ಮಡಿಕೇರಿ, ಜು. 2: ದಕ್ಷಿಣ ಕೊಡಗಿನ ಹರಿಹರ ಮಾರ್ಗವಾಗಿ ಬಲ್ಯಮುಂಡೂರು ಮೂಲಕ ಪೊನ್ನಂಪೇಟೆ - ಗೋಣಿಕೊಪ್ಪಲು ಸಂಪರ್ಕ ರಸ್ತೆಯಲ್ಲಿ ಮಳೆಗಾಲದ ಸಂದರ್ಭ ಲಕ್ಷ್ಮಣತೀರ್ಥ ಪ್ರವಾಹ ದಿಂದ ಸಂಪರ್ಕ ಕಡಿತಗೊಳ್ಳುವದನ್ನು ತಪ್ಪಿಸಲು ಸೇತುವೆಯೊಂದನ್ನು ನಿರ್ಮಿಸಲಾಗಿದೆ. ಹರಿಹರ - ಬಲ್ಯಮುಂಡೂರು ಮಾರ್ಗದಲ್ಲಿ ಈ ಸೇತುವೆ ನಿರ್ಮಾಣವಾಗಿದ್ದರೂ ಸಾರ್ವಜನಿಕರ ಸಮಸ್ಯೆ ಮಾತ್ರ ಮುಕ್ತಿ ಕಂಡಿಲ್ಲ. ಸೇತುವೆ ನಿರ್ಮಾಣ ವಾಗಿದ್ದರೂ ಅದರ ಎರಡು ಬದಿಯಲ್ಲಿ ಸಂಪರ್ಕ ರಸ್ತೆ ಇನ್ನೂ ಸಮರ್ಪಕಗೊಳಿಸಲಾಗಿಲ್ಲ.ಇದರಿಂದಾಗಿ ವಾಹನಗಳು ತೆರಳಲು ಸೇತುವೆಯ ಬದಿಯಲ್ಲಿ ತಾತ್ಕಾಲಿಕ ರಸ್ತೆಯೊಂದನ್ನು ನಿರ್ಮಿಸಲಾಗಿದೆ. ಆದರೆ ಇದೀಗ ಈ ವ್ಯಾಪ್ತಿಯಲ್ಲಿ ಒಂದೆರಡು ದಿನಗಳಿಂದ ಮಳೆ ತುಸು ಹೆಚ್ಚಾಗಿ ಸುರಿದ ಹಿನ್ನೆಲೆಂ iÀುಲ್ಲಿ ಈ ತಾತ್ಕಾಲಿಕ ರಸ್ತೆ ಕೊಚ್ಚಿ ಹೋಗಿದ್ದು, ಈ ಮಾರ್ಗದಲ್ಲಿ ಸಂಪರ್ಕ ಕಡಿತ ಗೊಂಡಿದೆ. (ಮೊದಲ ಪುಟದಿಂದ) ಇದರಿಂದ ಸಾರ್ವಜನಿಕರು ಟಿ.ಶೆಟ್ಟಿಗೇರಿ - ಹುದಿಕೇರಿ ಮಾರ್ಗ ಅಥವಾ ಕೋತೂರು- ಕಾನೂರು ಮಾರ್ಗವನ್ನು ಅನಿವಾರ್ಯವಾಗಿ ಅವಲಂಬಿಸುವಂತಾಗಿದೆ.
ಸೂಕ್ತ ಸಮಯದಲ್ಲಿ ಸೇತುವೆ ಕಾಮಗಾರಿಯನ್ನು ಪೂರೈಸಿ ಎರಡು ಬದಿಗಳಲ್ಲಿ ಸಂಪರ್ಕ ರಸ್ತೆಯನ್ನು ಸಮರ್ಪಕಗೊಳಿಸದ ಹಿನ್ನೆಲೆಯಲ್ಲಿ ಈ ಸಮಸ್ಯೆ ತಲೆದೋರಿದೆ. ರಸ್ತೆ ಸಂಪರ್ಕ ಕಡಿತಗೊಂಡಿರುವದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಅತ್ತಿಂದಿತ್ತ ಚಲಿಸಲು ಪಡಿಪಾಟಲು ಅನುಭವಿಸುತ್ತಿದ್ದಾರೆ. ತಾತ್ಕಾಲಿಕ ರಸ್ತೆ ಕೊಚ್ಚಿ ಹೋಗಿ ಸಂಪರ್ಕ ಕಡಿತಗೊಂಡಿರುವ ಬಗ್ಗೆ ಸಂಬಂಧಿಸಿದ ಹಲವರಿಗೆ ಮಾಹಿತಿ ಇದ್ದರೂ ಈ ಬಗ್ಗೆ ಇನ್ನೂ ಯಾರೂ ತಲೆಕೆಡಿಸಿಕೊಂಡಿಲ್ಲ ಎಂದು ಸ್ಥಳೀಯರು ಆಕ್ಷೇಪಿಸಿದ್ದಾರೆ. ಜನಪ್ರತಿನಿಧಿಗಳು, ಜಿಲ್ಲಾಡಳಿತದ ಪ್ರಮುಖರು ಈ ಬಗ್ಗೆ ತುರ್ತು ಗಮನ ಹರಿಸುವಂತೆ ಅವರುಗಳು ಆಗ್ರಹಿಸಿದ್ದಾರೆ. ಇನ್ನೂ ಮಳೆಗಾಲದ ಬಿರುಸು ಹೆಚ್ಚಾಗಿ ಆರಂಭಗೊಂಡಿಲ್ಲ. ಮಳೆ ಅಧಿಕವಾದರೆ ಮತ್ತಷ್ಟು ಸಮಸ್ಯೆ ಎದುರಾಗಲಿದ್ದು, ತುರ್ತಾಗಿ ಇದನ್ನು ಸರಿಪಡಿಸುವಂತೆ ಅಲ್ಲಿನ ಪ್ರಭು ಮತ್ತಿತರರು ಒತ್ತಾಯಿಸಿದ್ದಾರೆ.