2019ರ ಕ್ಯಾಲೆಂಡರ್‍ನ ಪ್ರಕಾರ ಇದೀಗ ಅರ್ಧ ವರ್ಷ ಉರುಳಿ ಹೋಗಿದೆ. ಜನವರಿ 1 ರಿಂದ ಆರಂಭಗೊಂಡು ಜೂನ್ 30ಕ್ಕೆ ಈ ಸಾಲಿನ 12 ತಿಂಗಳ ಪೈಕಿ 6 ತಿಂಗಳು ಕೊನೆಗೊಂಡಿದೆ.
ಈ ಆರು ತಿಂಗಳಿನಲ್ಲಿ ದೇಶದಲ್ಲೇನು, ರಾಜ್ಯದಲ್ಲೇನು ನಡೆದಿದೆ, ನಮ್ಮ ಜಿಲ್ಲೆ ಕೊಡಗಿನಲ್ಲಿ ಏನಾಗಿದೆ ಎಂದು ಅವಲೋಕನ ಮಾಡಿದಲ್ಲಿ ದೇಶ ಹಾಗೂ ರಾಜ್ಯದಲ್ಲಿ ರಾಜಕೀಯದ್ದೇ ಹೆಚ್ಚಿನ ದರ್ಬಾರು. ಅದರಲ್ಲೂ ಈ ಬಾರಿ ಲೋಕಸಭೆಗೆ ಚುನಾವಣೆ ಬೇರೆ ಎದುರಾದ ಹಿನ್ನೆಲೆಯಲ್ಲಿ ದೇಶವ್ಯಾಪಿಯಾಗಿ ಹಾಗೂ ರಾಜ್ಯದಲ್ಲಿ ರಾಜಕೀಯ ವಿಚಾರಗಳೇ ಹೆಚ್ಚಿನ ಪ್ರಾತಿನಿದ್ಯ ಪಡೆದುಕೊಂಡಿರುವದು ನಿಸ್ಸಂಶನೀಯ.
2018ರ ವರ್ಷದ ಮಹಾಮಳೆಯ ಅಬ್ಬರಕ್ಕೆ ನಲುಗಿ ಹೋದ ಕೊಡಗು ಜಿಲ್ಲೆಯ ಮಟ್ಟಿಗೆ ಹೇಳುವದಾದರೆ ಇಲ್ಲಿ ರಾಜಕೀಯ ಬೆಳವಣಿಗಗಳು ಆ ಸಂದರ್ಭದಲ್ಲಿ ಒಂದಷ್ಟು ಬಿರುಸಾಗಿ ನಡೆದಿತ್ತಾದರೂ, ಜಿಲ್ಲೆಯ ಜನತೆಗೆ ಅತ್ಯಗತ್ಯವಾಗಿ ಮತ್ತೊಂದು ಮಳೆಗಾಲದ ಆರಂಭದ ಒಳಗೆ ಆಗಬೇಕಿದ್ದ ಬಹಳಷ್ಟು ಕೆಲಸ ಕಾರ್ಯಗಳು ನಡೆದಿಲ್ಲ. ಜನವರಿ, ಫೆಬ್ರವರಿ ತಿಂಗಳು ಹೇಗೋ ಕಳೆಯಿತು. ಆದರೆ ಮಾರ್ಚ್ ತಿಂಗಳಲ್ಲಿ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಎದುರಾಗಿತ್ತು. ಏಪ್ರಿಲ್ - ಮೇ ತಿಂಗಳು ಬಹುತೇಕ ಚುನಾವಣಾ ಅವಧಿಯದ್ದೇ ಆಗಿ ಕಳೆದು ಹೋಯಿತು.
ಪ್ರಸಕ್ತ ವರ್ಷ ಏಪ್ರಿಲ್ - ಮೇ ತಿಂಗಳಿನಲ್ಲಿ ಜಿಲ್ಲೆಯಲ್ಲಿ ವರ್ಷಂಪ್ರತಿ ನಡೆಯುವ ಕ್ರೀಡಾ ಹಬ್ಬದ ಸಂಭ್ರಮಾಚರಣೆಗಳೂ ಈ ಬಾರಿ ಹಿಂದಿನ ವರ್ಷಗಳಂತೆ ಗೋಚರಿಸಲಿಲ್ಲ. 2018ರ ಜಲಪ್ರಳಯದಿಂದಾಗಿ ಎಲ್ಲವೂ ತೀರಾ ಸರಳವಾಗಿಯೇ ಕಳೆದಿದೆ. ಇನ್ನು ಅವದಿ ಮುಗಿದಿದ್ದ ಜಿಲ್ಲೆಯ ಮೂರು ಪಟ್ಟಣ ಪಂಚಾಯಿತಿಗಳಿಗೆ 2018ರ ಅಕ್ಟೋಬರ್‍ನಲ್ಲೇ ಚುನಾವಣೆ ನಡೆದಿದ್ದರೂ ಕಾರಣಾಂತರಗಳಿಂದ ಇಲ್ಲಿ ಆಡಳಿತ ಮಂಡಳಿ ರಚನೆಗೆ ಕಾಲ ಕೂಡಿ ಬಂದಿಲ್ಲ. ಜಿಲ್ಲೆಯ ಏಕೈಕ ನಗರಸಭೆಯ ಸದಸ್ಯರ ಅಧಿಕಾರಾವಧಿಯೂ ಮುಕ್ತಾಯಗೊಂಡಿದ್ದು, ಇಲ್ಲಿಯೂ ಚುನಾವಣೆ ನಡೆಯುವದು ಬಾಕಿ ಉಳಿದಿದೆ.
ಈ ನಡುವೆ ಮಳೆಗಾಲ ಆರಂಭಗೊಳ್ಳುವ ಕಾಲ ಸನ್ನಿಹಿತವಾಗುತ್ತಿದ್ದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಳೆದ ವರ್ಷದ ದುರಂತದ ಕಾರಣದಿಂದಾಗಿ ಈ ಬಾರಿ ಅಂತಹ ಆಪತ್ತು ಎದುರಾದಲ್ಲಿ ಅದನ್ನು ಎದುರಿಸಲು ಒಂದಷ್ಟು ಸಿದ್ಧತೆಯನ್ನು ಮಾಡಿಕೊಂಡಿತ್ತು. ಈ ಸಿದ್ಧತೆಗಳು ಮುನ್ನೆಚ್ಚರಿಕಾ ಕ್ರಮವಾಗಿದ್ದರೆ, ಈ ಹಿಂದೆ ಸಂತ್ರಸ್ತರಾದವರ ಬವಣೆಗೆ ಇನ್ನೂ ಶಾಶ್ವತ ಪರಿಹಾರವಂತೂ ದೊರೆತಿಲ್ಲ. ಸಂತ್ರಸ್ತರ ಗೋಳು ಯಾವ ರೀತಿ ಮುಂದುವರಿದಿದೆ ಎಂಬದಕ್ಕೆ ಇತ್ತೀಚೆಗೆ ಜಿಲ್ಲಾಧಿಕಾರಿಗಳು ವಿಶೇಷವಾಗಿ ಹಮ್ಮಿಕೊಂಡಿದ್ದ ಪರಿಹಾರ ಅದಾಲತ್‍ನಲ್ಲಿ ಕಂಡು ಬಂದ ಚಿತ್ರಣವೇ ಸಾಕ್ಷಿಯಾಗಿತ್ತು. ಬೇಸಿಗೆಯ ಅವದಿಯಲ್ಲಿ ಸಿಗುವ ಅಲ್ಪಾವಧಿಯಲ್ಲಿ ಜಿಲ್ಲೆಯಲ್ಲಿ ಆಗಬೇಕಾದ ಹಲವಾರು ಕೆಲಸ ಕಾರ್ಯಗಳು ಕುಂಟುತ್ತಾ ಸಾಗಿವೆ. ಹಲವು ಅಗತ್ಯ ಕೆಲಸಗಳು ಬಹುಶಃ ನಡೆದೇ ಇಲ್ಲ ಎನ್ನಬಹುದು.
ಬರಸಿಡಿಲಿನಂತಾಗಿದೆ ಬರದ ಛಾಯೆ
ಇವೆಲ್ಲದರ ನಡುವೆ ವಾಡಿಕೆಯಂತೆ ಕೊಡಗಿನಲ್ಲಿ ಮುಂಗಾರು ಆರಂಭಗೊಳ್ಳುವ ಜೂನ್ ತಿಂಗಳು ಆರಂಭಗೊಂಡು ಇದೀಗ ಈ ತಿಂಗಳು ಮುಗಿದಿದೆಯಾದರೂ ಈ ಬಾರಿ ನಿರೀಕ್ಷಿತ ಮಳೆ ಕಂಡು ಬಾರದೆ ಬರಗಾಲದ ಛಾಯೆ ಕಂಡು ಬರುತ್ತಿರುವದು ಕೃಷಿ ಪ್ರಧಾನವಾದ ಜಿಲ್ಲೆಯನ್ನು ಕಂಗೆಡಿಸುತ್ತಿದೆ. ಕಳೆದ ವರ್ಷ ಅತಿವೃಷ್ಟಿಯಾದರೆ ಈ ಬಾರಿ ಅನಾವೃಷ್ಟಿಯ ಲಕ್ಷಣಗಳು ಆತಂಕಕ್ಕೆ ಈಡು ಮಾಡುತ್ತಿವೆ. ಇದರೊಂದಿಗೆ ಕರ್ನಾಟಕ - ತಮಿಳುನಾಡುವಿನ ಕಾವೇರಿ ಜಲವಿವಾದವೂ ಆರಂಭವಾಗುತ್ತಿರುವದು ರಾಜ್ಯಕ್ಕೂ ಸಂಬಂಧಿಸಿದ ವಿಚಾರವಾಗುತ್ತಿದೆ. ಕೊಡಗಿನಲ್ಲಿ ಈಗಿನ ಹವಾಮಾನದಿಂದಾಗಿ ಕೃಷಿ ಚಟುವಟಿಕೆಯೂ ವಿಳಂಬವಾಗುತ್ತಿದೆ.
ಮುಂಗಾರು ಹಿನ್ನಡೆ ಕಂಡಿರುವದರಿಂದ ಉಳಿದ ತಿಂಗಳಿನಲ್ಲಿ ಯಾವ ಬದಲಾವಣೆಗಳು ಎದುರಾಗಬಹುದು. ಏಲಕ್ಕಿಗೆ ಬೆಲೆ ಇದ್ದರೂ ಫಸಲು ಇಲ್ಲ, ಕರಿಮೆಣಸು ತಿರುಳು ಬಿಡುತ್ತಿಲ್ಲ. ಸೆಪ್ಟೆಂಬರ್, ಅಕ್ಟೋಬರ್ ವೇಳೆಯಲ್ಲಿ ಒಂದು ವೇಳೆ ಮಳೆ ಹೆಚ್ಚಾದಲ್ಲಿ ಇದು ಜಿಲ್ಲೆಯ ಆರ್ಥಿಕತೆಯ ಬೆನ್ನೆಲುವಾದ ಕಾಫಿಯ ಮೇಲೆ ಯಾವ ಪರಿಣಾಮ ಬೀರಬಹುದು ಎಂದು ರೈತರು, ಬೆಳೆಗಾರರು ಚಿಂತಿತರಾಗುವಂತಾಗಿರುವದು ಈಗಿನ ಸನ್ನಿವೇಶವಾಗಿದೆ.
- ಶಶಿ ಸೋಮಯ್ಯ