ಕುಶಾಲನಗರ, ಜು. 3: ಕಳೆದ 1 ದಶಕದಿಂದ ನೆನೆಗುದಿಗೆ ಬಿದ್ದಿದ್ದ ಕುಶಾಲನಗರ ಖಾಸಗಿ ಬಸ್ ನಿಲ್ದಾಣವನ್ನು ಪ್ರಾಯೋಗಿಕವಾಗಿ ಪ್ರಯಾಣಿಕರ ಅನುಕೂಲಕ್ಕೆ ಕಲ್ಪಿಸಲಾಗಿದೆ. ಮಂಗಳವಾರ ಶಾಸಕರ ನೇತೃತ್ವದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ನಿರ್ಣಯ ಕೈಗೊಂಡಂತೆ ಖಾಸಗಿ ಬಸ್‍ಗಳು ಬುಧವಾರ ಬೆಳಿಗ್ಗೆಯಿಂದ ನೂತನ ನಿಲ್ದಾಣಕ್ಕೆ ಬಂದು ಪ್ರಯಾಣಿಕರನ್ನು ಒಯ್ಯಲು ಪ್ರಾರಂಭಿಸಿದೆ.ಸುಮಾರು 50 ರಿಂದ 60 ಖಾಸಗಿ ಬಸ್‍ಗಳು ಕುಶಾಲನಗರ ಪಟ್ಟಣದ ಮೂಲಕ ಜಿಲ್ಲೆಯ ವಿವಿಧೆಡೆಯ ಗ್ರಾಮೀಣ ಪ್ರದೇಶಗಳಿಗೆ ಸಾವಿರಾರು ಪ್ರಯಾಣಿಕರನ್ನು ಒಯ್ಯುತ್ತಿದ್ದು ಬಹುದಿನಗಳ ಸಮಸ್ಯೆಗೆ ಪರಿಹಾರ ದೊರಕಿದಂತಾಗಿದೆ. ಶಾಸಕರು ಮತ್ತು ಅಧಿಕಾರಿಗಳ ಸೂಚನೆಯಂತೆ ಬುಧವಾರ ಬೆಳಗ್ಗೆ 10 ಗಂಟೆಗೆ ಖಾಸಗಿ ಬಸ್‍ಗಳು ನೂತನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಬಸ್ ನಿಲ್ದಾಣದ ಸಂಪರ್ಕ ರಸ್ತೆಯ ವ್ಯಾಜ್ಯದ ಬಿಸಿ ಗರಿಗೆದರಿದ್ದು ಗೋಚರಿಸಿತು. ಜಾಗದ ಮಾಲೀಕ ವಿ.ಪಿ.ನಾಗೇಶ್ ಜೆಸಿಬಿ ಮೂಲಕ ಸಂಪರ್ಕ ರಸ್ತೆಯನ್ನು ಅಗೆದು ಬಸ್ ಸಂಚಾರಕ್ಕೆ ಅಡ್ಡಿಯುಂಟು ಮಾಡಿದ ಘಟನೆ ನಡೆಯಿತು. ಇದರಿಂದ ಬಸ್ ನಿಲ್ದಾಣದ ಒಳಭಾಗದಲ್ಲಿದ್ದ ಬಸ್‍ಗಳು ಹೊರಬರಲು ಅನಾನುಕೂಲ ಉಂಟಾದ ಹಿನ್ನೆಲೆಯಲ್ಲಿ ಬಸ್ ಮಾಲೀಕರು ಪ.ಪಂ. ಅಧಿಕಾರಿಗಳಿಗೆ ದೂರು ನೀಡಿದರು. ಮಾಹಿತಿ ತಿಳಿದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಪಂಚಾಯ್ತಿ ಮುಖ್ಯಾಧಿಕಾರಿ ಸುಜಯ್‍ಕುಮಾರ್‍ಗೆ ನಿರ್ದೇಶನ ನೀಡಿದ (ಮೊದಲ ಪುಟದಿಂದ) ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ಆಗಮಿಸಿ ಜೆಸಿಬಿ ಬಳಸಿ ಗುಂಡಿಯನ್ನು ಮುಚ್ಚಿ ಬಸ್‍ಗಳಿಗೆ ತೆರಳಲು ಅವಕಾಶ ಕಲ್ಪಿಸಿದರು.
ನಂತರ ಅಕ್ರಮವಾಗಿ ಗುಂಡಿ ತೆಗೆದ ಜೆಸಿಬಿಯನ್ನು ಪೊಲೀಸರು ವಶಕ್ಕೆ ಪಡೆದು ಕ್ರಮಕೈಗೊಂಡರು. ಜಾಗದ ಮಾಲೀಕರಾದ ವಿ.ಪಿ. ನಾಗೇಶ್ ಅವರ ಪ್ರಕಾರ ಅಯ್ಯಪ್ಪಸ್ವಾಮಿ ದೇವಸ್ಥಾನದ ರಸ್ತೆಯ ಬದಿಯಲ್ಲಿ ನಿರ್ಮಾಣಗೊಂಡ ಖಾಸಗಿ ಬಸ್ ನಿಲ್ದಾಣದ ಸಂಪರ್ಕ ರಸ್ತೆ ತಮ್ಮ ಒಡೆತನದಲ್ಲಿದ್ದು ಇದಕ್ಕೆ ಪರ್ಯಾಯವಾಗಿ ಗುಂಡೂರಾವ್ ಬಡಾವಣೆಯಲ್ಲಿ ಕಾಯ್ದಿರಿ Àಸಲಾಗಿರುವ ಜಮೀನಿನಲ್ಲಿ ಪರಿಹಾರವಾಗಿ ನಿವೇಶನ ನೀಡುವಂತೆ ಪ.ಪಂ. ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಇದುವರೆಗೆ ತನಗೆ ನ್ಯಾಯ ದೊರಕಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿ ದ್ದಾರೆ.
ಈ ಮಧ್ಯೆ ನೂತನ ಖಾಸಗಿ ಬಸ್ ನಿಲ್ದಾಣಕ್ಕೆ ಚಾಲನೆ ದೊರೆತಿರುವ ಬಗ್ಗೆ ಕೊಡಗು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಕಾರ್ಯದರ್ಶಿ ಹಾಗೂ ಬಸ್ ಮಾಲೀಕ ಬಿ. ಜನಾರ್ಧನ ಪ್ರಭು ಹಾಗೂ ಸಂಘದ ನಿರ್ದೇಶಕ ಜಯಂತ್, ಮಾಲೀಕರು ಗಳಾದ ಸುರೇಶ್, ಉದಯ್, ಎನ್.ಆರ್. ಗಣೇಶ್ ಸಂತಸ ವ್ಯಕ್ತಪಡಿಸಿದ್ದು, ಕಳೆದ ಹಲವು ವರ್ಷಗಳಿಂದ ಪ್ರಯಾಣಿಕರಿಗೆ ಮೂಲಭೂತ ಸೌಲಭ್ಯಗಳ ಕೊರತೆಯೊಂದಿಗೆ ಬಸ್ ಸಂಚಾರ ವ್ಯವಸ್ಥೆ ಉಂಟಾಗಿತ್ತು. ಇದೀಗ ಪ್ರಾಯೋಗಿಕವಾಗಿ ನೂತನ ನಿಲ್ದಾಣದಲ್ಲಿ ಖಾಸಗಿ ಬಸ್‍ಗಳ ನಿಲುಗಡೆಗೆ, ಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಅವರಿಗೆ ಮತ್ತು ಪ.ಪಂ. ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು.
ನೂತನ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅವಶ್ಯವಿರುವ ಎಲ್ಲಾ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಲು ಪ.ಪಂ. ಕ್ರಮಕೈಗೊಳ್ಳಲಿದೆ ಎಂದು ಪ.ಪಂ. ಮುಖ್ಯಾಧಿಕಾರಿ ಸುಜಯ್‍ಕುಮಾರ್ ತಿಳಿಸಿದ್ದಾರೆ. ನೀರು, ವಿದ್ಯುತ್ ಸಂಪರ್ಕ, ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನ, ಹೈಮಾಸ್ಟ್ ದೀಪ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲು ರೂ. 12 ಲಕ್ಷ ಅನುದಾನ ಮೀಸಲಿರಿಸಲಾಗಿದೆ ಎಂದು ತಿಳಿಸಿದರು.