ಮಡಿಕೇರಿ, ಜು. 4: ಹೋಮ್ ಮೇಡ್ ವೈನ್‍ಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದು, ವೈನ್ ತಯಾರಕರು ಗುಣಮಟ್ಟವನ್ನು ಕಾಯ್ದುಕೊಳ್ಳಬೇಕೆಂದು ಕೊಡಗು ಹೋಮ್ ಮೇಡ್ ವೈನ್ ಮಾರಾಟಗಾರರ ಮತ್ತು ತಯಾರಕರ ಸಂಘದ ಅಧ್ಯಕ್ಷೆ ಮಿಲನ್ ಮುತ್ತಣ್ಣ ಸಲಹೆ ನೀಡಿದ್ದಾರೆ.
ನಗರದ ಬಾಲಭವನ ಸಭಾಂಗಣದಲ್ಲಿ ನಡೆದ ಸಂಘದ ವಿಶೇಷ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು; ವೈನ್ ಮಾರಾಟಗಾರರು ಹಾಗೂ ತಯಾರಕರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು.
ಕೊಡಗು ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹೋಮ್ ಮೇಡ್ ವೈನ್‍ಗೂ ಬೇಡಿಕೆ ಹೆಚ್ಚಿದೆ. ಇದಕ್ಕೆ ಉತ್ತಮ ಗುಣಮಟ್ಟವೇ ಕಾರಣವಾಗಿದ್ದು, ಇನ್ನು ಮುಂದೆಯೂ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ತಿಳಿಸಿದರು.
ಸದಸ್ಯತ್ವ ಪಡೆಯದೆ ಇರುವವರು ಸದಸ್ಯತ್ವ ಪಡೆಯುವಂತೆ ಮತ್ತು ಸದಸ್ಯತ್ವ ಹೊಂದಿರುವವರು ನವೀಕರಣಗೊಳಿಸಿಕೊಳ್ಳುವಂತೆ ಕಾರ್ಯದರ್ಶಿ ಟಿ.ಕೆ. ಸುಮೇಶ್ ಮನವಿ ಮಾಡಿದರು.
ಕಳಪೆ ಗುಣಮಟ್ಟದ ವೈನ್ ತಯಾರಿಕೆ ಅಥವಾ ಮಾರಾಟ ಮಾಡುವದು ಕಂಡು ಬಂದಲ್ಲಿ ಸಂಬಂಧಿಸಿದ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಲು ಸಭೆ ನಿರ್ಧರಿಸಿತು.
ಸಂಘದ ಪದಾಧಿಕಾರಿಗಳಾದ ಪೂವಮ್ಮ, ಸಂಗೀತ, ಲತಾ, ಜ್ಯೋತಿ, ಸೂರಜ್ ಮತ್ತಿತರರು ಸಭೆಯಲ್ಲಿ ಹಾಜರಿದ್ದರು. ಸಂಘದ ಸದಸ್ಯತ್ವವನ್ನು ಪಡೆಯುವವರು ಮೊ. 94482 65997, 94484 48436 ನ್ನು ಸಂಪರ್ಕಿಸಬಹುದು.