ಮಡಿಕೇರಿ, ಜು. 4: ಪ್ರಸಕ್ತ ಸಾಲಿನ ಮುಂಗಾರು ಅವಧಿಯ ಆಧ್ರ್ರಾ ಮಳೆಯು ತಾ. 5ರಂದು (ಇಂದು) ಕೊನೆಗೊಂಡರೂ; ಕೊಡಗಿನಲ್ಲಿ ಮುಂಗಾರು ಕ್ಷೀಣಗೊಂಡು, ಕಾವೇರಿಯ ಉಗಮ ಸ್ಥಳ ತಲಕಾವೇರಿ ವ್ಯಾಪ್ತಿಯಲ್ಲಿ 70 ಇಂಚು ಮಳೆ ಹಿನ್ನಡೆ ಗೋಚರಿಸಿದೆ. ಕಳೆದ ವರ್ಷ ಈ ವೇಳೆಗೆ ಜೀವನದಿಯ ಉಗಮ ಸ್ಥಳ ಸುತ್ತಮುತ್ತ ಸರಾಸರಿ 115 ಇಂಚು ಮಳೆ ದಾಖಲಾಗಿತ್ತು.ಪ್ರಸಕ್ತ ಅವಧಿಯಲ್ಲಿ ಇದುವರೆಗೆ ಕೇವಲ 45 ಇಂಚು ಮಳೆಯಾಗಿದೆ. ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾಹಿತಿ ನೀಡಿದ ತಲಕಾವೇರಿಯ ಆನಂದತೀರ್ಥ ಸ್ವಾಮೀಜಿ, ಕಳೆದ ವರ್ಷ ಎದುರಾಗಿದ್ದ ಅತಿವೃಷ್ಟಿ ಹಾಗೂ ಈ ಸಾಲಿನ ಅನಾವೃಷ್ಟಿ ಮುನ್ಸೂಚನೆ (ಮೊದಲ ಪುಟದಿಂದ) ಹಿಂದೆಂದೂ ಗೋಚರಿಸಿರಲಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ.ಪ್ರಸಕ್ತ ದಕ್ಷಿಣ ಕೊಡಗಿನ ಶ್ರೀಮಂಗಲ ಹೋಬಳಿಯಲ್ಲಿ ಮಾತ್ರ ಇದುವರೆಗೆ ಆಶಾದಾಯಕ ಮುಂಗಾರು ಕಾಣಿಸಿಕೊಂಡಿದ್ದು, ಆಧ್ರ್ರಾ ಮಳೆಯು ತನ್ನ ಕೊನೆಯ ದಿನಗಳಲ್ಲಿ ಬಿರುನಾಣಿ ಸುತ್ತಮುತ್ತ ಉತ್ತಮವಾಗಿ ಸುರಿಯತೊಡಗಿದೆ. ಇಂದು ಮಡಿಕೇರಿಯಲ್ಲಿ ಮಧ್ಯಾಹ್ನದ ಸುಮಾರಿಗೆ ಉತ್ತಮ ಮಳೆಯಾಗಿದೆ. ಉಳಿದಂತೆ ಜಿಲ್ಲೆಯ ಬಹುತೇಕ ಕಡೆ ಎಂದಿನಂತೆ ಪಿರಿಪಿರಿ ತುಂತುರು ಮಳೆ ಬಿದ್ದಿದೆ.
ಬಿರುನಾಣಿ - ಹುದಿಕೇರಿ ಶ್ರೀಮಂಗಲ: ಬಿರುನಾಣಿ ಹಾಗೂ ಹುದಿಕೇರಿ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಯಲ್ಲಿ ಭಾರಿ ಮಳೆಯಾಗಿದೆ. ಈ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಮುಂಗಾರು ಮಳೆಯ ಬಿರುಸು ಕಾಣಿಸಿಕೊಂಡಿದೆ. ಬಿರುನಾಣಿ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಯಲ್ಲಿ 4.05 ಇಂಚು ಮಳೆ ಸುರಿದಿದೆ. ಶ್ರೀಮಂಗಲ, ಹುದಿಕೇರಿ, ಟಿ-ಶೆಟ್ಟಿಗೇರಿ, ಬಿ-ಶೆಟ್ಟಿಗೇರಿ ವ್ಯಾಪ್ತಿಯಲ್ಲಿಯೂ ಭಾರಿ ಮಳೆಯಾಗಿದೆ. ಬುಧವಾರ ರಾತ್ರಿ ಈ ವ್ಯಾಪ್ತಿಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ.
ಈ ವ್ಯಾಪ್ತಿಯ ಭತ್ತದ ಗದ್ದೆಗಳಲ್ಲಿ ನೀರು ತುಂಬಿದ್ದು, ಕೃಷಿ ಚಟುವಟಿಕೆಗೆ ಪೂರಕವಾಗಿದೆ. ತೀವ್ರ ಮಳೆಯಿಂದ ಹುದಿಕೇರಿ, ಬಿರುನಾಣಿಗೆ ಸಂಪರ್ಕ ಕಲ್ಪಿಸುವ ನೂತನ ರಸ್ತೆಯ ನಡುವೆ ಕಕ್ಕಟ್ಟ್‍ಹೊಳೆ ನದಿ ಸೇತುವೆಯ ಬದಿ ಮಣ್ಣು ಜಾರಿ ಗುಂಡಿ ಬಿದ್ದಿದೆ.
ಹಾರಂಗಿ 40 ಅಡಿ ಕಡಿಮೆ: ಪ್ರತಿ ವರ್ಷ ಈ ಅವಧಿಗೆ ಮೈದುಂಬಿಕೊಳ್ಳುತ್ತಿದ್ದ ಹಾರಂಗಿ ಜಲಾಶಯದಲ್ಲಿ ತನ್ನ ಗರಿಷ್ಟ 2859 ಅಡಿ ನೀರಿನ ಮಟ್ಟಕ್ಕಿಂತ ಈಗ ಕೇವಲ 2809.37 ಅಡಿ ನೀರು ಸಂಗ್ರಹಗೊಂಡಿದೆ. ಕಳೆದ ವರ್ಷ ಈ ಅವಧಿಗೆ 2850.27 ಅಡಿ ನೀರು ಶೇಖರಣೆಗೊಂಡಿದ್ದು, ಪ್ರಸಕ್ತ 40.9 ಅಡಿ ಕಡಿಮೆ ಕಂಡುಬಂದಿದೆ.
ಮಳೆ ವಿವರ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷಾರಂಭದಿಂದ ಇಂದಿನ ತನಕ 17.76 ಇಂಚು ಸರಾಸರಿ ಮಳೆಯಾಗಿದೆ. ಕಳೆದ ವರ್ಷ ಈ ವೇಳೆಗೆ 53.98 ಇಂಚು ಮಳೆಯಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ಈ ಅವಧಿಯಲ್ಲಿ 21.55 ಇಂಚು ಹಾಗೂ ಹಿಂದಿನ ವರ್ಷ 72.94 ಇಂಚು ದಾಖಲಾಗಿತ್ತು. ಸೋಮವಾರಪೇಟೆ ತಾಲೂಕಿನಲ್ಲಿ ಪ್ರಸಕ್ತ 10.52 ಇಂಚು ಮಳೆಯಾಗಿದೆ. ಕಳೆದ ವರ್ಷ 30.26 ಇಂಚು ದಾಖಲಾಗಿತ್ತು.
ವೀರಾಜಪೇಟೆ ತಾಲೂಕಿಗೆ ಈ ಸಾಲಿನಲ್ಲಿ 21.23 ಇಂಚು ಮಳೆಯಾಗಿದ್ದು, ಕಳೆದ ಸಾಲಿನಲ್ಲಿ 49.23 ಇಂಚು ದಾಖಲಾಗಿತ್ತು. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ಅತ್ಯಲ್ಪ ಮಳೆಯೊಂದಿಗೆ ತಲಕಾವೇರಿ ಹಾಗೂ ದಕ್ಷಿಣ ಕೊಡಗಿನ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ.
ಲಕ್ಷ್ಮಣತೀರ್ಥ ಏರಿಕೆ
ಗೋಣಿಕೊಪ್ಪ ವರದಿ: ಸುತ್ತಮುತ್ತ ಮುಂಗಾರು ಚೇತರಿಕೆ ಕಂಡಿದ್ದು, ಕಾನೂರು ಮೂಲಕ ಹರಿಯುವ ಲಕ್ಷ್ಮಣತೀರ್ಥ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ.
ಕುರ್ಚಿ, ನಾಲ್ಕೇರಿ, ಕಾಕೂರು, ಕುಮಟೂರು ಭಾಗಗಳಲ್ಲಿ ಹೆಚ್ಚು ಮಳೆ ಬಿದ್ದ ಕಾರಣ ಲಕ್ಷ್ಮಣತೀರ್ಥ ನದಿ ನೀರಿನ ಮಟ್ಟ ಹೆಚ್ಚಾಗಿದೆ. ಕಾನೂರು ಮೂಲಕ ಹರಿಯುವ ಲಕ್ಷ್ಮಣತೀರ್ಥ ನದಿಯು ಅರ್ಧ ಭಾಗದಷ್ಟು ನೀರು ಬಂದಿದೆ. ಇದರಿಂದ ಸ್ಥಳೀಯರಲ್ಲಿ ಸಂತೋಷ ಕಾಣುವಂತಾಗಿದೆ. ಗೋಣಿಕೊಪ್ಪ, ಬಾಳೆಲೆ, ಪೊನ್ನಂಪೇಟೆ, ಕುಂದ, ಹಾತೂರು, ಪಾಲಿಬೆಟ್ಟ, ಅಮ್ಮತ್ತಿ, ಬಾಳೆಲೆ, ತಿತಿಮತಿ ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ.