ವೀರಾಜಪೇಟೆ, ಜು. 2: ಕಳೆದ ಒಂದೂವರೆ ತಿಂಗಳ ಹಿಂದೆ ಕೇರಳ ರಾಜ್ಯದಲ್ಲಿ ಪತ್ತೆಯಾದ ನಿಫಾ ವೈರಸ್‍ಗೆ ಸುಮಾರು 24 ಮಂದಿ ಬಲಿಯಾದ ಹಿನ್ನೆಲೆ ಕೇರಳದ ಎಲ್ಲ ಹಣ್ಣು ಹಂಪಲು, ತರಕಾರಿಗಳನ್ನು ನಿಷೇಧಿಸಿದ ಬೆನ್ನಲ್ಲೇ ದಕ್ಷಿಣ ಕೊಡಗಿನಲ್ಲಿ ಸಮುದ್ರದ ಹಸಿ ಮೀನಿಗೆ ಬೇಡಿಕೆ ಕುಗ್ಗಿದೆ.

ಕೇರಳದ ಕಣ್ಣಾನೂರು, ತಲಚೇರಿಯ ಸಮುದ್ರದ ಕರಾವಳಿಯಿಂದ ದಕ್ಷಿಣ ಕೊಡಗಿಗೆ ಸುಮಾರು ಎರಡರಿಂದ ಎರಡೂವರೆ ಟನ್‍ಗಳಷ್ಟು ಸಮುದ್ರದ ಮೀನು ಬರುತ್ತಿದ್ದು, ಕೆಲವು ದಿನಗಳಿಂದ ನಿಫಾ ವೈರಸ್ ಹಿನ್ನೆಲೆಯಲ್ಲಿ ಒಂದರಿಂದ ಒಂದೂವರೆ ಟನ್‍ನಷ್ಟು ಮಾತ್ರ ಮೀನು ಬರುತ್ತಿದ್ದು ಮೀನಿನ ಬೇಡಿಕೆಯೂ ಕಡಿಮೆಯಾಗಿದೆ.

ಈಗ ಸಮುದ್ರದಲ್ಲಿ ಮೀನುಗಳಿಗೆ ಸಂತಾನೋತ್ಪತ್ತಿ ಕಾಲವಾದುದರಿಂದ ಈಚೆಗೆ ಸಮುದ್ರದಿಂದ ಮೀನು ಹಿಡಿಯಲು ಮೀನು ಬೆಸ್ತರಿಗೆ ನಿರ್ಬಂಧವನ್ನು ಹೇರಲಾಗಿದೆ. ಕೇರಳದಲ್ಲಿ ನಿಫಾ ವೈರಸ್‍ನೊಂದಿಗೆ ಮೀನು ಹಿಡಿಯಲು ನಿರ್ಬಂಧ ಹೇರಿರುವದು ಹಸಿ ಮೀನಿನ ಅಭಾವಕ್ಕೆ ಕಾರಣವಾಗಿದೆ. ಇದರಿಂದ ದಕ್ಷಿಣ ಕೊಡಗಿನ ವೀರಾಜಪೇಟೆ, ಗೋಣಿಕೊಪ್ಪಲು, ಪೊನ್ನಂಪೇಟೆ, ಶ್ರೀಮಂಗಲ, ಹುದಿಕೇರಿ, ಕುಟ್ಟ ಸೇರಿದಂತೆ ವಿವಿಧೆಡೆಗಳಲ್ಲಿ ಮಾರಾಟವಾಗುವ ಹಸಿ ಮೀನಿನ ಬೆಲೆ ದುಬಾರಿಯಾಗಿದೆ.

ಈ ಹಿಂದೆ ಕೇರಳದ ಹಸಿ ಮತ್ತಿಮೀನು ಕೆ.ಜಿ.ಗೆ ರೂ. 60 ರಿಂದ 80ರ ತನಕ ಮಾರಾಟವಾಗುತ್ತಿತ್ತು. ಈಗ ಜೂನ್ 15ರಿಂದ ಮತ್ತಿ ಮೀನಿನ ಬೆಲೆ ರೂ. 250 ರಿಂದ 300ರ ತನಕ ಏರಿದೆ. ಇದರಂತೆ ಬಂಗಡೆ ಮೀನು ರೂ. 350 ರಿಂದ 380 ಇತರ ವಿವಿಧ ಜಾತಿಯ ಮೀನುಗಳು ಶೇಕಡ 60 ರಿಂದ 80 ರಷ್ಟು ಬೆಲೆ ಏರಿಕೆಯನ್ನು ಕಂಡಿದೆ.

ದಕ್ಷಿಣ ಕೊಡಗಿನಲ್ಲಿ ಸುಮುದ್ರದ ಹಸಿ ಮೀನಿನ ಅಭಾವ, ದುಬಾರಿ ಬೆಲೆಯಿಂದ ಇಲ್ಲಿನ ಮೀನು ವ್ಯಾಪಾರಿಗಳು ವ್ಯವಹಾರಕ್ಕಾಗಿ ಕರ್ನಾಟಕದ ಹೊಳೆ ಮೀನಿನ ಮೇಲೆ ಅವಲಂಭಿತರಾಗಿದ್ದಾರೆ. ಈಗ ದಕ್ಷಿಣ ಕೊಡಗಿಗೆ ಕೆ.ಆರ್.ಎಸ್, ಹುಣಸೂರು, ಕೆ.ಆರ್. ನಗರ. ಹಂಪಾಪುರ ವಿವಿಧೆಡೆಗಳಿಂದ ಹೊಳೆ ಮೀನು ಬರುತ್ತಿದ್ದು ಹೊಳೆ ಮೀನಿನ ಬೇಡಿಕೆಗೆ ತಕ್ಕಂತೆ ಮೀನು ಸರಬರಾಜಾಗುತ್ತಿದೆ.