ಸೋಮವಾರಪೇಟೆ, ಜು. 4: ತಾಲೂಕಿನ ವಿವಿಧ ಕಾಫಿ ತೋಟ ಹಾಗೂ ಲೈನ್‍ಮನೆಗಳಲ್ಲಿರುವ ಕಾರ್ಮಿಕರ ಸಮೀಕ್ಷೆಗೆ ಮಾಲೀಕರು ಸಂಪೂರ್ಣ ಸಹಕಾರ ನೀಡಬೇಕೆಂದು ತಹಶೀಲ್ದಾರ್ ಗೋವಿಂದರಾಜು ಮನವಿ ಮಾಡಿದ್ದಾರೆ. ಇಲ್ಲಿನ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುವ ಸಲುವಾಗಿ ಕಾರ್ಮಿಕರ ಸಮೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದು, ಈ ಹಿನ್ನೆಲೆ ತಾಲೂಕಿನಾದ್ಯಂತ ಸಮೀಕ್ಷೆ ನಡೆಸಲಾಗುವದು ಎಂದು ತಹಶೀಲ್ದಾರ್ ತಿಳಿಸಿದರು.

ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿ.ಡಿ.ಓ., ಗ್ರಾಮಲೆಕ್ಕಿಗ, ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆ, ಶಾಲಾ ಶಿಕ್ಷಕರು, ಪೊಲೀಸ್ ಸಿಬ್ಬಂದಿ, ಐ.ಟಿ.ಡಿ.ಪಿ. ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಸರ್ವೆ ಕಾರ್ಯದಲ್ಲಿ ಭಾಗವಹಿಸಬೇಕಿದೆ. ಇಲಾಖೆಯ ಹಿರಿಯ ಅಧಿಕಾರಿಗಳು ಸಿಬ್ಬಂದಿಗಳನ್ನು ನೇಮಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ಬಡವರಿಗೆ ಸರ್ಕಾರದ ಸೌಲಭ್ಯಗಳನ್ನು ನಿಗದಿತ ಅವಧಿಯಲ್ಲಿ ತಲಪಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳು ಶ್ರಮಿಸಬೇಕು. ಲೈನ್‍ಮನೆಯಲ್ಲಿರುವ ನಿವಾಸಿಗಳ ಸಂಖ್ಯೆ, ಗರ್ಭಿಣಿಯರು, ಮಕ್ಕಳು, ಅವರಿಗೆ ಸಿಗುತ್ತಿರುವ ಸೌಲಭ್ಯ, ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳು, ಕನಿಷ್ಟ ವೇತನದ ಮಾಹಿತಿ, ಬಾಲ ಕಾರ್ಮಿಕರ ಮಾಹಿತಿ, ದೇಶ, ರಾಜ್ಯ, ಹಾಗೂ ಹೊರಜಿಲ್ಲೆಯ ಕಾರ್ಮಿಕರ ಮಾಹಿತಿ, ವಲಸೆ, ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿಯನ್ನು ಪಡೆಯಬೇಕಿದೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶೇಖರ್ ತಿಳಿಸಿದರು.