೂಕ್ತ ಪರಿಹಾರ ಕಲ್ಪಿಸಿಕೊಡುವದಾಗಿ ಭರವಸೆ ನೀಡಿದರು. ವಸತಿ ಸಚಿವರಿಗೂ ಪತ್ರ ಬರೆದು ನಿಯಮಾನುಸಾರ ಆಶ್ರಯ ಯೋಜನೆಯಡಿ ಸೂರು ಒದಗಿಸುವದಾಗಿ ಮಾರ್ನುಡಿದರು.
ತಾ.ಪಂ.ನಿಂದ ಕ್ರಮ: ಸೋಮವಾರಪೇಟೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುನಿಲ್‍ಕುಮಾರ್ ಅವರಿಗೆ ಈ ಬಗ್ಗೆ ತಾಕೀತು ಮಾಡಿದ ಮೇಲ್ಮನೆ ಸದಸ್ಯರು, ತಕ್ಷಣದಿಂದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮೂಲಕ ವರದಿ ಸಂಗ್ರಹಿಸಿ ಬೇಳೂರು ಗ್ರಾ.ಪಂ. ವ್ಯಾಪ್ತಿಯ ಜನತೆಯ ಸಮಸ್ಯೆಗಳನ್ನು ಪರಿಹರಿಸಲು ಕ್ರಮವಹಿಸುವಂತೆ ತಿಳಿ ಹೇಳಿದರು.
ಅಭಿಮನ್ಯು ಅಸಮಾಧಾನ: ಸೋಮವಾರಪೇಟೆ ತಾಲೂಕು ಪಂಚಾಯಿತಿ ಸಭೆಯಲ್ಲಿ ನಿರ್ಣಯ ಕೈಗೊಂಡು ಪ್ರತಿ ಗ್ರಾ.ಪಂ. ವ್ಯಾಪ್ತಿಯ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ವಹಿಸಲಾಗುತ್ತಿದ್ದು, ಜನಪ್ರತಿನಿಧಿಗಳ ಬೇಡಿಕೆಗೆ ಮತ್ತು ಸಾರ್ವಜನಿಕ ಸಮಸ್ಯೆಗಳಿಗೆ ಹಲವು ಇಲಾಖೆಗಳಿಂದ ಸೂಕ್ತ ಸ್ಪಂದನ ಲಭಿಸುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಕ್ಷೇತ್ರದ ಶಾಸಕರು, ಮೇಲ್ಮನೆ ಸದಸ್ಯರು ಸಂಸದರ ಮುಖಾಂತರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಎಲ್ಲ ಕ್ರಮ ಕೈಗೊಳ್ಳುವದಾಗಿ ನುಡಿದರು.
ತಾ.ಪಂ. ಅಧ್ಯಕ್ಷೆ ಪುಷ್ಪ ರಾಜೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ಗಂಗಮ್ಮ ಉಪಸ್ಥಿತರಿದ್ದರು. ಗ್ರಾ.ಪಂ. ಮಾಜಿ ಅಧ್ಯಕ್ಷ ಯಾಕೂಬ್, ಹಾಲಿ ಅಧ್ಯಕ್ಷೆ ಭಾಗ್ಯ, ಉಪಾಧ್ಯಕ್ಷ ಸತೀಶ್ ಸೇರಿದಂತೆ ಸದಸ್ಯ ಯೋಗೇಂದ್ರ ಮತ್ತಿತರರು ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಅಂತಿಮವಾಗಿ ಪ್ರತಿಕ್ರಿಯಿಸಿದ ಮೇಲ್ಮನೆ ಸದಸ್ಯ ಸುನಿಲ್ ಸುಬ್ರಮಣಿ, ಅಧಿಕಾರಿಗಳು, ಜನಪ್ರತಿನಿಧಿಗಳು, ಗ್ರಾಮಸ್ಥರು ಒಗ್ಗಟ್ಟಿನಿಂದ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದರು.