ಕುಶಾಲನಗರ, ಜು. 2: ಬ್ಯಾಂಕಿ ನಿಂದ ನಗದೀಕರಿಸಿ ಬೈಕಿನಲ್ಲಿಟ್ಟಿದ್ದ ಹಣವನ್ನು ನಾಲ್ವರ ಗುಂಪೊಂದು ಅಪಹರಿಸಿದ ಪ್ರಕರಣ ಕುಶಾಲನಗರ ಪಟ್ಟಣದಲ್ಲಿ ಹಾಡಹಗಲೇ ನಡೆದಿದೆ. ಪಟ್ಟಣದ ಸ್ಟೇಟ್ ಬ್ಯಾಂಕ್‍ನಿಂದ 3 ಲಕ್ಷ ರೂ. ಹಣ ನಗದೀಕರಿಸಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ಘಟನೆ ನಡೆದಿದೆ. ನೆರೆಯ ಕೊಪ್ಪ ಸಮೀಪದ ಮುತ್ತಿನ ಮುಳ್ಳುಸೋಗೆ ಗ್ರಾಮದ ನಿವಾಸಿ ಶಿವಕುಮಾರ್ ಎಂಬವರು ಹಣ ಕಳೆದುಕೊಂಡವರು. ತಮ್ಮ ನಿವೃತ್ತಿ ಸಂಬಂಧ ಬ್ಯಾಂಕಿನಿಂದ ಹಣ ಡ್ರಾ ಮಾಡಿ ದ್ವಿಚಕ್ರ ವಾಹನದಲ್ಲಿ (ಕೆಎ.45.ಎಸ್.0703) ಮನೆ ಕಡೆಗೆ ತೆರಳುತ್ತಿದ್ದ ಸಂದರ್ಭ ಇವರನ್ನು ಹಿಂಬಾಲಿಸಿದ ದುಷ್ಕರ್ಮಿ ಗಳ ತಂಡ ಈ ಕೃತ್ಯ ನಡೆಸಿದೆ ಎಂದು ತಿಳಿದುಬಂದಿದೆ. ಹಣ ಅಪಹರಣ ಮಾಡುವ ಉದ್ದೇಶದಿಂದ ಬೈಕ್ ಟಯರ್ ಅನ್ನು ಪಂಚ್ಕರ್ ಮಾಡಿದ ದುಷ್ಕರ್ಮಿಗಳ ತಂಡ ನಂತರ ಶಿವಕುಮಾರ್ ಅವರನ್ನು ಹಿಂಬಾಲಿಸಿ ಹಣ ಅಪಹರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟಯರ್ ಪಂಕ್ಚರ್ ಹಾಕಿಸಲು ವೆಂಕಟೇಶ್ವರ ಥಿಯೇಟರ್ ಮುಂಭಾಗದ ಅಂಗಡಿಗೆ ತೆರಳಿದ ಶಿವಕುಮಾರ್ ಹಣದ ಬ್ಯಾಗನ್ನು ತನ್ನ ಬೈಕ್ ಮುಂಭಾಗದಲ್ಲಿರಿಸಿದ್ದು ಬೈಕಿನಿಂದ ಇಳಿದು ಹೋದ ಸಂದರ್ಭ ಹಣದ ಬ್ಯಾಗನ್ನು ಯುವಕನೊಬ್ಬ ಅಪಹರಿಸುತ್ತಿರುವದು ಟಯರ್ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ಯುವಕನೊಂದಿಗೆ ಇನ್ನೂ ಮೂವರು ಹೊಂಚು ಹಾಕುತ್ತಿರುವದು ಗೋಚರವಾಗಿದೆ. ಹಣದ ಬ್ಯಾಗ್ ಎತ್ತಿಕೊಂಡು ಮುಖ್ಯರಸ್ತೆಯಲ್ಲಿದ್ದ ಬೈಕ್ ಒಂದರಲ್ಲಿ ಪರಾರಿಯಾಗಿರುವ ದೃಶ್ಯ ಕಂಡುಬಂದಿದೆ.

ಮಾಹಿತಿ ತಿಳಿದ ಕುಶಾಲನಗರ ಪೊಲೀಸರು ತಕ್ಷಣ ದುಷ್ಕರ್ಮಿಗಳ ಪತ್ತೆ ಕಾರ್ಯಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ.

ಸಿಸಿ ಕ್ಯಾಮೆರಾದ ದೃಶ್ಯಾ ವಳಿಗಳನ್ನು ಪರಿಶೀಲಿಸಿ ದುಷ್ಕರ್ಮಿಗಳ ಪತ್ತೆಗೆ ಕ್ರಮಕೈಗೊಳ್ಳಲಾಗುವದು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.