ಗೋಣಿಕೊಪ್ಪ ವರದಿ, ಜು. 5: ವೀರಾಜಪೇಟೆ ತಾಲೂಕಿನ ಸರ್ಕಾರಿ ಜಾಗದಲ್ಲಿ ವಾಸಿಸುತ್ತಿರುವ ದಲಿತ ಕುಟುಂಬದವರಿಗೆ 15 ದಿನಗಳಲ್ಲಿ ಹಕ್ಕುಪತ್ರ ಹಾಗೂ ಮೂಲಭೂತ ಸೌಕರ್ಯ ಒದಗಿಸದಿದ್ದಲ್ಲಿ ಅರೆಬೆತ್ತಲೆ ಪಂಜಿನ ಮೆರವಣಿಗೆ ನಡೆಸಲಾಗುವದು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್ ಎಚ್ಚರಿಸಿದ್ದಾರೆ.

ತಾಲೂಕಿನ ಹುದಿಕೇರಿ, ಹೈಸೊಡ್ಲೂರು, ತಿತಿಮತಿ, ದೇವಪುರ, ಹುದೂರು, ಹಳ್ಳಿಗಟ್ಟು, ಹಾತೂರು, ಕುಂದ, ಕೆದಮುಳ್ಳೂರು ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ದಲಿತ ಕುಟುಂಬಗಳು ವಾಸಿಸುತ್ತಿದ್ದಾರೆ. ಆದರೆ, ಅವರಿಗೆ ಮೂಲಭೂತ ಸೌಕರ್ಯ ಹಾಗೂ ಹಕ್ಕುಪತ್ರವನ್ನು ಸರ್ಕಾರ ನೀಡುತ್ತಿಲ್ಲ. ಕೂಡಲೇ ವಿತರಿಸದಿದ್ದರೆ ಗೋಣಿಕೊಪ್ಪದಲ್ಲಿ ಅರೆಬೆತ್ತಲೆ ಪಂಜಿನ ಮೆರವಣಿಗೆ ಮೂಲಕ ಸರ್ಕಾರವನ್ನು ಎಚ್ಚರಿಸುವ ಕಾರ್ಯಕ್ಕೆ ಮುಂದಾಗುವದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.