ಸೋಮವಾರಪೇಟೆ,ಜು.3: ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಆಗಾಗ್ಗೆ ಸುರಿಯುತ್ತಿದ್ದ ಮಳೆ ಇಂದು ಬಿಡುವು ನೀಡಿತ್ತು.ಬೆಳಗ್ಗೆಯಿಂದ ಸಂಜೆಯವರೆಗೆ ಆಗಾಗ್ಗೆ ಬಿಸಿಲಿನ ವಾತಾವರಣ ಇತ್ತು. ಒಮ್ಮೊಮ್ಮೆ ದಟ್ಟ ಮೋಡಗಳು ಕಂಡುಬಂದು ಹನಿಗಳ ಸಿಂಚನ ವಾಗಿದ್ದನ್ನು ಹೊರತುಪಡಿಸಿದರೆ, ಭಾರೀ ಮಳೆ ಮಾತ್ರ ಬೀಳಲಿಲ್ಲ. ಸೋಮವಾರಪೇಟೆ ವಿಭಾಗಕ್ಕೆ ಕಳೆದ ವರ್ಷ ಈ ವೇಳೆಗಾಗಲೇ 35 ಇಂಚಿನಷ್ಟು ಮಳೆ ಸುರಿದಿದ್ದರೆ, ಪ್ರಸಕ್ತ ಸಾಲಿನಲ್ಲಿ ಸರಾಸರಿ 10 ಇಂಚಿನಷ್ಟು ಮಾತ್ರ ಮಳೆ ಸುರಿದಿದೆ.ಇದರಿಂದಾಗಿ ಕೃಷಿ ಕಾರ್ಯಗಳಿಗೆ ಹಿನ್ನಡೆಯುಂಟಾಗಿದ್ದು, ಗದ್ದೆ ಉಳುಮೆ, ಬಿತ್ತನೆ, ಸಸಿಮಡಿ ತಯಾರಿ ಕಾರ್ಯವೂ ದೂರ ತಳ್ಳಲ್ಪಟ್ಟಿದೆ. ಆದರೆ ಕಾಫಿ ತೋಟಗಳಲ್ಲಿ ಗೊಬ್ಬರ ಹಾಕುವ ಕಾರ್ಯ ಭರದಿಂದ ನಡೆಯುತ್ತಿದೆ. ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಇಲ್ಲದಂತಾಗಿದೆ. ನೀರಿನ ಕೊರತೆಯಿಂದ ಉಳುಮೆ ಮಾಡಿದ್ದ ಗದ್ದೆಗಳನ್ನು ಹಾಗೆಯೇ ಬಿಡಲಾಗಿದ್ದು, ಸಸಿಮಡಿ ತಯಾರಿಗಾಗಿ ಮಳೆಯನ್ನು ಕಾಯುವಂತಾಗಿದೆ.