ಮನುಷ್ಯನಿಗೆ ನೆಗಡಿಯಾದಾಗ ಮಾತ್ರ ಮೂಗಿನ ನೆನಪಾಗುವಂತೆ, ಕಾಯಿಲೆಗಳು ಬಂದಾಗ ಮಾತ್ರ ವೈದ್ಯರ ನೆನಪಾಗುವುದು ತೀರ ಸಹಜವಾಗಿದೆ. ಹೌದು, ಒಬ್ಬನು ತಾನೆಷ್ಟೇ ಆರೋಗ್ಯವಂತನಾಗಿದ್ದರೂ ಎಂದಾದರೊಮ್ಮೆ ಕಾಯಿಲೆಗೆ ತುತ್ತಾಗುವುದು ಸಹಜ. ಇಂತಹ ಸಮಸ್ಯೆಯು ಎದುರಾದಾಗ ವೈದ್ಯರ ಬಳಿಗೆ ಹೋಗಬೇಕಾದ ಅನಿವಾರ್ಯತೆಯೂ ಎದುರಾಗುತ್ತದೆ. ಆಗ, ನಮಗೆ ವೈದ್ಯರ ಪ್ರಾಮುಖ್ಯತೆಯು ಅರಿವಾಗುವುದು. ಈ ಹಿನ್ನೆಲೆಯಲ್ಲಿ ವರ್ಷಕ್ಕೊಮ್ಮೆ ಜುಲೈ ಒಂದರಂದು ವಿಶ್ವ ವೈದ್ಯರ ದಿನ ಆಚರಿಸಿ ವೈದ್ಯ ವೃತ್ತಿಗೆ ಗೌರವವನ್ನು ಕೊಡುವ ಸಂಪ್ರದಾಯವಿದೆ.
ವೈದ್ಯ ವೃತ್ತಿ ಎನ್ನುವ ವೃತ್ತಿ ಧರ್ಮದಲ್ಲಿ ಹಲವಾರು ಅಘೋಷಿತ ನಿಯಮಗಳೂ ಜಾರಿಯಲ್ಲಿವೆ. ಯಾವುದೇ ವ್ಯಕ್ತಿಯು ಆರೋಗ್ಯದ ಸಮಸ್ಯೆಯಿಂದ ಅಸಹಾಯಕನಾಗಿ ತನ್ನ ಬಳಿಗೆ ಬಂದಾಗ, ಅವನು ತನ್ನ ವೈರಿಯೇ ಆಗಿದ್ದರೂ, ಯಾವುದೇ ಕೋಮಿನವನೂ, ಜಾತಿಯವನೂ ಆಗಿದ್ದರೂ, ಯಾವುದೇ ದೇಶದವನೂ ಆಗಿದ್ದರೂ ಅವನನ್ನು ಪರೀಕ್ಷೆಗೊಳಪಡಿಸಿ ಸೂಕ್ತ ಚಿಕಿತ್ಸೆಯನ್ನು ಅವನಿಗೆ ನೀಡಲೇಬೇಕು. ಅಲ್ಲದೆ, ಹಣವನ್ನು ಕೊಡಲು ಆತನು ಸಮರ್ಥನಲ್ಲವೆಂದಾದರೂ ಕನಿಷ್ಟ ಪ್ರಥಮ ಚಿಕಿತ್ಸೆಯನ್ನು ನೀಡಲೇಬೇಕು. ಕಾಯಿಲೆಗಳು ಎಂದೂ ಹಗಲು, ರಾತ್ರಿ ಎಂದು ನೋಡಿ ಬರುವುದಿಲ್ಲ. ಹಾಗಾಗಿ ವೈದ್ಯರು ಆಪತ್ಕಾಲವಾದಾಗ ಯಾವ ಸಮಯದಲ್ಲಿ ಕರೆದರೂ ರೋಗಿಯನ್ನು ಪರಿಶೀಲಿಸಲೇಬೇಕು. ಅಲ್ಲದೆ ಯಾವುದೇ ವೈದ್ಯರು ರೋಗಿಯ ತಪಾಸಣೆಯ ಅನಂತರ ಇಂತಹುದೇ ಅಂಗಡಿಯಲ್ಲಿ ಔಷಧಿಯನ್ನು ಕೊಳ್ಳಬೇಕು ಎನ್ನುವಂತೆಯೂ ಇಲ್ಲ. ಅಲ್ಲದೆ ಹೋಮಿಯೋಪತಿ, ಆಯುರ್ವೇದ ವಿಭಾಗದ ವೈದ್ಯರು ಅಲೋಪತಿಯ ಔಷಧಿಗಳನ್ನು ನೀಡುವಂತೆಯೂ ಇಲ್ಲ. ಹಾಗೆಯೇ ಯಾವುದೇ ವೈದ್ಯರೂ ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಇಷ್ಟು ಹಣವು ಖರ್ಚಾಗುತ್ತದೆ ಎಂದು ಜಾಹೀರಾತನ್ನು ಹಾಕಿಕೊಳ್ಳುವಂತೆಯೂ ಇಲ್ಲ. ಹೀಗೆ ವೈದ್ಯರು ತಮ್ಮ ವೃತ್ತಿಯಲ್ಲಿ ಇಂತಹ ಕೆಲವು ನಿಯಮಗಳನ್ನು ಪಾಲಿಸಲೇಬೇಕಾಗುತ್ತದೆ.
ವೈದ್ಯರೂ ಮನುಷ್ಯರೇ ಆಗಿದ್ದು ಅವರಲ್ಲೂ ಅವರ ಸಂಸಾರದ ಜವಾಬ್ದಾರಿಗಳು ಇರುತ್ತವೆ ಎಂಬುದನ್ನು ಮರೆಯಬಾರದು. ಹಾಗಾಗಿ ಅವರಿಗೂ ವಿಶ್ರಾಂತಿ ಎಂಬುದು ಬೇಕಾಗುತ್ತದೆ, ತಮ್ಮ ಪತ್ನಿ ಮಕ್ಕಳೊಂದಿಗೆ ದಿನದ ಕೆಲವು ಸಮಯವನ್ನೂ ಕಳೆಯಬೇಕಾಗುತ್ತದೆ ಎಂಬ ಅಂಶವನ್ನು ರೋಗಿಗಳು ಮತ್ತು ಅವರ ಸಂಬಂಧಿಕರು ಗಮನಿಸಬೇಕು. ಯಾವುದೇ ವೈದ್ಯರು ಉದ್ದೇಶಪೂರ್ವಕವಾಗಿ ರೋಗಿಗೆ ಕೆಟ್ಟದಾಗಬೇಕು ಎಂದು ಬಯಸುವುದಿಲ್ಲ. ಆದರೂ ಕೆಲವು ಸಮಯ,ಸಂದರ್ಭಗಳಲ್ಲಿ, ಅದರಲ್ಲೂ ತಡವಾಗಿ ರೋಗಿಯು ವೈದ್ಯನ ಬಳಿಗೆ ಹೋದಾಗ ಸಮಯವು ಮೀರಿಹೋಗಿದ್ದು ಚಿಕಿತ್ಸೆಯು ವಿಫಲವಾಗಬಹುದು. ಆಗ, ವೈದ್ಯರ ಮೇಲೆ ಹಲ್ಲೆ ಮಾಡುವುದೋ, ಆತನನ್ನು ನಿಂದಿಸುವುದೋ ಮಾಡುವುದು ಶುದ್ಧ ತಪ್ಪಾಗುತ್ತದೆ. ಇಂತಹ ಹಲ್ಲೆಗಳಿಂದಾಗಿಯೇ ಹೆಚ್ಚಿನ ವೈದ್ಯರು ರೋಗಿಯ ಮನೆಗೆ ಹೋಗುವುದನ್ನೇ ಬಿಟ್ಟುಬಿಡುತ್ತಾರೆ.
ಇನ್ನು ಕೆಲವು ಕಡೆ ಲಕ್ಷಾಂತರವಲ್ಲ, ಕೋಟ್ಯಂತರ ಹಣವನ್ನು ಖರ್ಚು ಮಾಡಿ ಕಲಿತು ಬಂದ ವೈದ್ಯರು ಬೆಂಗಳೂರು ಮುಂತಾದ ಬೃಹತ್ ನಗರಗಳಲ್ಲಿ ಸೇವೆಯನ್ನು ಮಾಡುವಾಗ, ಅವರ ಮೂಲಕ ಆ ಆಸ್ಪತ್ರೆಯ ಮಾಲೀಕರು ಹಣಕ್ಕಾಗಿ ಅತಿಹೆಚ್ಚು ಶುಲ್ಕವನ್ನು ರೋಗಿಗಳ ಕಡೆಯಿಂದ ವಸೂಲಿ ಮಾಡುವುದೂ ಉಂಟು. ರೋಗಿಯು ಸತ್ತುಹೋಗಿದ್ದಾನೆ ಎಂಬ ಅಂಶವನ್ನು ಹೊರಹಾಕದೆ, ಆ ಹೆಣವನ್ನು ತೀವ್ರ ನಿಗಾ ಘಟಕದಲ್ಲಿರಿಸುವುದು. ಹೆಣಕ್ಕೆ ಆಪರೇಷನ್ ಮಾಡಿದಂತೆ ನಾಟಕವನ್ನು ಮಾಡುವುದು, ರೋಗಿಗೆ ಗುಣವಾಗದು ಎಂದು ಗೊತ್ತಿದ್ದರೂ ಅತಿಬೆಲೆ ಬಾಳುವ ಔಷಧಿಗಳ ಪ್ರಯೋಗವನ್ನು ಮಾಡಿದಂತೆ ನಟಿಸುವುದು ಮುಂತಾದ ಘಟನೆಗಳು ಕೆಲವೆಡೆ ನಡೆಯುತ್ತಲೇ ಇರುತ್ತವೆ. ಇವೆಲ್ಲವೂ ವೈದ್ಯ ವೃತ್ತಿಗೇ ಕಳಂಕವನ್ನು ತರುತ್ತವೆ; ಅಂತಹ ಆಸ್ಪತ್ರ್ರೆಗಳು ಅಸಹ್ಯವೆನಿಸುತ್ತವೆ. ಇಂತಹ ಆಸ್ಪತ್ರೆಗಳನ್ನು ನೋಡಿದಾಗಲೇ ಹಳೆಯ ಶುಭಾಷಿತವೊಂದರಂತೆ “ಯಮಧರ್ಮರಾಯನೇ, ನೀನು ಪ್ರಾಣವನ್ನು ಮಾತ್ರ ಒಯ್ಯುವೆ, ಆದರೆ ಈ ವೈದ್ಯರು ಪ್ರಾಣದೊಂದಿಗೆ ಹಣವನ್ನೂ ಒಯ್ಯುತ್ತಾರೆ” ಎನ್ನುವುದು ನೆನಪಿಗೆ ಬರುತ್ತದೆ.
ಇನ್ನು ನಕಲೀ ವೈದ್ಯರ ತಂಡವು ಬಹುತೇಕ ಎಲ್ಲ ನಗರಗಳಲ್ಲೂ ವ್ಯಾಪಿಸಿದೆ. ಯಾವುದೇ ವೈದ್ಯ ಶಿಕ್ಷಣವನ್ನು ಪಡೆಯದ ಇವರು ಕುತ್ತಿಗೆಗೆ ಸ್ತೆತಸ್ಕೋಪ್ ಹಾಕಿದ ಪಟವನ್ನು ತಮ್ಮ ಆಸ್ಪತ್ರೆಯ ಎದುರಿನಲ್ಲಿ ಹಾಕಿಸಿ ಬರುವ ಎಲ್ಲ ರೋಗಿಗಳಿಗೂ ಚಿಕಿತ್ಸೆಯನ್ನು ನೀಡುತ್ತಾರೆ. ಸ್ಟೆರಾಯಿಡ್‍ನಂತಹ ಭಾಗಷಃ ಅರಿವಳಿಕೆಗಳನ್ನು ರೋಗಿಗಳಿಗೆ ನೀಡಿ ತಾತ್ಕಲಿಕವಾಗಿ ಗುಣಪಡಿಸಿದಂತೆ ಮಾಡುತ್ತಾರೆ. ಇನ್ನು ರಸ್ತೆಬದಿಯ ನಕಲಿ ವೈದ್ಯರಂತೂ ಅದ್ಯಾವುದೋ ಎಣ್ಣೆಯಲ್ಲಿ ಹಲವಾರು ಗಿಡಮೂಲಿಕೆಗಳನ್ನು ಬೇಯಿಸಿ, ಅಲ್ಲೇ ಧೂಳಿನಲ್ಲಿ ಔಷಧಿಗಳನ್ನು ಕಾಯಿಸಿ, ತಯಾರಿಸಿ ರೋಗಿಗಳಿಗೆ ಮಾರುತ್ತಾರೆ. ಅವರ ಬಳಿ ಏಯ್ಡ್ಸ್ ನಂತಹ ಕಾಯಿಲೆಗಳಿಗೂ ಮದ್ದಿರುತ್ತದೆ.
ಪತ್ರಿಕೆಗಳಲ್ಲಿ ಫೋನ್ ಕರೆಗಳ ಮೂಲಕ ಚಿಕಿತ್ಸೆ ಕೊಡುವ ಠಕ್ಕ ವೈದ್ಯರು ಪೌರುಷ ಹೆಚ್ಚಿಸುವ ಔಷಧಿಗಳು, ಲಿಂಗವರ್ಧಕ ಯಂತ್ರಗಳು, ತಲೆಕೂದಲನ್ನು ಕಪ್ಪಾಗಿರಿಸುವ ಔಷಧಿಗಳು, ಮಧುಮೇಹಕ್ಕೆ ಶಾಶ್ವತ ಪರಿಹಾರ ನೀಡುವ ಔಷಧಿಗಳು, ತೊನ್ನಿಗೆ ಔಷಧಿಗಳು, ಪಾರ್ಶ್ವವಾಯುವಿಗೆ ಔಷಧಿಗಳನ್ನು ನೀಡುತ್ತಾರೆ. ಸರಕಾರದ ಮೂಗಿನ ನೇರದಲ್ಲಿಯೇ ಇಂತಹ ದಂಧೆಗಳು ನಡೆಯುತ್ತಿದ್ದರೂ ಸರಕಾರವು ಕಾನೂನಿನ ಕ್ರಮಗಳನ್ನು ಇವರ ಮೇಲೆ ಏಕೆ ಜರುಗಿಸುವುದಿಲ್ಲವೋ ತಿಳಿಯುವುದಿಲ್ಲ.
ಒಟ್ಟಿನಲ್ಲಿ, ರೋಗಿಗಳು ತುಸು ಹಣ ಖರ್ಚಾದರೂ ಪರವಾಗಿಲ್ಲ, ಸರಿಯಾಗಿ ಕಲಿತ ಪರಿಣತ ವೈದ್ಯರ ಬಳಿಗೆ ಹೋಗಿ ತಪಾಸಣೆ ಮಾಡಿಕೊಳ್ಳಬೆಕಲ್ಲದೆ ತಾವೇ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವುದು, ನಾಚಿಕೆಯಿಂದಾಗಿ ಅಂಚೆಯ ಮೂಲಕ ಔಷಧಿಯನ್ನು ಪಡೆಯುವುದು, ಹಣವನ್ನು ಉಳಿಸಲು ನಕಲಿ ವೈದ್ಯರ ಬಳಿಗೆ ಹೋಗುವುದು ಮುಂತಾದ ಕೆಲಸಗಳನ್ನು ಮಾಡಲೇಬಾರದು. ವೈದ್ಯರೂ ಸಹ ತಮ್ಮಲ್ಲಿಗೆ ಬರುವ ರೋಗಿಗಳಿಗೆ ತಮ್ಮಲ್ಲಿ ಚಿಕಿತ್ಸೆಗಳಿದ್ದರೆ ಮಾತ್ರ ನೀಡಬೇಕಲ್ಲದೆ ಕೇವಲ ಹಣ ಮಾಡುವುದಕ್ಕಾಗಿ ಎಲ್ಲ ಕಾಯಿಲೆಗಳಿಗೂ ಒಂದೇ ಮದ್ದಿನ ರಾಮಬಾಣವನ್ನು ನೀಡಿ ಹಣಮಾಡುವುದು ಅವರ ವೃತ್ತಿಯ ಪಾವಿತ್ರ್ಯತೆಗೆ ಭಂಗವಾಗುತ್ತದೆ.
ಒಟ್ಟಿನಲ್ಲಿ, ಭವಬಂಧನಗಳಿಗೆ ಆ ಹರಿನಾರಾಯಣನಿರುವಂತೆ ತನುಸಮಸ್ಯೆಗಳಿಗೆ ಈ ವೈದ್ಯರು ಇರುವದರಿಂದ ಇವರನ್ನು ನಾರಾಯಣೋ ಹರಿ ಎಂದು ಕರೆದು ಗೌರವವನ್ನು ನೀಡಲಾಗುತ್ತದೆ. ಈ ವೈದ್ಯರ ದಿನಾಚರಣೆಯಲ್ಲಿ ಎಲ್ಲ ವೈದ್ಯರಿಗೂ ಶುಭಾಶಯಗಳು.
- ಕಿಗ್ಗಾಲು ಎಸ್ ಗಿರೀಶ್, ಮೂರ್ನಾಡು