ಶ್ರೀಮಂಗಲ, ಜು. 2: ಮಳೆಯೇ ಕೊಡಗಿನ ಸೌಂದರ್ಯಕ್ಕೆ ಮೆರಗು ಎಂದು ಕೊಡಗನ್ನು ಜನ ಬಣ್ಣನೆ ಮಾಡುತ್ತಾರೆ. ಮಳೆಗಾಲದಲ್ಲಿ ಉಕ್ಕಿ ಹರಿಯುವ ನದಿ ತೋಡುಗಳು, ಪ್ರವಾಹಕ್ಕೆ ಸಿಲುಕಿ ಸಮುದ್ರದಂತೆ ಕಾಣುವ ಭತ್ತದ ಗದ್ದೆಗಳು, ಪೃಕೃತಿ ಸೌಂದರ್ಯಕ್ಕೆ ಹೆಸರಾಗಿರುವ ಕೊಡಗಿಗೆ ಮೆರುಗು ನೀಡುತ್ತವೆ. ಆದರೆ ಕೊಡಗು ತೀವ್ರ ಮಳೆಗೆ ಸಿಲುಕಿ ಇಲ್ಲಿನ ಬೆಳೆಗಾರರು ಸತತವಾಗಿ ಬೆಳೆ ನಷ್ಟಗೊಂಡು ಸೊರಗುತ್ತಾರೆ. ಪ್ರಸಕ್ತ ವರ್ಷದ ಮುಂಗಾರು ಜೂನ್ ತಿಂಗಳು ಕಳೆದರೂ ತನ್ನ ಬಿರುಸು ತೋರಿಸದೇ ಇರುವದು, ಪ್ರತಿ ವರ್ಷ ಅತಿವೃಷ್ಟಿಗೆ ತುತ್ತಾಗಿ ನಲುಗಿ ಹೋಗುವ ಜಿಲ್ಲೆಯ ಪಶ್ಚಿಮಘಟ್ಟದ ಜನಕ್ಕೆ ಇದುವರೆಗಿನ ಮಳೆ ಅತ್ಯಂತ ಹಿತವೆನಿಸಿದೆ. ಪ್ಲಾಂಟೇಷನ್ ಬೆಳೆಗೆ ಸಾಕು, ಭತ್ತದ ಗದ್ದೆಗೆ ಕೊಂಚ ಮಳೆ ಬೇಕೆನ್ನುವಷ್ಟು ಸಂತೃಪ್ತರಾಗಿದ್ದಾರೆ. ಆದರೆ ಮಧ್ಯ ಕೊಡಗು ಹಾಗೂ ಕೊಡಗಿನ ಪೂರ್ವ ಪ್ರದೇಶದಲ್ಲಿ ಮಳೆ ಕೊರತೆ ಕಾಡುತ್ತಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಪ್ರತಿವರ್ಷ ಅತಿವೃಷ್ಟಿಗೆ ಸಿಲುಕಿ, ಕಾಫಿ, ಕರಿಮೆಣಸು, ಅಡಿಕೆ, ಬಾಳೆ, ಭತ್ತದ ಬೆಳೆಗಳು ನಷ್ಟವಾಗುತ್ತಿವೆ. ಇದಕ್ಕೆ ಸರಕಾರದಿಂದ ದೊರೆಯುವ ಪರಿಹಾರವು ನಷ್ಟಗೊಂಡ ಬೆಳೆಯ ಪ್ರಮಾಣಕ್ಕೆ ಹೋಲಿಸಿದರೆ “ಬಕಾಸುರನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ” ಯಂತೆ ಅಷ್ಟೆ. ಕೊಡಗಿನ ಪಶ್ಚಿಮ ಘಟ್ಟ ವ್ಯಾಪ್ತಿಗೆ ಬರುವ ಕುಟ್ಟ, ಶ್ರೀಮಂಗಲ, ಟಿ-ಶೆಟ್ಟಿಗೇರಿ, ಹುದಿಕೇರಿ, ಬಿ-ಶೆಟ್ಟಿಗೇರಿ, ಕೆದಮುಳ್ಳೂರು, ನರಿಯಂದಡ, ಚೆಯ್ಯಂಡಾಣೆ, ಬೇಟೋಳಿ, ನಾಪೋಕ್ಲು, ಕಕ್ಕಬ್ಬೆ, ಭಾಗಮಂಡಲ, ಪುಷ್ಪಗಿರಿ ವ್ಯಾಪ್ತಿಯ ಬೆಟ್ಟದಳ್ಳಿ, ಗರ್ವಾಲೆ, ಶಾಂತಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಪ್ಲಾಂಟೇಷನ್ ಬೆಳೆಗಳಿಗೆ ಸಾಕಾಗುವಷ್ಟು ಮಳೆಯಾಗಿದೆ. ಆದರೆ ಭತ್ತದ ಕೃಷಿಗೆ ಮತ್ತಷ್ಟು ಮಳೆ ಬೇಕಾಗಿದೆ. ಪಶ್ಚಿಮ ಘಟ್ಟ ವ್ಯಾಪ್ತಿಗೆ ವಾಡಿಕೆಗಿಂತ ತೀರಾ ಕಡಿಮೆ ಮಳೆಯಾಗಿದ್ದರೂ ಪ್ಲಾಂಟೇಷನ್ ಬೆಳೆಗೆ ಹಿತವೆನಿಸುವಂತಿದ್ದು, ಈ ವ್ಯಾಪ್ತಿಗೆ ವಾಡಿಕೆ ಮಳೆಯಿಂದ ಬೆಳೆಗಳಿಗೆ ನಷ್ಟ ಉಂಟಾಗುತ್ತದೆ. ಇಲ್ಲಿನ ಬೆಳೆಗಾರರು ವಾಡಿಕೆಗಿಂತ ಕಡಿಮೆ ಮಳೆಯಾದರೆ ಬೆಳೆ ಸುರಕ್ಷಿತ ಎನ್ನುವ ಅಭಿಪ್ರಾಯ ಹೊಂದಿದ್ದಾರೆ.

(ಮೊದಲ ಪುಟದಿಂದ) ಪಶ್ಚಿಮಘಟ್ಟ ವ್ಯಾಪ್ತಿಯ ಭತ್ತದ ಕೃಷಿ ಮಾಡಲು ಸಾಕಾಗುವಷ್ಟು ಮಳೆಯಾಗಿದ್ದು, ಗದ್ದೆಗಳಲ್ಲಿ ಮಳೆಯಿಂದ ನೀರು ಸಾಕಷ್ಟು ತುಂಬಿದೆ. ಭತ್ತ ಬಿತ್ತನೆ ಹಾಗೂ ಉಳುಮೆ ಚಟುವಟಿಕೆಯಲ್ಲಿ ರೈತರು ತೊಡಗಿಕೊಂಡಿದ್ದಾರೆ.

ಆದರೆ ಮಧ್ಯ ಹಾಗೂ ಪೂರ್ವ ಭಾಗದ ಕೊಡಗಿನಲ್ಲಿ ಅಲ್ಪ ಮಳೆಯಾಗಿದ್ದು, ಮಳೆಯ ಕೊರತೆ ಅನುಭವಿಸುತ್ತಿದ್ದಾರೆ. ಇಲ್ಲಿನ ಪ್ಲಾಂಟೇಷನ್ ಬೆಳೆಗಳಿಗೂ ಮಳೆ ಕೊರತೆ ಕಾಡುತ್ತಿದೆ. ಅಲ್ಲದೆ ಭತ್ತದ ಕೃಷಿ ಕೈಗೊಂಡಿರುವ ಈ ವ್ಯಾಪ್ತಿಯ ರೈತರಿಗೆ ಭತ್ತ ಬಿತ್ತನೆ ಮಾಡಲೂ ಸಂಕಷ್ಟ ಎದುರಾಗಿದೆ.

ಕೊಡಗಿನಲ್ಲಿ ಉತ್ತಮ ಮಳೆಯಾದರೆ ಮಾತ್ರ ಇಲ್ಲಿನ ಪ್ರಮುಖ ನದಿಗಳು ತುಂಬಿ ಹರಿಯುತ್ತವೆ. ಪಶ್ಚಿಮಘಟ್ಟದಲ್ಲಿಯೇ ಹುಟ್ಟಿರುವ ಕಾವೇರಿ. ಲಕ್ಷ್ಮಣತೀರ್ಥ, ಹಾರಂಗಿ ಇತ್ಯಾದಿ ನದಿಗಳು ತುಂಬಿದರೆ ಮಾತ್ರ ರಾಜ್ಯದ ಕೆ.ಆರ್.ಎಸ್. ಅಣೆಕಟ್ಟು ತುಂಬುತ್ತದೆ. ಮಾತ್ರವಲ್ಲದೆ ಮೈಸೂರು, ಬೆಂಗಳೂರು, ಮಂಡ್ಯ ಜಿಲ್ಲೆಗೂ ಕೃಷಿ ಹಾಗೂ ಕುಡಿಯುವ ನೀರು, ತಮಿಳುನಾಡು, ಪಾಂಡಿಚೇರಿಗಳಿಗೂ ಸಮದ್ಧಿ ತರುತ್ತದೆ.

ಈ ನೀರನ್ನೇ ಅವಲಂಬಿಸಿರುವ ರಾಜ್ಯದ ಈ ಜಿಲ್ಲೆಗಳು ಮತ್ತು ಹೊರ ರಾಜ್ಯಗಳು ಕೊಡಗಿನಲ್ಲಿ ಉತ್ತಮ ಮಳೆಯನ್ನು ಸದಾ ನಿರೀಕ್ಷಿಸುತ್ತಿರುತ್ತವೆ. ಸರಕಾರವೂ ಮುಂಗಾರು ದುರ್ಬಲವಾದರೆ ಮೋಡ ಬಿತ್ತನೆ ಮೂಲಕ ನೀರು ತುಂಬಿಸಿಕೊಳ್ಳಲು ಯೋಜನೆ ರೂಪಿಸುತ್ತವೆ. ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಮಳೆ ಹೆಚ್ಚಾದರೆ ಅಥವಾ ವಾಡಿಕೆ ಪ್ರಮಾಣದಲ್ಲಿ ಮಳೆಯಾದರೆ ಇಲ್ಲಿನ ಪ್ರಮುಖ ಬೆಳೆ ಕಾಫಿ, ಕರಿಮೆಣಸು, ಅಡಿಕೆ ಕೊಳೆ ರೋಗಕ್ಕೆ ತುತ್ತಾಗಿ ನಷ್ಟವಾಗುತ್ತದೆ ಎನ್ನುವ, ಹಾಗೆಯೇ ಮಳೆ ತೀರಾ ಕಡಿಮೆಯಾದರೂ ಸಹ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಆತಂಕ ಪಶ್ಚಿಮಘಟ್ಟ ವ್ಯಾಪ್ತಿಯ ಜನರಲ್ಲಿ ಕಾಡುತ್ತಿದೆ.

ಹಿತ ಮಿತದ ಮಳೆ ಈ ವ್ಯಾಪ್ತಿಗೆ ಸಮೃದ್ಧಿ ಹಾಗೂ ಸುರಕ್ಷಿತ ಎಂಬ ಕಲ್ಪನೆಗೆ ಅನುರೂಪವಾದ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಅತಿವೃಷ್ಟಿಗೆ ಕಳೆದ ಹಲವು ದಶಕಗಳಿಂದ ತುತ್ತಾಗಿ ನಿರಂತರ ಬೆಳೆ ನಷ್ಟ ಅನುಭವಿಸುತ್ತಿರುವ ಈ ವ್ಯಾಪ್ತಿಯ ಬೆಳೆಗಾರರಿಗೆ ವಿಶೇಷ ಪರಿಹಾರ ಲಭ್ಯವಾಗುತ್ತಿಲ್ಲ. ಇದೂ ಸಹ ಮಳೆ ಕಡಿಮೆ ಸಾಕು ಎನ್ನುವ ಬೆಳೆಗಾರರ ಅಸಹಯಕತೆಗೆ ಕಾರಣವಾಗಿದೆ. ಇದರೊಂದಿಗೆ ಕಳೆದ ಮಳೆಗಾಲದಲ್ಲಿ ಉಂಟಾದ ಭೂಕುಸಿತ ನೆನೆದು ಮಳೆ ಹೆಚ್ಚು ಬೇಡ ಎನ್ನಲು ಕಾರಣಗಳಲ್ಲಿ ಒಂದಾಗಿದೆ.

ಮಳೆ ವಿವರ : ಬಿರುನಾಣಿ: 2018 ರ ವಾರ್ಷಿಕ ಮಳೆ- 288 ಇಂಚು, ಕಳೆದ ವರ್ಷ ಇದೇ ಅವಧಿಗೆ 91 ಇಂಚು ಪ್ರಸಕ್ತ ವರ್ಷ ಇಂದಿನವರೆಗೆ 33 ಇಂಚು. ಕಳೆದ ವರ್ಷಕ್ಕಿಂತ 58 ಇಂಚು ಮಳೆ ಕಡಿಮೆ.

ಶ್ರೀಮಂಗಲ : 2018ರ ವಾರ್ಷಿಕ ಮಳೆ - 141.72 ಇಂಚು, 2018 ಇದೇ ಅವಧಿಗೆ 41 ಇಂಚು, ಪ್ರಸಕ್ತ ವರ್ಷ ಇದುವರೆಗೆ 19.10 ಇಂಚು. ಕಳೆದ ವರ್ಷಕ್ಕಿಂತ 21.9 ಇಂಚು ಮಳೆ ಕಡಿಮೆ.

-ಅಣ್ಣೀರ ಹರೀಶ್ ಮಾದಪ್ಪ.