ಮಡಿಕೇರಿ, ಜು. 4: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಖಾಸಗಿ ಬಸ್‍ಗಳ ದೈನಂದಿನ ಸಂಚಾರ ವ್ಯವಸ್ಥೆಯ ಮಾರ್ಗಗಳನ್ನು ಇಂದು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಖುದ್ದು ಪರಿಶೀಲನೆ ನಡೆಸಿದರು. ಜನರಲ್ ತಿಮ್ಮಯ್ಯ ವೃತ್ತ ಹಾಗೂ ಮೇ. ಮಂಗೇರಿರ ಮುತ್ತಣ್ಣ ವೃತ್ತ ಹಾದು ರಾಜಾಸೀಟ್ ಮಾರ್ಗವಾಗಿ ಹೊಸಬಡಾವಣೆ ಮುಖಾಂತರ ನೂತನ ಬಸ್ ನಿಲ್ದಾಣಕ್ಕೆ ತೆರಳುವ ರಸ್ತೆಗಳನ್ನು ಪರಿಶೀಲಿಸಲಾಯಿತು.ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರುಗಳು ಜಂಟಿ ಪರಿಶೀಲಿಸಿ, ಬಸ್‍ಗಳ ಸರಾಗ ಓಡಾಟ ಕುರಿತು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು. ನಗರದ ಪತ್ರಿಕಾಭವನ ಬಳಿ ಬಸ್ ಸಂಚಾರಕ್ಕೆ ಉಂಟಾಗಿರುವ ಕಿಷ್ಕಿಂದೆ ಮಾರ್ಗ ಸಹಿತ (ಮೊದಲ ಪುಟದಿಂದ) ಕಾಲೇಜು ರಸ್ತೆಯ ಭಾರತೀಯ ಸ್ಟೇಟ್ ಬ್ಯಾಂಕ್‍ನಿಂದ ರೇಸ್ ಕೋರ್ಸ್ ರಸ್ತೆ ತಿರುವಿನ ತನಕವೂ ವೀಕ್ಷಣೆ ನಡೆಸಿದರು.ಈ ವೇಳೆ ಜಿಲ್ಲಾಧಿಕಾರಿ ಬಳಿ ಅಭಿಪ್ರಾಯ ಬಯಸಿದಾಗ, ನಗರದಲ್ಲಿ ಖಾಸಗಿ ಬಸ್‍ಗಳ ಸಹಿತ ಇತರ ವಾಹನಗಳ ಸಂಚಾರ ಸುರಕ್ಷಾ ಕ್ರಮಗಳ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಜತೆಗೂಡಿ ಪರಿಶೀಲಿಸಿದ್ದು, ಯಾವ ಯಾವ ಕಡೆಗಳಲ್ಲಿ ಏನೇನೂ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಹಿತಿ ಪಡೆದಿರುವದಾಗಿ ‘ಶಕ್ತಿ’ಗೆ ತಿಳಿಸಿದರು.

ಅಲ್ಲದೆ ನೂತನ ಬಸ್ ನಿಲ್ದಾಣಕ್ಕೆ ಬಸ್‍ಗಳ ಆಗಮನ ಮತ್ತು ನಿರ್ಗಮನ ಕುರಿತು ಮಾಹಿತಿ ಪಡೆದಿದ್ದು, ತಾ. 6 ರಂದು (ನಾಳೆ) ಸಾರಿಗೆ ಪ್ರಾಧಿಕಾರ ಅಧಿಕಾರಿ ಸಹಿತ ಖಾಸಗಿ ಬಸ್ ಮಾಲೀಕರ ಸಭೆ ಕರೆದು ಅಗತ್ಯ ನಿರ್ಧಾರ ತೆಗೆದುಕೊಳ್ಳುವ ಇಂಗಿತ ವ್ಯಕ್ತಪಡಿಸಿದರು.

ಪೊಲೀಸ್ ವರಿಷ್ಠಾಧಿಕಾರಿ ಬಳಿ ಮಾಹಿತಿ ಬಯಸಿದಾಗ, ಈಗಾಗಲೇ ಸಾಕಷ್ಟು ಬಾರಿ ಚರ್ಚಿಸಿದ್ದು, ಅಂತಿಮ ವ್ಯವಸ್ಥೆ ರೂಪಿಸುವ ದಿಸೆಯಲ್ಲಿ ಇಂದು ಜಿಲ್ಲಾಧಿಕಾರಿಗಳೊಂದಿಗೆ ಖುದ್ದು ಪರಿಶೀಲನೆ ಮಾಡಲಾಗಿದೆ ಎಂದರು. ಸಂಚಾರ ಮಾರ್ಗ ವೀಕ್ಷಣೆ ವೇಳೆ ನಗರಸಭಾ ಆಯುಕ್ತ ಎಂ.ಎಲ್. ರಮೇಶ್, ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಠಾಣಾಧಿಕಾರಿ ಷಣ್ಮುಖ ಮತ್ತಿತರರು ಹಾಜರಿದ್ದರು.