ಸೋಮವಾರಪೇಟೆ, ಜು. 5: ಉದ್ಯಮಿ ಹಾಗೂ ದಾನಿಗಳಾದ ಹರಪಳ್ಳಿ ರವೀಂದ್ರ ಅವರು ತಾಲೂಕಿನ ದೊಡ್ಡಕೊಡ್ಲಿ ಹಾಗೂ ಬ್ಯಾಡಗೊಟ್ಟ ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಿದರು.

ದೊಡ್ಡಕೊಡ್ಲಿ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರವೀಂದ್ರ ಅವರು, ಸರ್ಕಾರಿ ಶಾಲೆ ಮಕ್ಕಳೆಂಬ ಕೀಳರಿಮೆ ಬಿಟ್ಟು ವಿದ್ಯಾರ್ಥಿಗಳು ಕಲಿಕೆಯಲ್ಲಿ ಪಾಲ್ಗೊಳ್ಳಬೇಕು. ಸರ್ಕಾರಗಳೂ ಸಹ ಹಲವಷ್ಟು ಸವಲತ್ತುಗಳನ್ನು ಒದಗಿಸುತ್ತಿದ್ದು, ಇವುಗಳನ್ನು ಸದುಪಯೋಪಡಿಸಿಕೊಂಡು ಶೈಕ್ಷಣಿಕವಾಗಿ ಸಾಧನೆ ಮಾಡಬೇಕು ಎಂದರು.

ಸಮಾಜದಲ್ಲಿ ಹಲವಷ್ಟು ಸಾಧಕರು ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಆಗಿದ್ದಾರೆ. ಅಂದಿನ ಪಾಠವನ್ನು ಅಂದೇ ಅಭ್ಯಸಿಸುವ ಮೂಲಕ ಕಠಿಣ ಪರಿಶ್ರಮದೊಂದಿಗೆ ಜ್ಞಾನಾರ್ಜನೆ ಮಾಡಬೇಕು. ಪೋಷಕರೂ ಸಹ ಮಕ್ಕಳ ಅನುಕೂಲಕ್ಕೆ ತಕ್ಕಂತೆ ಓದುವ ವಾತಾವರಣ ನಿರ್ಮಿಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಸಿಆರ್‍ಪಿ ಎಸ್.ಎಂ. ಸುರೇಶ್, ಎಸ್‍ಡಿಎಂಸಿ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷೆ ತಮಸಂ, ಶಿಕ್ಷಕ ಫಯಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಬ್ಯಾಡಗೊಟ್ಟ ಶಾಲೆಯಲ್ಲಿ ಶಿಕ್ಷಕಿ ರಿಜ್ವಾನ, ರಮೇಶ್ ಅವರುಗಳು ಇದ್ದರು.