ಮಡಿಕೇರಿ, ಜೂ. 30: ದೇಶದ ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುತ್ತಿರುವ ವಾರಾಣಾಸಿಗೆ ಭೇಟಿ ನೀಡುವದರೊಂದಿಗೆ, ಕಾಶೀ ಶ್ರೀ ವಿಶ್ವನಾಥನಲ್ಲಿ ಕೊಡಗಿನ ಸುರಕ್ಷತೆಗಾಗಿ ತಾವು ವಿಶೇಷ ಪ್ರಾರ್ಥನೆ ಸಲ್ಲಿಸಿರುವದಾಗಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ. ಇತ್ತೀಚೆಗೆ ತಾವು ಕಾಶೀ ಯಾತ್ರೆ ಕೈಗೊಂಡಿದ್ದ ಕುರಿತು ‘ಶಕ್ತಿ’ಯೊಂದಿಗೆ ಅನಿಸಿಕೆ ಹಂಚಿಕೊಂಡರು.

ಕಳೆದ ವರ್ಷ ಅಮೇರಿಕಾ ಪ್ರವಾಸದಲ್ಲಿದ್ದ ವೇಳೆ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ್ದ ರಿಂದ, ಅನಿವಾರ್ಯವಾಗಿ ಪ್ರವಾಸ ಮೊಟಕುಗೊಳಿಸಿ ಹಿಂತಿರುಗಬೇಕಾ ಯಿತು ಎಂದು ಅವರು ನೆನಪಿಸಿದರು. ಪ್ರಸಕ್ತ ಕಾಶಿಗೆ ತೆರಳಿದ ವೇಳೆ ಈ ಹಿಂದೆ ಎರಡು ಬಾರಿ ಯಾತ್ರೆ ಹೋಗಿದ್ದಾಗ ನೋಡಿದ್ದ ಕಾಶಿ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ತಮಗೆ ಆನಂದ ಉಂಟು ಮಾಡಿದ್ದಾಗಿ ವಿವರಿಸಿದರು.

ವಿಶೇಷವಾಗಿ ಗಂಗಾನದಿ ಶುದ್ಧೀಕರಣದೊಂದಿಗೆ ಶ್ರೀ ವಿಶ್ವನಾಥ ದೇವಾಲಯ ಜೀರ್ಣೋದ್ಧಾರ ಗೊಳ್ಳುತ್ತಿರುವದಾಗಿ ಬೊಟ್ಟು ಮಾಡಿದ ಅವರು, ಮೊದಲ ಬಾರಿಗೆ ನೀರಿನ ಶುಭ್ರತೆ ಕಂಡು ಗಂಗಾಸ್ನಾನ ಮಾಡಿದ್ದಾಗಿ ಮಾಹಿತಿ ನೀಡಿದರು.

ಕಾಶಿಯಲ್ಲಿ ಸುಮಾರು 88 ಘಾಟ್‍ಗಳಿದ್ದು, ಈ ಪೈಕಿ ಗಂಗಾ ಘಾಟ್‍ನಲ್ಲಿ ನಿತ್ಯವೂ ಸೂರ್ಯಾಸ್ತದೊಂದಿಗೆ ನಡೆಯಲಿರುವ ಗಂಗಾ ಆರತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದೇಶ-ವಿದೇಶಗಳ ಭಕ್ತರು ಪಾಲ್ಗೊಳ್ಳುತ್ತಿದ್ದು, ಈ ಮಹಾ ಆರತಿ ನೋಡುವದೇ ಮಹಾ ಆನಂದವೆಂದು ಶಾಸಕರು ವ್ಯಾಖ್ಯಾನಿಸಿದರು.

ಕಾಶೀ ಶ್ರೀ ವಿಶ್ವನಾಥನೊಂದಿಗೆ ಶ್ರೀ ಅನ್ನಪೂರ್ಣೇಶ್ವರಿ ಹಾಗೂ ಕಾಲಬೈರವ ಸನ್ನಿಧಿಗಳಲ್ಲಿ ವಿಶೇಷ ಪೂಜೆ ಲಭಿಸಲಿದ್ದು, ಸುರಕ್ಷತೆ ದೃಷ್ಟಿಯಿಂದ ಮೊಬೈಲ್ ಇತ್ಯಾದಿ ನಿಷೇಧಿಸಿ ದರ್ಶನ ವೇಳೆ ಬಿಗಿ ಭದ್ರತೆ ಕಲ್ಪಿಸಲಾಗಿದೆ ಎಂದರು.

ಪ್ರಧಾನಿ ಮೋದಿ ಇಲ್ಲಿಂದ ಸಂಸದರಾದ ಬಳಿಕ ಸಾಕಷ್ಟು ಅಭಿವೃದ್ಧಿಗೊಂಡಿದೆ ಎಂದು ಅಲ್ಲಿನ ಆಟೋ ಹಾಗೂ ಟ್ಯಾಕ್ಸಿ ಚಾಲಕರು, ವರ್ತಕರು, ಹೊಟೇಲ್ ಉದ್ಯಮಿಗಳು ಹೆಮ್ಮೆಯ ನುಡಿಯಾಡುತ್ತಾರೆಂದು ಅವರು ಮಾರ್ನುಡಿದರು.

ಒಟ್ಟಾರೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಕ್ಷೇತ್ರವಾಗಿರುವ ವಾರಾಣಾಸಿ ನಗರದಲ್ಲಿ ಸಾಕಷ್ಟು ಅಭಿವೃದ್ಧಿಯೊಂದಿಗೆ ಬದಲಾವಣೆ ಪರ್ವ ಗೋಚರಿಸುತ್ತಿದೆ ಎಂದು ಅವರು ನುಡಿದರು. ವಾರದ ಹಿಂದೆ ಶಾಸಕರು ತಮ್ಮ ಪತ್ನಿ ಶೈಲಾ ಅಪ್ಪಚ್ಚು, ಪುತ್ರಿ ಕ್ಷೀರಾ ಹಾಗೂ ಅತ್ತೆ ಕಾವೇರಮ್ಮ ಅವರುಗಳೊಂದಿಗೆ ಕ್ಷೇತ್ರ ದರ್ಶನಕೈಗೊಂಡಿದ್ದರು.