ಮಡಿಕೇರಿ, ಜು. 3: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ಎಲ್ಲಾ ವರ್ಗಗಳು ಒಪ್ಪಿಕೊಂಡಿವೆ. ಅವರು ಎಲ್ಲಾ ವರ್ಗಗಳ ನಾಯಕ ಹಾಗೂ ಆದರ್ಶವಾಗಿದ್ದು, ಅವರನ್ನು ಒಂದು ವರ್ಗಕ್ಕೆ ಮಾತ್ರ ಸೀಮಿತಗೊಳಿಸದೆ; ಎಲ್ಲಾ ವರ್ಗಗಳ ನಾಯಕರಾಗಿರುವ ಅವರ ವಿಚಾರಧಾರೆಯನ್ನು ಅರಿತು ಸಮಾಜದ ಶ್ರೇಯೋಭಿವೃದ್ಧಿಗೆ ಒಟ್ಟಾಗಿ ಮುಂದಡಿ ಇಡಬೇಕಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ವತಿಯಿಂದ ಪತ್ರಿಕಾಭವನದಲ್ಲಿ ಏರ್ಪಡಿಸಲಾಗಿದ್ದ ನಗರಸಭಾ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡ ಗಣ್ಯರು ಅಭಿಪ್ರಾಯಪಟ್ಟರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಕ್ತಿ ದಿನಪತ್ರಿಕೆ ಸಂಪಾದಕ ಜಿ. ಚಿದ್ವಿಲಾಸ್ ಅವರು ಮಾತನಾಡಿ, ಪ್ರತಿಯೊಬ್ಬರು ಸ್ವಾರ್ಥ ಮನೋಭಾವ ವನ್ನು ಬದಿಗಿಟ್ಟು, ಸಾಮಾಜಿಕ ಕಳಕಳಿಯೊಂದಿಗೆ ಸಮಾಜಮುಖಿ ವ್ಯಕ್ತಿಗಳಾಗಿ ರೂಪುಗೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಸಮಾಜಸೇವೆಯ ತುಡಿತದೊಂದಿಗೆ ಸಮಾಜಕ್ಕಾಗಿ ದುಡಿಯುವವರನ್ನು ಗೌರವಿಸ ಬೇಕೆಂದರು.ಅತಿಥಿಯಾಗಿದ್ದ ಪ್ರಜಾಸತ್ಯ ದಿನಪತ್ರಿಕೆಯ ಸಂಪಾದಕ ಬಿ.ಸಿ. ನವೀನ್ ಕುಮಾರ್ ಅವರು ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಮುಖಾಂತರ ಶಾಲಾಭಿವೃದ್ಧಿ ಸಮಿತಿಗಳಲ್ಲಿ

(ಮೊದಲ ಪುಟದಿಂದ) ರಾಜಕೀಯ ಬೆರೆಸದೆ ಸಾಮಾಜಿಕ ಜವಾಬ್ದಾರಿಯನ್ನು ಕಲಿಸುವಂತಹ ಶಿಕ್ಷಣಕ್ಕೆ ಆದ್ಯತೆ ಸಿಗಬೇಕು. ಆರೋಗ್ಯ ಹಾಗೂ ಶಿಕ್ಷಣದ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ನಿಲ್ಲಬೇಕೆಂದರು.

ಪ್ರಥಮ ದರ್ಜೆ ಗುತ್ತಿಗೆದಾರರು ಹಾಗೂ ದಾನಿಗಳಾದ ಬಿ.ಬಿ. ಐತಪ್ಪ ರೈ ಹಾಗೂ ಬಿ.ಆರ್. ರವೀಂದ್ರ ರೈ ಅವರುಗಳು ಮಾತನಾಡಿ, ಮಕ್ಕಳು ಸಿಗುವಂತಹ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕೆಂದು ಸಲಹೆಯಿತ್ತರು.

ಅಧ್ಯಕ್ಷತೆ ವಹಿಸಿದ್ದ ದಸಂಸ ವಿಭಾಗೀಯ ಸಂಚಾಲಕರಾದ ಎನ್. ವೀರಭದ್ರಯ್ಯ ಅವರು ಮಾತನಾಡಿ, ಬದುಕಿನ ಹಾದಿಯಲ್ಲಿ ಎದುರಾಗುವ ತೊಂದರೆಗಳನ್ನು ಬುದ್ಧಿವಂತಿಕೆಯಿಂದ ಎದುರಿಸಿ ಮುನ್ನಡೆಯಬೇಕೆಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ದಿವಾಕರ್ ಅವರು, ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಯಾವದೇ ತೊಂದರೆ ಆಗಬಾರದು ಎಂಬ ಅಂಬೇಡ್ಕರ್ ಅವರ ಆಶಯದಂತೆ ದಸಂಸ ವತಿಯಿಂದ ಮಕ್ಕಳಿಗೆ ನೆರವಾಗುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಸಮಿತಿಯ ಸಂಘಟನಾ ಸಂಚಾಲಕ ದೀಪಕ್, ಕೃಷಿ ಅಧಿಕಾರಿ ಎಂ.ವಿ. ವರದರಾಜು ಇದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಕೇಶವ ನಿರೂಪಿಸಿದರು. ಶಿಕ್ಷಕಿ ಎಂ.ಎ. ನಗೀನ ವಂದಿಸಿದರು.