ಮಡಿಕೇರಿ, ಜು. 2: ಮಲೆನಾಡು ಜಿಲ್ಲೆಯಾದ ಕೊಡಗು ವರ್ಷಂಪ್ರತಿ ವಾತಾವರಣದ ಏರುಪೇರಿನಿಂದ ಗೋಚರಿಸುತ್ತಿರುವದು ಇತ್ತೀಚಿನ ವರ್ಷಗಳಲ್ಲಿ ನಿರಂತರವಾಗಿ ಮುಂದುವರಿಯುತ್ತಿದೆ. ಕಳೆದ ವರ್ಷ 2018ರಲ್ಲಿ ಬೇಸಿಗೆಯ ಅವದಿಯಲ್ಲೂ ಅಧಿಕ ಮಳೆಯನ್ನು ಕಂಡಿದ್ದ ಜಿಲ್ಲೆಯಲ್ಲಿ ಜೂನ್ ಎರಡನೆಯವಾರದಿಂದ ಆರಂಭಗೊಂಡ ಮುಂಗಾರು ಆ ಸಂದರ್ಭದಿಂದಲೇ ತನ್ನ ಪ್ರತಾಪವನ್ನು ತೋರಿತ್ತು.ಜಿಲ್ಲೆಯಲ್ಲಿ 2018ರ ಜನವರಿಯಿಂದ ಜುಲೈ 2ರ ತನಕ ಸರಾಸರಿ 53.87 ಇಂಚು ಮಳೆಯಾಗಿದ್ದರೆ, ಪ್ರಸಕ್ತ ವರ್ಷ ಈ ಅವಧಿಯಲ್ಲಿ ಕೇವಲ 16.63 ಇಂಚು ಮಳೆ ಬಿದ್ದಿದೆ. ಅದೂ ಸುರಿದಿರುವ ಮಳೆ ಇಡೀ ಜಿಲ್ಲೆಯಲ್ಲಿ ಏಕರೂಪದಿಂದ ಸುರಿದಿಲ್ಲ. ಒಂದೊಂದೆಡೆ ಒಂದೊಂದು ರೀತಿಯಲ್ಲಿ ಮಳೆಯ ಪ್ರಮಾಣ ಕಂಡು ಬಂದಿದೆ. ನಾಲ್ಕುನಾಡು ವಿಭಾಗದಲ್ಲಿ ಅಧಿಕ ಮಳೆಯಾಗಿದ್ದರೆ ಇನ್ನು ಹಲವು ಕಡೆಗಳಲ್ಲಿ ಮಳೆ ಕ್ಷೀಣಗೊಂಡಿದೆ. ದಕ್ಷಿಣ ಕೊಡಗಿನ ಹಲವೆಡೆಗಳಲ್ಲಿ ತುಸು ಹೆಚ್ಚು ಮಳೆ ಬಿದ್ದಿದೆಯಾದರೂ ಮತ್ತೆ ಕೆಲವು ಪ್ರದೇಶಗಳಲ್ಲಿ ಮಳೆಯ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ. ಸೋಮವಾರಪೇಟೆ ತಾಲೂಕಿನಲ್ಲಿಯೂ ಮುಂಗಾರು ಕ್ಷೀಣಗೊಂಡಿದೆ. ಜಿಲ್ಲಾ ಸರಾಸರಿ ತೆಗೆದುಕೊಂಡಲ್ಲಿ ಕಳೆದ ವರ್ಷಕ್ಕೂ ಈ ವರ್ಷಕ್ಕೂ 37.24 ಇಂಚು ವ್ಯತ್ಯಾಸ ದಾಖಲಾಗಿದೆ.
ಮಡಿಕೇರಿ ತಾಲೂಕಿನಲ್ಲಿ ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ 1.05 ಇಂಚು, ವೀರಾಜಪೇಟೆ ತಾಲೂಕಿನಲ್ಲಿ 0.46 ಇಂಚು ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 0.41 ಇಂಚು ಸರಾಸರಿ ಮಳೆಯಾಗಿದೆ.
ತಾಲೂಕುವಾರು ಮಾಹಿತಿ
ಕಳೆದ ವರ್ಷಕ್ಕೂ ಪ್ರಸಕ್ತ ಸಾಲಿನ ಮಳೆಗೂ ಹೋಲಿಸಿದರೆ, ಜಿಲ್ಲೆಯ ಮೂರು ತಾಲೂಕುಗಳಲ್ಲಿಯೂ ಈ ಬಾರಿ ಮಳೆ ಈ ತನಕ ತೀರಾ ಕಡಿಮೆಯಾಗಿದೆ. 2018ರಲ್ಲಿ ಜು. 2ರ ವೇಳೆಗೆ ಮಡಿಕೇರಿ ತಾಲೂಕಿನಲ್ಲಿ ಸರಾಸರಿ 70.30 ಇಂಚಿನಷ್ಟು ಮಳೆಯಾಗಿದ್ದರೆ ಈ ಬಾರಿ 20.95 ಇಂಚು ಮಾತ್ರ ಸುರಿದಿದೆ. ವೀರಾಜಪೇಟೆ ತಾಲೂಕಿನಲ್ಲಿಯೂ ಕಳೆದ ವರ್ಷ ಈ ಅವಧಿಯಲ್ಲಿ 49.79 ಇಂಚು ಮಳೆಯಾಗಿತ್ತು. ಆದರೆ ಈ ವರ್ಷ ಕೇವಲ 19.44 ಇಂಚು ಮಾತ್ರ ಮಳೆಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಕಳೆದ ವರ್ಷ 38.53 ಇಂಚು ಸರಾಸರಿ ಮಳೆಯಾಗಿದ್ದರೆ, ಪ್ರಸಕ್ತ ಸಾಲಿನಲ್ಲಿ 9.48 ಇಂಚು ಮಾತ್ರ ಮಳೆಯಾಗಿದೆ.
ಹೋಬಳಿವಾರು ಮಾಹಿತಿ
ಕಳೆದ 24 ಗಂಟೆಗಳಲ್ಲಿ ಭಾಗಮಂಡಲ ಹೋಬಳಿಯಲ್ಲಿ 2.56 ಇಂಚು, ಶ್ರೀಮಂಗಲ 0.80, ಹುದಿಕೇರಿ 0.76, ಶಾಂತಳ್ಳಿ 0.96 ಇಂಚು ಮಳೆಯಾಗಿರುವದು ಮಾತ್ರ ಕಂಡು ಬಂದಿದೆ. ಉಳಿದಂತೆ ಜಿಲ್ಲೆಯ ಇನ್ನಿತರ ಹೋಬಳಿಗಳಲ್ಲಿ ಈ ಪ್ರಮಾಣ ಇನ್ನೂ ಕಡಿಮೆಯಿದೆ.
ಜಿಲ್ಲೆಯಲ್ಲಿ ಮುಂದಿನ ಒಂದು ವಾರದಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಆದರೂ ಸಹ ಜಿಲ್ಲೆಯ ಒಳನಾಡು ಪ್ರದೇಶಗಳಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗಬಹುದು ಎಂದು ಬೆಂಗಳೂರಿನ ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿಯನ್ನು ಆಧರಿಸಿ ಜಿಲ್ಲಾಡಳಿತ ಮುನ್ಸೂಚನೆ ನೀಡಿದೆ.