ಗೋಣಿಕೊಪ್ಪಲು, ಜು. 3: ಆಕೆ ಮಾತು ಬಾರದವಳು ತನ್ನ ಗಂಡನಿಂದ ಕಳೆದ ಏಳು ವರ್ಷದ ಹಿಂದೆ ದ.ಕೊಡಗಿನ ಗಡಿಭಾಗವಾದ ಕುಟ್ಟ ಸಮೀಪದ ಪೂಚೆಕಲ್ಲುವಿನಿಂದ ದೂರವಾಗಿ ತಮಿಳುನಾಡಿನತ್ತ ಮುಖ ಮಾಡಿದ್ದಳು.ಮಾತು ಬಾರದೆ, ಅಕ್ಷರ ಜ್ಞಾನವಿಲ್ಲದೆ ಊರೂರು ಅಲೆಯುತ್ತ ನಿತ್ಯ ಜೀವನ ಸಾಗಿಸುತ್ತ ಏಳೆಂಟು ವರ್ಷಗಳು ಕಳೆದದ್ದೆ ಆಕೆಗೆ ಅರಿವಿರಲಿಲ್ಲ. ಇತ್ತ ಈಕೆಯ ಸಂಬಂಧಿಕರು ಅನೇಕ ಕಡೆಗಳಲ್ಲಿ ಹುಡುಕಾಡಿದರೂ ಎಲ್ಲಿಯೂ ಈಕೆಯ ಇರುವಿಕೆಯ ಸುಳಿವು ಸಿಕ್ಕಿರಲಿಲ್ಲ.ಪೂಚೆ ಕಲ್ಲುವಿನ ನಿವಾಸಿ ಮನೋಜ್ ಕೈ ಹಿಡಿದಿದ್ದ ಈಕೆ ಮೂರು ಮಕ್ಕಳಿಗೆ ಜನ್ಮ ನೀಡಿದ್ದಳು. ಮೈಮೇಲೆ ಸುಟ್ಟ ಗಾಯಗಳಿಂದ ಕಲೆಯಾಗಿರುವದನ್ನೇ ನೆಪವಾಗಿಟ್ಟು ಕೊಂಡು ಪತಿ ದೂರವಾಗಿದ್ದ. ತನ್ನ ಮೈಮೇಲಿನ ಕಲೆಯನ್ನು ಮುಚ್ಚಿಕೊಳ್ಳಲು ಈಕೆ ದಿನ ನಿತ್ಯ ಶಾಲನ್ನು ಬಳಸುತ್ತಿದ್ದಳು. ಇದರಿಂದ ಈಕೆಯ ಪರಿಚಯ ಸಹಜವಾಗಿಯೇ ಎಲ್ಲರಿಗೂ ಅರಿವಿತ್ತು, ಆದರೆ ಮನಸ್ಸಿಗೆ ನೋವಾಗುತ್ತಿದ್ದಂತೆ ಮನೆ ಬಿಟ್ಟ ಇವಳು ಬಸ್ ಏರಿ ತಮಿಳು ನಾಡಿನತ್ತ ಪ್ರಯಾಣ ಬೆಳೆಸಿದಳು.

38ರ ಪ್ರಾಯದ ತಸ್ಲಿ ಗುರುತು ಪರಿಚಯವಿಲ್ಲದ ತಮಿಳುನಾಡಿನ ಈರೋಡ್‍ನಲ್ಲಿ ನೆಲೆ ಕಂಡು ಕೊಂಡಳು. ಏಳೆಂಟು ವರ್ಷಗಳು ತನಗರಿವಿಲ್ಲದಂತೆ ಕಳೆದುಹೋದವು. ಮುಂದೇನು ಎಂದು ಯೋಚಿಸಿ ಈರೋಡ್‍ನ ಬಸ್ ನಿಲ್ದಾಣ ಸಮೀಪದಲ್ಲಿ ಕಾಲಕಳೆಯುತ್ತಿದ್ದ ಈಕೆಯ ಪೂರ್ವಾಪರವನ್ನು ವಿಚಾರಿಸಿದ ಅಲ್ಲಿಯ ಸ್ಥಳೀಯರು, ಆಟೋ ಚಾಲಕರು (ಮೊದಲ ಪುಟದಿಂದ) ಒಂದಷ್ಟು ಹಣ ಸಂಗ್ರಹಿಸಿ ಈಕೆಯನ್ನು ಬಸ್ ಹತ್ತಿಸಿ ವೀರಾಜಪೇಟೆಯತ್ತ ಕಳುಹಿಸಿ ಕೊಟ್ಟಿದ್ದರು.

ಬಸ್‍ನಲ್ಲಿ ಪ್ರಯಾಣ ಆರಂಭಿಸಿದ ಆಕೆ ವೀರಾಜಪೇಟೆಗೆ ಟಿಕೇಟ್ ಪಡೆದಿದ್ದಳು.ರಾತ್ರಿ 10 ಗಂಟೆಗೆ ಗೋಣಿಕೊಪ್ಪಕ್ಕೆ ಬಸ್ ಆಗಮಿಸುತ್ತಿದ್ದಂತೆಯೇ ವೀರಾಜಪೇಟೆಯಲ್ಲಿ ಇಳಿಯಬೇಕಾದ ಈಕೆ ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಬಸ್ ಇಳಿದು ನಿಲ್ದಾಣದಲ್ಲಿ ಚಿಂತಿಸುತ್ತ್ತಾ ಕುಳಿತಿದ್ದಳು. ರಾತ್ರಿಯ ವೇಳೆ ಬೀಟ್‍ಗೆ ಆಗಮಿಸಿದ ಪೊಲೀಸ್ ಸಿಬ್ಬಂದಿ ಈಕೆಯನ್ನು ವಿಚಾರಿಸಿ ಠಾಣೆಗೆ ಕರೆದೊಯ್ದರು. ನಂತರ ಈಕೆಯ ವಿಚಾರ ವಿನಿಮಯ ನಡೆಸಿದರು.

ಮಾನವೀಯತೆ ತೋರಿದ ಪೊಲೀಸರು ನಡು ರಾತ್ರಿಯಲ್ಲಿ ಈಕೆಯ ವಾಸ ಸ್ಥಳ,ಸಂಬಂಧಿಕರ ಬಗ್ಗೆ ಮಾಹಿತಿ ಪಡೆಯುವ ಪ್ರಯತ್ನ ನಡೆಸಿದರು. ಈಕೆಗೆ ಮಾತು ಬಾರದ ಕಾರಣ ಸಮಸ್ಯೆ ಮತ್ತಷ್ಟು ಕಗ್ಗಂಟಾಗಿತ್ತು. ಮಹಿಳೆಗೆ ರಾತ್ರಿ ತಂಗುವ ವ್ಯವಸ್ಥೆಗಾಗಿ ಹುಡುಕಾಟ ನಡೆಸಿದಾಗ ಪೊಲೀಸರಿಗೆ ನೆನಪಾಗಿದ್ದೇ ಗೋಣಿಕೊಪ್ಪಲುವಿನ ಮಾರ್ಕೆಟ್‍ನಲ್ಲಿ ಚಪ್ಪಲಿ ವ್ಯಾಪಾರ ನಡೆಸುತ್ತಿರುವ ಅಬ್ದುಲ್ ಸಮ್ಮದ್. ಕೂಡಲೇ ಸಮ್ಮದ್‍ರನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು ಮಹಿಳೆಯ ವಾಸಕ್ಕೆ ಒಂದು ದಿನದ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು.

ತಡರಾತ್ರಿಯಲ್ಲಿಯೂ ಆ ಮಹಿಳೆಗೆ ರಕ್ಷಣೆ ಕೊಡುವ ವಿಚಾರದಲ್ಲಿ ಬೇಸರಿಸದ ಸಮ್ಮದ್ ಜಮಾತೆ ಇಸ್ಲಾಮಿ ಹಿಂದ್‍ನ ಅಧ್ಯಕ್ಷ ತನ್ವೀರ್ ಅಹಮ್ಮದ್‍ರವರಿಗೆ ಈ ವಿಷಯ ತಿಳಿಸಿದರು. ಒಂದು ದಿನದ ಮಟ್ಟಿಗೆ ವ್ಯವಸ್ಥೆ ಕಲ್ಪಿಸುವ ವಿಚಾರದಲ್ಲಿ ಹಿಂದು ಮುಂದು ನೋಡದ ತನ್ವೀರ್ ಅಹಮ್ಮದ್ ತನ್ನ ಪತ್ನಿಯನ್ನು ಠಾಣೆಗೆ ಬರಮಾಡಿಕೊಂಡು ಮಹಿಳೆಯನ್ನು ಪೊಲೀಸರ ಸಹಕಾರದಿಂದ ತನ್ನ ಮನೆಗೆ ಕರೆದೊಯ್ದು ಆತಿಥ್ಯ ನೀಡುವ ಮೂಲಕ ಮಾನವೀಯತೆ ಮೆರೆದರು. ಮುಂಜಾನೆ ಆಗುತ್ತಿದ್ದಂತೆ ಮಹಿಳೆಯ ಹುಡುಕಾಟಕ್ಕೆ ಅನುಕೂಲವಾಗಬಹುದೆಂದು ವ್ಯಾಟ್ಸಾಪ್ ಮೂಲಕ ಈಕೆಯ ಫೋಟೋವನ್ನು ಗ್ರೂಪ್‍ನಲ್ಲಿ ಶೇರ್ ಮಾಡುವ ಮೂಲಕ ಸಂಬಂಧಿಕರಿಗೆ ಸುದ್ದಿ ಮುಟ್ಟಿಸುವ ಪ್ರಯತ್ನ ನಡೆಸಿದರು.

ಗೋಣಿಕೊಪ್ಪ ಪೊಲೀಸ್ ಸಿಬ್ಬಂದಿ ನಾಗೇಶ್‍ರವರ ಮೊಬೈಲ್‍ಗೆ ಈ ಪೊಟೋ ಗ್ರೂಪ್‍ನಲ್ಲಿ ತಲಪುತ್ತಿದ್ದಂತೆಯೇ ಈ ಮೊದಲೇ ಕುಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ತವ್ಯದಲ್ಲಿದ್ದ ಸಂದರ್ಭ ಆ ಮಹಿಳೆಯ ಮುಖ ಪರಿಚಯವಿದ್ದ ಇವರು ಮಹಿಳೆಯನ್ನು ಮುಂಜಾನೆ ಭೇಟಿ ಮಾಡುತ್ತಿದ್ದಂತೆಯೇ ಆಕೆಯ ಮುಖದಲ್ಲಿ ಮಂದಹಾಸ ಮೂಡಿತ್ತು.ಮಾತು ಬಾರದ ಆಕೆ ಸಿಬ್ಬಂದಿಯೊಂದಿಗೆ ಮಾತನಾಡುವ ಪ್ರಯತ್ನ ನಡೆಸಿದಳು. ಕೂಡಲೇ ನಾಗೇಶ್ ಈಕೆಯ ವಾಸಸ್ಥಳದ ಬಗ್ಗೆ ಮಾಹಿತಿ ಪಡೆದು ಕುಟ್ಟ ಸಮೀಪದ ಪೂಚೆಕಲ್‍ನಲ್ಲಿ ವಾಸವಿದ್ದ ಈಕೆಯ ಪತಿ ಮನೋಜ್‍ನನ್ನು ಸಂಪರ್ಕಿಸಿದರು. ಮಹಿಳೆಯ ಬಗ್ಗೆ ಮಾಹಿತಿ ನೀಡುತ್ತಿದ್ದಂತೆಯೇ ಆಕೆಗೆ ನನಗೆ ಸಂಬಂಧವಿಲ್ಲ; ನನ್ನನ್ನು ತೊರೆದು ಏಳೆಂಟು ವರ್ಷಗಳು ಕಳೆದಿವೆ. ಮೂರು ಮಕ್ಕಳೊಂದಿಗೆ ನಾನು ವಾಸವಿದ್ದೇನೆ. ಆಕೆಗೆ ನೆಲೆ ಕೊಡಲು ಸಾಧ್ಯವಿಲ್ಲ ಎಂದು ಕಡ್ಡಿ ಮುರಿದ ರೀತಿಯಲ್ಲಿ ಮಾತನ್ನು ಮುಗಿಸಿದ್ದರು. ಸತತ ಪ್ರಯತ್ನ ನಡೆಸಿದರೂ ಪತಿ ತನ್ನ ಪತ್ನಿಯನ್ನು ಕರೆದುಕೊಂಡು ಹೋಗುವ ಮನಸ್ಸು ಮಾಡಲೇ ಇಲ್ಲ.

ಆದರೆ ನಾಗೇಶ್ ಸುಮ್ಮನೆ ಕೂರಲಿಲ್ಲ. ಪತಿ ಮನೋಜ್ ಸಹಕಾರದಿಂದ ಆಕೆಯ ಸಹೋದರಿ ಕೇರಳದ ಕಣ್ಣನೂರು ಸಮೀಪ ವಾಸವಿರುವ ರೀಟಾ ಎಂಬಾಕೆಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅಕ್ಕನ ಬಗ್ಗೆ ಮಾಹಿತಿ ಒದಗಿಸಿದರು. ಮೊಬೈಲ್ ಮೂಲಕ ಅಕ್ಕನ ಫೋಟೋವನ್ನು ತಂಗಿಯ ಮೊಬೈಲ್‍ಗೆ ಕಳುಹಿಸಿಕೊಡಲಾಯಿತು. ತನ್ನ ಸಹೋದರಿ ಸಿಕ್ಕಿದ ಖುಶಿಯಲ್ಲಿ ತಡಮಾಡದೆ ಕೇರಳದಿಂದ ಗೋಣಿಕೊಪ್ಪಕ್ಕೆ ಆಗಮಿಸಿ ತನ್ವೀರ್‍ರವರ ಮನೆಯಲ್ಲಿ ತಂಗಿದ್ದ ತನ್ನ ಅಕ್ಕ ತಸ್ಲಿಳನ್ನು ಕಂಡು ಅಪ್ಪಿಕೊಂಡು ಮುದ್ದಾಡಿದಳು.ನಿನ್ನ ರಕ್ಷಣೆಯ ಜವಾಬ್ದಾರಿ ನನ್ನದೆಂದು ಹೇಳುತ್ತ ಬಿಗಿದಪ್ಪಿದಳು ಆನಂದದ ಕಣ್ಣೀರ ಹನಿ ಇಬ್ಬರಲ್ಲೂ ತಮಗರಿಯದಂತೆ ಸುರಿಯಲಾರಂಬಿಸಿತು. ಉಳಿದವರು ಈ ದೃಶ್ಯವನ್ನು ಕಂಡು ಮರುಗಿದರು. ಸಧ್ಯ ಮಹಿಳೆಗೆ ಸಂಬಂಧಿಕರು ಕೊನೆಗೂ ಸಿಕ್ಕಿದರಲ್ಲಾ ಎಂದು ನಿಟ್ಟುಸಿರು ಬಿಟ್ಟರು. ನಂತರ ಪೊಲೀಸ್ ಠಾಣೆಗೆ ತೆರಳಿ ಮಾತು ಬಾರದ ತನ್ನ ಅಕ್ಕನನ್ನು ಜೋಪಾನವಾಗಿ ಕಾಪಾಡಿದ ಪೊಲೀಸರಿಗೆ ಹಾಗೂ ತನ್ವೀರ್, ಸಮ್ಮದ್ ಕುಟುಂಬಕ್ಕೂ ಕೃತಜ್ಞತೆ ಭಾವದಿಂದ ನಮಸ್ಕರಿಸಿ ಎಂಟು ವರ್ಷಗಳಿಂದ ಕಾಣೆಯಾಗಿದ್ದ ಸಹೋದರಿಯನ್ನು ಕರೆದುಕೊಂಡು ತಂಗಿ ರೀಟಾ ಕೇರಳದ ಮನೆಯತ್ತ ಪ್ರಯಾಣ ಬೆಳೆಸಿದರು. -ಹೆಚ್.ಕೆ.ಜಗದೀಶ್