ಕೂಡಿಗೆ, ಜು. 2: ಕೂಡಿಗೆ ಗ್ರಾಮ ಪಂಚಾಯಿತಿಗೆ ಮುಖ್ಯ ಮಂತ್ರಿ ಗ್ರಾಮ ವಿಕಾಸ ಯೋಜನೆ ಅಡಿಯಲ್ಲಿ ಈಗಾಗಲೇ ರೂ. 1 ಕೋಟಿ ಹಣ ಮಂಜೂರು ಆಗಿದ್ದು, ಈ ಹಣವು ಗ್ರಾಮದಲ್ಲಿ ಉತ್ತಮವಾಗಿ ಕಾಮಗಾರಿ ನಡೆಯುವದರೊಂದಿಗೆ ಗಾಮಸ್ಥರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಹೇಳಿದರು.
ಕೂಡಿಗೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಈ ಯೋಜನೆಯು ಸೋಮವಾರಪೇಟೆ ತಾಲೂಕಿನ ಕೂಡಿಗೆ, ನಂಜರಾಯ ಪಟ್ಟಣ, ಹುದೂರು, ನಿಡ್ತ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಲಾಗಿದೆ. ಅದರಂತೆ ಕೂಡಿಗೆ ಗ್ರಾಮದ ವಿಕಾಸ ಯೋಜನೆಯ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಈ ಯೋಜನೆಯಲ್ಲಿ ಗ್ರಾಮದೊಳಗಿನ ಪರಿಸರವನ್ನು ಉತ್ತಮಪಡಿಸಲು ರಸ್ತೆ, ಚರಂಡಿ, ಮತ್ತು ಗ್ರಂಥಾಲಯ, ಬಯಲು ರಂಗ ಮಂದಿರ, ಕ್ರೀಡಾ ಚಟುವಟಿಕೆಗಳ ಅಭಿವೃದ್ಧಿಗಾಗಿ ಆಟದ ಮೈದಾನ, ಸೌರ ಬೆಳಕು ದೀಪಗಳ ಅಳವಡಿಕೆ, ಗ್ರಾಮದ ಗುಡಿ ಕಟ್ಟಡಗಳ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸುವ ಉದ್ದೇಶವಾಗಿದೆ. ಈ ದೊಡ್ಡ ಮೊತ್ತದ ಹಣವನ್ನು ಸಮರ್ಪಕವಾಗಿ ವಿನಿಯೋಗ ಪಡಿಸಿಕೊಳ್ಳುವಂತೆ ಹೇಳಿದರು.
ಗ್ರಾಮವಿಕಾಸ ಯೋಜನೆ ಅಂಗವಾಗಿ ಹುದುಗೂರು ಗ್ರಾಮ ಆಟದ ಮೈದಾನದ ಗ್ಯಾಲರಿ 12ಲಕ್ಷದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಆರ್. ಮಂಜುಳಾ, ತಾಲೂಕು ಪಂಚಾಯಿತಿ ಸದಸ್ಯೆ ಸಬಿತ ಚನ್ನಕೇಶವ, ಗಣೇಶ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ, ಉಪಾಧ್ಯಕ್ಷ ಗಿರೀಶ್ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ಹಾಗೂ ತಾಲೂಕು ಪಂಚಾಯಿತಿ ಇಂಜಿನಿಯರ್ ವಿರೇಂದ್ರ, ಕೀರ್ತನ್, ಗ್ರಾಮಸ್ಥರು ಹಾಜರಿದ್ದರು.
ವಿವಿಧೆಡೆ ಭೂಮಿಪೂಜೆ
ಶಾಸಕರ ಅನುದಾನದ ರಸ್ತೆ ಕಾಮಗಾರಿಗಳಿಗೆ ಕೂಡಿಗೆ, ಕೂಡು ಮಂಗಳೂರು, ಮುಳ್ಳುಸೋಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಶಾಸಕ ಅಪ್ಪಚ್ಚುರಂಜನ್ ಅವರು ಭೂಮಿಪೂಜೆ ನೆರವೇರಿಸಿದರು.
ಕೂಡಿಗೆ ಗ್ರಾ.ಪಂ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದ ಸದ್ಗುರು ಅಪ್ಪಯ್ಯ ಪ್ರೌಢಶಾಲೆಗೆ ತೆರಳುವ ರಸ್ತೆ, ಕೂಡುಮಂಗಳೂರು ಗ್ರಾ.ಪಂ.ನ ಆನೆಕೆರೆ-ಚಿಕ್ಕತ್ತೂರು ಸಂಪರ್ಕ ರಸ್ತೆ, ಮುಳ್ಳುಸೋಗೆ ಗ್ರಾ.ಪಂ.ನ ನಾಗಮ್ಮನ ಮಂಟಿಗೆ ತೆರಳುವ ರಸ್ತೆಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು. ಶಾಸಕರ ನಿಧಿಯಿಂದ ಆಯಾ ಪಂಚಾಯಿತಿಗಳಿಗೆ ತಲಾ ಕಾಮಗಾರಿ ಗಳಿಗೆ ಐದು ಲಕ್ಷ ರೂಗಳನ್ನು ನೀಡಲಾಗಿದೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಮುಂದಿನ ದಿನಗಳಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತರುವದರ ಮೂಲಕ ಗ್ರಾ.ಪಂಗಳ ಪ್ರಗತಿಗೆ ಶ್ರಮಿಸಲಾಗು ವದು. ಅಲ್ಲದೆ ಶಾಸಕರ ಅನುದಾನದಲ್ಲಿ ಹೆಚ್ಚಿನ ಅನುದಾನ ನೀಡುವದರ ಮೂಲಕ ಗ್ರಾಮಗಳ ಉಪರಸ್ತೆಗಳ ಜೋಡಣೆಗೆ, ಗ್ರಾಮದ ಮೂಲಭೂತ ಸೌಕರ್ಯಗಳಿಗೆ, ಕುಡಿಯುವ ನೀರಿನ ಯೋಜನೆಗೆ ಹೆಚ್ಚಿನ ಒತ್ತು ನೀಡಲಾಗುವದು ಎಂದರು.
ಈ ಸಂದರ್ಭ ಜಿ.ಪಂ. ಸದಸ್ಯೆ ಕೆ.ಆರ್. ಮಂಜುಳಾ, ತಾ.ಪಂ. ಸದಸ್ಯೆ ಸಬಿತಾ ಚೆನ್ನಕೇಶವ, ಗಣೇಶ್, ಪುಷ್ಪಾ, ಮುಳ್ಳುಸೋಗೆ ಗ್ರಾ.ಪಂ. ಅಧ್ಯಕ್ಷೆ ಭವ್ಯ, ಕೂಡಿಗೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ, ಕೂಡಿಗೆ ಗ್ರಾ.ಪಂ. ಉಪಾಧ್ಯಕ್ಷ ಗಿರೀಶ್ ಕುಮಾರ್, ಕೂಡುಮಂಗಳೂರು ಗ್ರಾ.ಪಂ. ಸದಸ್ಯೆ ಸಾವಿತ್ರಿ ರಾಜು, ಪುಷ್ಪಾ ಸೇರಿದಂತೆ ಮೂರು ಗ್ರಾ.ಪಂ. ಸದಸ್ಯರುಗಳು, ತಾಲೂಕು ಪಂಚಾಯಿತಿ ಇಂಜಿನಿಯರ್ ವೀರೇಂದ್ರ, ಕೀರ್ತನ್ ಸೇರಿದಂತೆ ಆಯಾ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.