ಗೋಣಿಕೊಪ್ಪಲು, ಜು. 2: ನೋಡ ನೋಡುತ್ತಿದ್ದಂತೆಯೇ ಗೋಣಿಕೊಪ್ಪ ಬಸ್ ನಿಲ್ದಾಣದ ಸಮೀಪ ಕಸದ ರಾಶಿಗಳು ಬೆಳೆಯುತ್ತಲೇ ಇವೆ. ನಗರ ವ್ಯಾಪ್ತಿಯ ಕಸ ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಬದಲು ರಾಶಿ ರಾಶಿಯಾಗಿ ಬಸ್ ನಿಲ್ದಾಣ ಸಮೀಪವೇ ಸುರಿಯಲಾಗುತ್ತಿದೆ.ಖಾಲಿ ಇದ್ದ ಜಾಗದಲ್ಲಿ ಇದೀಗ ಕಸದ ರಾಶಿ ದೊಡ್ಡ ಬೆಟ್ಟದಂತಾಗಿದ್ದು ಎಲ್ಲೆಲ್ಲೂ ದುರ್ಗಂಧ ಬೀರುತ್ತಿದೆ. ಈ ಹಿಂದೆ ಪಂಚಾಯಿತಿ ವತಿಯಿಂದ ನಗರದ ಹೊರ ವಲಯದಲ್ಲಿರುವ ಸ್ಥಳಗಳಿಗೆ ಕಸವನ್ನು ವಿಲೇವಾರಿ ಮಾಡಲಾಗುತಿತ್ತು. ಪಂಚಾಯಿತಿ ಆಡಳಿತ ಮಂಡಳಿ ಸದಸ್ಯರ ನಡುವೆ ಹೊಂದಾಣಿಕೆ ಕೊರತೆಯಿಂದ ಕಸ ಸಮಸ್ಯೆ ಬಗೆ ಹರಿಸಲು ಸ್ಥಳೀಯ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಆನೇಕ ಸಭೆ ನಡೆಸಿ ಕಸ ವಿಲೇವಾರಿಗೆ ಮಾರ್ಗೋಪಾಯ ತಿಳಿಸಿದರೂ ಸಾರ್ವಜನಿಕರು, ಸಂಘ ಸಂಸ್ಥೆಯ ಪ್ರಮುಖರು ಜಿಲ್ಲಾ ಪಂಚಾಯ್ತಿ ಸದಸ್ಯರು ನೀಡಿದ ಮಾತಿಗೆ ಇಲ್ಲಿ ಕವಡೆ ಕಾಸಿನ ಬೆಲೆ ಇಲ್ಲದಂತಾಗಿದೆ.ಪಂಚಾಯಿತಿಯ ಸದಸ್ಯರ ಒಣ ಪ್ರತಿಷ್ಠೆಯಿಂದ ನಗರವು ಗಬ್ಬೆದ್ದು ನಾರುತ್ತಿದ್ದು, ಈ ಬಗ್ಗೆ ಕೇವಲ ಅವರಿವರ ಮೇಲೆಯೇ ಆರೋಪಗಳನ್ನು ಹೇಳುತ್ತಾ ವರ್ಷಗಳು ಕಳೆದಿವೆ. ಕಸ ವಿಲೇವಾರಿ ಮಾಡಲು ಸ್ಥಳಿಯ ಗುತ್ತಿಗೆದಾರ ಮುಂದೆ ಬಂದರೂ ಇದಕ್ಕೆ ಅವಕಾಶ ಕೊಡದ ಕೆಲ ಸದಸ್ಯರು ಹೊರ ಜಿಲ್ಲೆಯ ಗುತ್ತಿಗೆದಾರರಿಗೆ ಕೆಲಸ ವಹಿಸಲು ಆಸಕ್ತಿ ವಹಿಸಿರುವದರ ಹಿಂದಿನ ಮರ್ಮ ತಿಳಿಯದಾಗಿದೆ.
ಕೇವಲ ಪಂಚಾಯಿತಿ ಸಭೆಗಳಲ್ಲಿ ತಮ್ಮ ಪ್ರತಿಷ್ಠೆಗಳನ್ನು ತೋರಿಸುತ್ತಿರುವ ಕೆಲವು ಸದಸ್ಯರು ಕನಿಷ್ಟ ನಗರದಲ್ಲಿ ಗಬ್ಬೆದ್ದು ನಾರುತ್ತಿರುವ ಕಸದ ಬಗ್ಗೆ ಚಕಾರ ಎತ್ತುತ್ತಿಲ್ಲ. ಕಸದ ರಾಶಿಯ ಸಮೀಪವೇ ಆಟೋ ನಿಲ್ದಾಣ, ಬಸ್ ತಂಗುದಾಣ, ಹೊಟೇಲ್, ಅಂಗಡಿಗಳಿದ್ದರೂ ಇದ್ಯಾವದನ್ನು ಮನಗಾಣದೆ ಪಂಚಾಯಿತಿಯ ಮುಂದೆ ಕಸಗಳನ್ನು ದಿನನಿತ್ಯ ಸುರಿಯುತ್ತಿದ್ದಾರೆ. ಇದರಿಂದ ಹುಳುಗಳು ಹೊರಬರುತ್ತಿದ್ದು ಈ ಭಾಗದಲ್ಲಿ ಸೊಳ್ಳೆಗಳು ಹೆಚ್ಚಾಗಿ ಕಂಡು ಬರುತ್ತಿವೆ.
(ಮೊದಲ ಪುಟದಿಂದ)
ಬಿಗಡಾಯಿಸಿದ ಸಮಸ್ಯೆ
ಹಳ್ಳಿಗಟ್ಟುವಿನಲ್ಲಿ ಗುರುತಿಸಲಾಗಿರುವ ಜಾಗದಲ್ಲಿ ಕಸದ ರಾಶಿ ಬೆಳೆಯುತ್ತಿದ್ದಂತೆ ನೂತನ ಮಾರ್ಗೋಪಾಯ ಕಂಡುಕೊಂಡ ಪಂಚಾಯಿತಿ ವಿಂಗಡಣಾ ಹಾಗೂ ಸಂಸ್ಕರಣಾ ಘಟಕ ಸ್ಥಾಪನೆ ಮಾಡಿ ರೂ. 17 ಲಕ್ಷಕ್ಕೂ ಅಧಿಕ ಹಣವನ್ನು ವಿನಿಯೋಗಿಸಿದೆ. ಸೂಕ್ತ ನಿರ್ವಹಣೆಯಿಲ್ಲದೆ ಒಣಕಸ ಹಾಗೂ ಹಸಿ ಕಸ ಬೇರ್ಪಡಿಸದೆ ಕಸವನ್ನು ಗುಂಡಿ ತೆಗೆದು ಹಾಕಿದ ಹಿನ್ನೆಲೆಯಲ್ಲಿ ಆ ಭಾಗದ ಸಾರ್ವಜನಿಕರು ಬಹಿರಂಗವಾಗಿಯೇ ಪ್ರತಿಭಟಿಸಿ ಈ ಜಾಗದಲ್ಲಿ ಕಸ ವಿಲೇವಾರಿಗೆ ವಿರೋಧ ವ್ಯಕ್ತಪಡಿಸಿದ್ದರು. ಕಸ ನಿರ್ವಹಣೆ ನಡೆಸುತ್ತಿದ್ದ ಮೇಸ್ತ್ರಿ ಹಾಗೂ ಪಂಚಾಯಿತಿ ನೌಕರ ನಗರದ ಮನೆಯಲ್ಲಿ ನಾಗರಿಕರು ಕಸಗಳನ್ನು ಬೇರ್ಪಡಿಸಿಕೊಟ್ಟರೂ ಕಸ ವಿಲೇವಾರಿ ಜಾಗಕ್ಕೆ ಕೊಂಡೊಯ್ಯುವ ವಾಹನಗಳಲ್ಲಿದ್ದ ಎಲ್ಲ ಕಸವನ್ನು ಒಟ್ಟಿಗೆ ಸುರಿಯುವ ಮೂಲಕ ಸಮಸ್ಯೆಯನ್ನು ಉಲ್ಬಣಗೊಳಿಸಿದ್ದಾನೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಮೌನ ವಹಿಸಿದ್ದಾರೆ. ಈತ ಹೇಳುವ ಮಾರ್ಗದಲ್ಲಿಯೇ ಸದಸ್ಯರು, ಪಂಚಾಯಿತಿ ಅಧಿಕಾರಿಗಳು ನಡೆಯುವ ಪರಿಸ್ಥಿತಿ ಬಂದೊದಗಿರುವದು ವಿಪರ್ಯಾಸ.!
ಮಳೆಗಾಲದಲ್ಲಿ ಕರಗಿದ ಕಸದ ರಾಶಿಯಲ್ಲಿ ಉತ್ಪತ್ತಿಯಾಗಿರುವ ನೊಣಗಳು ಇದೀಗ ಎಲ್ಲೆಂದರಲ್ಲಿ ಹಾರಾಡುತ್ತಿವೆ. ಕಸ ವಿಂಗಡಣೆಯಾಗದೆ ಹಸಿ ಕಸ ತ್ಯಾಜ್ಯಗಳು ಕೊಳೆತು ಹೇಸಿಗೆ ಹುಟ್ಟಿಸುವ ನೀಲಿ ಬಣ್ಣದ ದೊಡ್ಡ ಗಾತ್ರದ ನೊಣಗಳು ಉತ್ಪತ್ತಿಯಾಗಿವೆ. ಕಸದ ರಾಶಿ ಹೆಚ್ಚಾಗುತ್ತಿದ್ದಂತೆ ಇದರೊಂದಿಗೆ ನೊಣಗಳು ಹಾರಿ ಬರುತ್ತಿವೆ. ಈಗಾಗಲೇ ನಗರಕ್ಕೆ ಆಗಮಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಕಸದ ರಾಶಿಯಿಂದ ಕೊಳಚೆ ನೀರು ಆಟೋ ನಿಲ್ದಾಣದಲ್ಲಿ ಹರಿಯುತ್ತಿದೆ. ಈ ನೀರಿನ ಮೇಲೆಯೇ ಆಟೋ ನಿಲ್ದಾಣದಲ್ಲಿ ಕೆಲಸ ನಿರ್ವಹಿಸುವ ಚಾಲಕರು ನಡೆದಾಡುವ ಪರಿಸ್ಥಿತಿ ಬಂದೊದಗಿದೆ. ಹೆಚ್ಚಿನ ಸಮಸ್ಯೆ ಅನುಭವಿಸುತ್ತಿರುವವರು ಹೊಟೇಲ್, ಅಂಗಡಿ ಮಾಲೀಕರು ಹಾಗೂ ಬಸ್ ತಂಗುದಾಣದಲ್ಲಿ ಇರುವ ಪ್ರಯಾಣಿಕರು ಕಸದ ರಾಶಿಯ ಮೇಲೆ ಸೊಳ್ಳೆ, ನೊಣಗಳ ನಿಯಂತ್ರಣಕ್ಕೆ ಔಷಧಿಗಳನ್ನು ಸಿಂಪಡಿಸುವ ಅವಕಾಶವಿದ್ದರೂ ಈ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದ ಪಂಚಾಯಿತಿ ನಮಗೆ ಸಂಬಂಧವೇ ಇಲ್ಲ ಎಂಬಂತೆ ಕಾಲಹರಣದಲ್ಲಿ ಕಾಲ ಕಳೆಯುತ್ತಿದ್ದಾರೆ.
ಪಂಚಾಯಿತಿ ವಿರುದ್ಧ ಆಕ್ರೋಶ
ಹಲವು ವರ್ಷಗಳಿಂದ ಕಸ ಸಮಸ್ಯೆ ಇದ್ದರೂ ಸೂಕ್ತ ಪರಿಹಾರ ಕೈಗೊಳ್ಳದ ಬಗ್ಗೆ ಸ್ಥಳೀಯ ಆಟೋ ಚಾಲಕರು, ಮಾಲೀಕರು ಪಂಚಾಯಿತಿ ವಿರುದ್ಧ ಆಕ್ರೋಶಗೊಂಡು ಪ್ರತಿಭಟಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಪಂಚಾಯಿತಿ ಕಚೇರಿಗೆ ತೆರಳಿ ಅಧ್ಯಕ್ಷರು, ಸÀದಸ್ಯರು ಹಾಗೂ ಪಿಡಿಒ ಅವರನ್ನು ಭೇಟಿ ಮಾಡಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಕೋರಿದರೂ ಯಾವದೇ ಪ್ರಯೋಜನ ಇಲ್ಲಿ ತನಕ ಆಗಿಲ್ಲ. ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಕಸ ಸಮಸ್ಯೆ ದೊಡ್ಡದೇನಲ್ಲ ಆದರೆ ಕಸ ವಿಂಗಡಣೆ ಮಾಡದೇ, ಪಂಚಾಯಿತಿ ಸದಸ್ಯರ ನಡುವೆ ಹೊಂದಾಣಿಕೆ ಇಲ್ಲದೆ, ಸ್ಥಳೀಯ ಸಂಘ ಸಂಸ್ಥೆಯ ಪದಾಧಿಕಾರಿಗಳಿಗೆ ಬೆಲೆ ಕೊಡದೆ ಇರುವದೇ ಇಲ್ಲಿಯ ಕಸ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿದೆ.
ನಗರದಲ್ಲಿ ಸಂಚರಿಸುವ ಆಟೋ ರಿಕ್ಷಾಗಳಿಗೆ ದಿನ ನಿತ್ಯದ ಬಾಡಿಗೆ ಇಲ್ಲದೆ ಚಾಲಕರ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಸಮೀಪದಲ್ಲಿಯೇ ಕಸದ ರಾಶಿ ಇರುವದರಿಂದ ಅನೇಕ ಚಾಲಕರಿಗೆ ರೋಗ ರುಜಿನಗಳು ಎದುರಾಗಿವೆ. ಅನೇಕ ಬಾರಿ ಮನವಿ ಮಾಡಿದರೂ ಪಂಚಾಯಿತಿ ಮಾತ್ರ ಇನ್ನೂ ನಿದ್ರೆಯಿಂದ ಎದ್ದಂತಿಲ್ಲ. ಕೇವಲ ನೆಪಗಳನ್ನೇ ಹೇಳುತ್ತ ಸಮಯ ಕಳೆಯುತ್ತಿದ್ದಾರೆ. ಪಂಚಾಯಿತಿ ಆಡಳಿತ ಇಷ್ಟೊಂದು ದುರ್ಗತಿಗೆ ಬಂದಿರುವದು ಇದೇ ಮೊದಲು. ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಲಾಗುವದು ಎಂದು ಆಟೋ ಚಾಲಕ-ಮಾಲೀಕರ ಸಂಘದ ಉಪಾಧ್ಯಕ್ಷ ಜಪ್ಪು ಸುಬ್ಬಯ್ಯ ತಿಳಿಸಿದ್ದಾರೆ.
ಚಿತ್ರ ವರದಿ: ಹೆಚ್.ಕೆ.ಜಗದೀಶ್