ಕುಶಾಲನಗರ, ಜು. 4: ದುಬಾರೆ ಸಾಕಾನೆ ಶಿಬಿರ ಬಳಿ ಕಳೆದ ಕೆಲವು ವರ್ಷಗಳಿಂದ ಕಾವೇರಿ ನದಿಯಲ್ಲಿ ನಡೆಯುತ್ತಿದ್ದ ರ್ಯಾಫ್ಟಿಂಗ್ ಕ್ರೀಡೆಗೆ ಮತ್ತೆ ಇಂದು ಚಾಲನೆ ದೊರೆಯಲಿದ್ದು, ರ್ಯಾಫ್ಟಿಂಗ್ ಮಾಲೀಕರು ಮತ್ತು ಸಿಬ್ಬಂದಿಗಳು ಪೂರ್ವಸಿದ್ಧತೆಯಲ್ಲಿ ತೊಡಗಿರುವದು ಕಂಡುಬಂದಿದೆ. ರಿವರ್ ರ್ಯಾಫ್ಟಿಂಗ್ ನಿರ್ವಹಣಾ ಸಮಿತಿಯ 5 ಮಂದಿಗೆ ತಾ. 5 ರಿಂದ (ಇಂದಿನಿಂದ) ಕಾವೇರಿ ನದಿಯಲ್ಲಿ ರ್ಯಾಫ್ಟಿಂಗ್ ಕ್ರೀಡೆ ನಡೆಸಲು ಅನುಮತಿ ನೀಡಿದೆ. 8 ಮಂದಿ ರ್ಯಾಫ್ಟಿಂಗ್ ನಡೆಸಲು ಅರ್ಜಿ ಸಲ್ಲಿಸಿದ್ದು, 3 ಅರ್ಜಿಗಳು ತಿರಸ್ಕøತಗೊಂಡಿವೆ. ಇನ್ನುಳಿದಂತೆ 12 ಅರ್ಜಿಗಳು ಪರಿಶೀಲನೆಯಲ್ಲಿದ್ದು ಸದ್ಯದಲ್ಲಿಯೇ ಸಮಿತಿ ನಿಯಮದನ್ವಯ ಹೆಚ್ಚುವರಿ ಅರ್ಜಿದಾರರಿಗೂ ರ್ಯಾಫ್ಟಿಂಗ್ ನಡೆಸಲು ಅನುಮತಿ ನೀಡಲಿದೆ. ಈ ನಿಟ್ಟಿನಲ್ಲಿ ಸ್ಮಶಾನ ಸದೃಶವಾಗಿದ್ದ ವಿಶ್ವವಿಖ್ಯಾತ ದುಬಾರೆ ಪ್ರವಾಸಿ ಕೇಂದ್ರಕ್ಕೆ ಮತ್ತೆ ಕಳೆ ಬರುವಂತಾಗಿದೆ.2018 ರ ಜನವರಿಯಿಂದ ರದ್ದುಗೊಂಡಿದ್ದ ದುಬಾರೆ ರಿವರ್ ರ್ಯಾಫ್ಟಿಂಗ್ ನಡೆಸಲು 16 ತಿಂಗಳುಗಳ ಬಳಿಕ ಜಿಲ್ಲಾಡಳಿತ ಮತ್ತೆ ಷರತ್ತುಬದ್ಧ ಅನುಮತಿ ಕಲ್ಪಿಸಿದೆ. ಕೊಡಗು ಜಿಲ್ಲೆಯ ಮಹತ್ವದ ಪ್ರವಾಸಿ ತಾಣವಾದ ದುಬಾರೆಯಲ್ಲಿ ಕೆಲವು ಅಹಿತಕರ ಘಟನೆ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ರ್ಯಾಫ್ಟಿಂಗ್ ಕ್ರೀಡೆ ರದ್ದುಗೊಳಿಸಿದ್ದರು.

ಪ್ರಸಕ್ತ ಕೊಡಗು ರಿವರ್ ರ್ಯಾಫ್ಟಿಂಗ್ ನಿರ್ವಹಣಾ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು ರಿವರ್ ರ್ಯಾಫ್ಟಿಂಗ್ ನಡೆಸಲು ಕೆಲವು ಷರತ್ತುಗಳನ್ನು ಹಾಕಿದೆ. ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ದಾಖಲೆಗಳನ್ನು ಪಡೆದು ನಂತರ ಉಳಿದ ಹಲವು ಇಲಾಖೆಗಳಿಂದ ತಾಂತ್ರಿಕ ನಿರಾಕ್ಷೇಪಣಾ ಪತ್ರ ಪಡೆಯಬೇಕಾಗಿದೆ.

ರ್ಯಾಫ್ಟರ್ ಮಾಲೀಕರಿಗೆ ತಲಾ 2 ರ್ಯಾಫ್ಟರ್‍ನಂತೆ ದುಬಾರೆ ಕೇಂದ್ರ ಸ್ಥಳದಿಂದ 7 ಕಿಮೀ ಅಂತರ ತನಕ ಕಾವೇರಿ ನದಿಯಲ್ಲಿ ನಿಗದಿಯಾದಂತೆ ಇಂದಿನಿಂದ 10 ರ್ಯಾಫ್ಟರ್‍ಗಳು ಈ ಸಾಲಿನಿಂದ ಕಾರ್ಯನಿರ್ವಹಿಸಲಿದೆ ಎಂದು ದುಬಾರೆ ರ್ಯಾಫ್ಟಿಂಗ್ ಅಸೋಸಿಯೇಷನ್ ಪ್ರಮುಖ ಸಿ.ಎಲ್.ವಿಶ್ವ ಮಾಹಿತಿ ನೀಡಿದ್ದಾರೆ. ಬೆಳಗ್ಗೆ ಪೂಜೆ

(ಮೊದಲ ಪುಟದಿಂದ) ಸಲ್ಲಿಸುವದರೊಂದಿಗೆ 10 ಗಂಟೆಯಿಂದ ರ್ಯಾಫ್ಟಿಂಗ್ ಕ್ರೀಡೆಗೆ ಚಾಲನೆ ದೊರೆಯಲಿದೆ ಎಂದಿದ್ದಾರೆ.

ರ್ಯಾಫ್ಟಿಂಗ್ ಪ್ರಾರಂಭಗೊಳ್ಳುವ ಸ್ಥಳ ಮತ್ತು ನಿಗದಿತ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಯೊಂದಿಗೆ ಪ್ರವಾಸಿಗರಿಗೆ ಮೂಲಭೂತ ವ್ಯವಸ್ಥೆ ಕಲ್ಪಿಸಲು ನಿರ್ವಹಣಾ ಸಮಿತಿ ಅಧಿಕಾರಿಗಳಿಗೆ ಕೋರಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ದುಬಾರೆಯಲ್ಲಿ ಸುಮಾರು 150ಕ್ಕೂ ಅಧಿಕ ಸಿಬ್ಬಂದಿಗಳು ಈ ಹಿಂದೆ ರ್ಯಾಫ್ಟಿಂಗ್ ಕ್ರೀಡಾ ವ್ಯವಸ್ಥೆಯಲ್ಲಿ ತೊಡಗಿದ್ದು ಕಳೆದ 16 ತಿಂಗಳ ಕಾಲ ರ್ಯಾಫ್ಟಿಂಗ್ ರದ್ದುಗೊಂಡ ಕಾರಣ ಯಾವದೇ ಕೆಲಸವಿಲ್ಲದೆ ಜೀವನಕ್ಕೆ ಪರದಾಡುವಂತಹ ಸ್ಥಿತಿ ಸೃಷ್ಟಿಯಾಗಿತ್ತು. ಅಲ್ಲದೆ ಕೇಂದ್ರದಲ್ಲಿದ್ದ ಹೊಟೇಲ್ ಮತ್ತಿತರ ಉದ್ಯಮಗಳ 100ಕ್ಕೂ ಅಧಿಕ ಸಿಬ್ಬಂದಿಗಳು ಬೀದಿ ಪಾಲಾಗಿದ್ದರು.

ಜಿಲ್ಲಾಡಳಿತದ ಕ್ರಮದಿಂದ ಸಿಬ್ಬಂದಿಗಳು ಹಾಗೂ ರ್ಯಾಫ್ಟರ್ ಮಾಲೀಕರ ಮುಖದಲ್ಲಿ ಮಂದಹಾಸ ಮೂಡಿರುವದು ಕಂಡುಬಂದಿದೆ. ಒಂದು ವರ್ಷಕ್ಕೂ ಅಧಿಕ ಅವಧಿಯಲ್ಲಿ ದುಬಾರೆ ಪ್ರವಾಸಿ ಕೇಂದ್ರದಲ್ಲಿ ರ್ಯಾಫ್ಟಿಂಗ್ ಕ್ರೀಡೆ ಇಲ್ಲದ ಕಾರಣ ಇದರ ಪರಿಣಾಮ ಇಡೀ ಜಿಲ್ಲೆಯ ಪ್ರವಾಸೋದ್ಯಮದ ಮೇಲೆ ಬೀರಿತ್ತು ಎಂದರೆ ತಪ್ಪಾಗಲಾರದು. ಈ ನಡುವೆ ದುಬಾರೆ ಸಾಕಾನೆ ಶಿಬಿರಕ್ಕೆ ತೆರಳಲು ಕಲ್ಪಿಸಿದ್ದ ಖಾಸಗಿ ಬೋಟ್‍ಗಳನ್ನು ಕೂಡ ರದ್ದುಗೊಳಿಸಲಾಗಿತ್ತು. ಅರಣ್ಯ ಇಲಾಖೆಗೆ ಸೇರಿದ ಬೋಟ್‍ಗಳ ಮೂಲಕ ಪ್ರಯಾಣಿಕರನ್ನು ಶಿಬಿರಕ್ಕೆ ಕರೆದೊಯ್ಯಲು ಕ್ರಮಕೈಗೊಳ್ಳಲಾಗಿತ್ತು.

ನಂಜರಾಯಪಟ್ಟಣ ಕಡೆಯಿಂದ ಸಾಕಾನೆ ಶಿಬಿರಕ್ಕೆ ತೆರಳಲು ತೂಗುಸೇತುವೆ ನಿರ್ಮಾಣಗೊಂಡಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಯೊಂದಿಗೆ ಕಾವೇರಿ ನದಿಯ ದಂಡೆ ಮಣ್ಣು ಸವಕಳಿ ಕೂಡ ತಪ್ಪಿಸಬಹುದು ಎನ್ನುತ್ತಾರೆ ಸ್ಥಳೀಯ ಉದ್ಯಮಿ ಕೆ.ಎಸ್. ರತೀಶ್. ಸಾಕಾನೆ ಶಿಬಿರದ ಒತ್ತಿನಲ್ಲಿ ಈಗಾಗಲೆ ಅರಣ್ಯ ಇಲಾಖೆ ನದಿ ತಟದಲ್ಲಿ ತಡೆಗೋಡೆ ನಿರ್ಮಿಸಿದೆ. ಆದರೆ ನಂಜರಾಯಪಟ್ಟಣ ಕಡೆಯ ಬದಿಯಲ್ಲಿ ಬೋಟ್‍ಗಳು ಸಾಗಿ ನೀರಿನ ಸೆಳೆತಕ್ಕೆ ಸುಮಾರು 10 ಮೀ.ಗೂ ಉದ್ದದ ನದಿ ದಡ ನೀರು ಪಾಲಾಗಿದೆ. ಹಲವು ಮರಗಳ ಬೇರು ಕಿತ್ತು ಬಂದಿದ್ದು ಅಪಾಯದ ಮುನ್ಸೂಚನೆ ಎದುರಾಗಿದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ತಡೆಗೋಡೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ದುಬಾರೆ ಸಾಕಾನೆ ಶಿಬಿರಕ್ಕೆ ಸಂಪರ್ಕ ಕಲ್ಪಿಸುವ ನಂಜರಾಯಪಟ್ಟಣದಿಂದ ಸಾಗುವ 1.2 ಕಿಮೀ ಉದ್ದದ ರಸ್ತೆ ಈಗಾಗಲೆ ಸುಮಾರು ರೂ. 1 ಕೋಟಿ ವೆಚ್ಚದಲ್ಲಿ ಕಾಂಕ್ರೀಟಿಕರಣಗೊಂಡಿದ್ದು ಈ ರಸ್ತೆಯ ಕೆಲವೆಡೆ ಅಗಲ ಕಿರಿದಾಗಿದೆ ಎನ್ನುವ ದೂರುಗಳು ವಾಹನ ಚಾಲಕರಿಂದ ಬಂದಿದೆ. ಇಂತಹ ಸ್ಥಳಗಳನ್ನು ಗುರುತಿಸಿ ರಸ್ತೆಯ ಅಗಲೀಕರಣ ಮಾಡಬೇಕಾಗಿದೆ ಎಂದು ಚಾಲಕ ಬಿ.ಜೆ. ಅಣ್ಣಯ್ಯ ಸ್ಥಳಕ್ಕೆ ತೆರಳಿದ ಶಕ್ತಿ ಮೂಲಕ ಕೋರಿಕೊಂಡಿದ್ದಾರೆ.

ವಾರಾಂತ್ಯದಲ್ಲಿ ಸಾವಿರಾರು ಪ್ರವಾಸಿಗರು ದುಬಾರೆ ಪ್ರವಾಸಿ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದು, ಈ ಪ್ರದೇಶದಲ್ಲಿ ಭದ್ರತೆಯ ನಿಟ್ಟಿನಲ್ಲಿ ಪೊಲೀಸ್ ಹೊರ ಠಾಣೆಯೊಂದನ್ನು ತಾತ್ಕಾಲಿಕವಾಗಿ ನಿರ್ಮಿಸಲು ಪೊಲೀಸ್ ಇಲಾಖೆ ಈ ಹಿಂದೆಯೇ ನಿರ್ಧಾರ ಕೈಗೊಂಡಿತ್ತು. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪರಿಶೀಲಿಸಿ ಕ್ರಮಕೈಗೊಳ್ಳಬೇಕಾಗಿದೆ ಎಂದು ಸ್ಥಳೀಯ ನಿವಾಸಿ ಪರ್ಲಕೋಟಿ ಮೋಹನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ವ್ಯವಸ್ಥೆಗಳ ನಡುವೆ ದುಬಾರೆ ಸಾಕಾನೆ ಶಿಬಿರ ನಿರ್ಬಂಧಿತ ಪ್ರದೇಶವೆಂದು ಘೋಷಿತವಾಗಿದ್ದರೂ ಪ್ರವಾಸಿಗರು ದಿನನಿತ್ಯ ಸಾಕಾನೆಗಳ ಚಟುವಟಿಕೆ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಬರುವದು ವಾಡಿಕೆಯಾಗಿದೆ. ಇನ್ನೊಂದೆಡೆ ದುಬಾರೆ ಪ್ರವಾಸಿ ಕೇಂದ್ರ ಕೂಡ ಪ್ರವಾಸೋದ್ಯಮ ಇಲಾಖೆಯಿಂದ ಅಧಿಕೃತ ಪ್ರವಾಸಿ ಕೇಂದ್ರವೆಂದು ಘೋಷಣೆಯಾಗದಿರುವದು ಕೂಡ ಎಲ್ಲರಿಗೂ ತಿಳಿದ ವಿಷಯವಾಗಿದ್ದು, ಈ ಕೇಂದ್ರವನ್ನು ಅಧಿಕೃತ ಪ್ರವಾಸಿ ಕೇಂದ್ರವನ್ನಾಗಿ ಪ್ರಕಟಿಸುವದರೊಂದಿಗೆ ಇಲಾಖೆ ಮೂಲಕ ಕೇಂದ್ರವನ್ನು ಅಭಿವೃದ್ಧಿಗೊಳಿಸಿ ಮೇಲ್ದರ್ಜೆಗೆ ಏರಿಸಲು ಕೂಡ ಪ್ರವಾಸೋದ್ಯಮ ಇಲಾಖೆ ಪ್ರಮುಖ ಆದ್ಯತೆ ನೀಡಬೇಕಾಗಿದೆ.