ಮಡಿಕೇರಿ, ಜು. 2: ಇಲ್ಲಿನ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ 2 ಪ್ರತ್ಯೇಕ ಪ್ರಕರಣಗಳ ವಿಚಾರಣೆಗಾಗಿ ಇಂದು ನ್ಯಾಯಾಲಯಕ್ಕೆ ಕರೆತರಲಾಗಿದ್ದ ಶಂಕಿತ ನಕ್ಸಲ್ ರೂಪೇಶ್ನ ಮುಂದಿನ ವಿಚಾರಣೆಯನ್ನು ಮಡಿಕೇರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಾ. 23ಕ್ಕೆ ಮುಂದೂಡಿದೆ.
ಕೊಡಗಿನಲ್ಲಿ ಮಾವೋವಾದಿ ಚಟುವಟಿಕೆ ನಡೆಸಿದ ಆರೋಪ ಎದುರಿಸುತ್ತಿರುವ ಶಂಕಿತ ನಕ್ಸಲ್ ಮುಖಂಡ ರೂಪೇಶ್ನನ್ನು ವಿಚಾರಣೆಗಾಗಿ ಮಡಿಕೇರಿಗೆ ಕರೆತರಲಾಗಿತ್ತು. ಬಿಗಿಭದ್ರತೆಯಲ್ಲಿ ಕೋರ್ಟಿಗೆ ಹಾಜರುಪಡಿಸುವ ವೇಳೆ ಮಾವೋವಾದಿ ಜಿಂದಾಬಾದ್ ಎಂದು ನಕ್ಸಲ್ವಾದದ ಪರ ರೂಪೇಶ್ ಘೋಷಣೆ ಕೂಗಿದ. ಪ್ರಕರಣಕ್ಕೆ ಸಂಬಂಧಿಸಿದಂತೆ ರೂಪೇಶ್ 7ನೇ ಬಾರಿ ವಿಚಾರಣೆಗೆ ಹಾಜರಾಗಿದ್ದು, ರೂಪೇಶ್ ವಿರುದ್ಧ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶಗಳಲ್ಲಿ ನಕ್ಸಲ್ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಬಗ್ಗೆ ಆರೋಪಗಳಿವೆ. 2010ರಲ್ಲಿ ಭಾಗಮಂಡಲ ಸಮೀಪದ ಮುಂಡ್ರೋಟು ಮತ್ತು 2013ರಲ್ಲಿ ಕಾಲೂರು ಗ್ರಾಮದಲ್ಲಿ ಈತ ಪ್ರತ್ಯಕ್ಷನಾಗಿದ್ದ ಎನ್ನಲಾಗಿದೆ. ಅಲ್ಲದೆ ಕಾಲೂರಿನ ನಿವಾಸಿ ಗಣೇಶ್ ಎಂಬವರ ಮನೆಗೆ ನುಗ್ಗಿ ಪಡಿತರ ಸಾಮಗ್ರಿ ಹೊತ್ತೊಯ್ದಿರುವದು ಮತ್ತು ಗ್ರಾಮಸ್ಥರಿಗೆ ಬೆದರಿಕೆ ಒಡ್ಡಿರುವ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣಗಳೂ ದಾಖಲಾಗಿವೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋರ್ಟ್ನಲ್ಲಿ ಸಮಯ ಕೇಳಿ ಕೋರ್ಟ್ ಹಾಲ್ನಲ್ಲೇ ತನ್ನ ಮೇಲಿರುವ ಆರೋಪಗಳ ಬಗ್ಗೆ ಅರಿತುಕೊಂಡು ತನ್ನ ಪರ ತಾನೇ ಒಂದೂವರೆ ಗಂಟೆಗೂ ಅಧಿಕ ಸಮಯ ರೂಪೇಶ್ ವಾದ ಮಂಡಿಸಿದ್ದು, ಕೊಡಗು ಹಾಗೂ ಕೇರಳ ದಲ್ಲಿ ತಾನು ಒಂದೇ ಸಮಯದಲ್ಲಿ ಇದ್ದೆ ಎಂದು ದಾಖಲಾಗಿದೆ. ಈ ಎರಡೂ ಕಡೆ ನಾನು ಒಂದೇ ಸಮಯದಲ್ಲಿ ಇರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾನೆ. ಇದರೊಂದಿಗೆ ನಕ್ಸಲ್ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿದ ಕೆಲ ತೀರ್ಪುಗಳನ್ನು ಉಲ್ಲೇಖಿಸಿ, ನನ್ನನ್ನು ಪ್ರಕರಣದಿಂದ ಕೈ ಬೀಡಬೇಕು ಎಂದು ವಾದ ಮಂಡಿಸಿದ್ದಾನೆ. ಆರೋಪಿಯ ವಾದ ಆಲಿಸಿದ ನ್ಯಾಯಾಲಯ ವಿಚಾರಣೆಯನ್ನು ತಾ. 23ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.
ನ್ಯಾಯಾಲಯದಿಂದ ಹೊರ ಬರುತ್ತಿದ್ದಂತೆ ಮತ್ತೊಮ್ಮೆ ನಕ್ಸಲ್ವಾದದ ಪರ ಘೋಷಣೆ ಕೂಗಿದ ರೂಪೇಶ್ನನ್ನು ಬಿಗಿ ಪೊಲೀಸ್ ಭದ್ರತೆಯಲ್ಲೇ ಕೇರಳಕ್ಕೆ ವಾಪಸ್ ಕರೆದೊಯ್ಯಲಾಯಿತು.