ಮಡಿಕೇರಿ, ಜೂ. 29: ನಿಲ್ಲಿಸಿದ್ದ ವಾಹನಗಳಿಂದ ಬ್ಯಾಟರಿಗಳನ್ನು ಕಳವು ಮಾಡುತ್ತಿದ್ದ ತಂಡವೊಂದನ್ನು ಬಂಧಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ
ಕುಶಾಲನಗರ ಬೈಚನಹಳ್ಳಿಯ ನಿವಾಸಿ ಬಿ.ಎಸ್. ಬಾಬು ಎಂಬವರಿಗೆ ಸೇರಿದ ಲಾರಿಯೊಂದರಿಂದ ರೂ. 22 ಸಾವಿರ ಮೌಲ್ಯದ ಎರಡು ಬ್ಯಾಟರಿಗಳನ್ನು ಕಳವು ಮಾಡಿರುವ ಬಗ್ಗೆ ತಾ. 25ರಂದು ಪೊಲೀಸ್ ದೂರು ದಾಖಲಾಗಿತ್ತು.
ಅದೇ ರೀತಿ ಕುಶಾಲನಗರ ಕರಿಯಪ್ಪ ಬಡಾವಣೆಯ ನಿವಾಸಿ ಸುರೇಶ್ ಎಂಬವರ ಲಾರಿಯಿಂದ 9 ಸಾವಿರ ಮೌಲ್ಯದ ಬ್ಯಾಟರಿ ಕಳವಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಅಲ್ಲದೆ ಕುಶಾಲನಗರ ಬೈಚನಹಳ್ಳಿಯ ನಿವಾಸಿ ಚೇತನ್ ಎಂಬವರ ಟಿಪ್ಪರ್ ಲಾರಿಯಿಂದಲೂ 10 ಸಾವಿರ ಮೌಲ್ಯದ ಬ್ಯಾಟರಿ ಕಳವಾಗಿರುವ ಬಗ್ಗೆ ಹಾಗೂ ಕುಶಾಲನಗರ ರಥಬೀದಿಯ ನಿವಾಸಿ ಗಣೇಶ್ ಎಂಬವರ ಲಾರಿಯಿಂದಲೂ 9 ಸಾವಿರ ಮೌಲ್ಯದ ಬ್ಯಾಟರಿ ಕಳವಾಗಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು.
ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ಲಾರಿಯ ಬ್ಯಾಟರಿಗಳನ್ನು ಕಳವು ಮಾಡಿದ ಆರೋಪಿಗಳ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಮಾರ್ಗದರ್ಶನದಲ್ಲಿ ಸೋಮವಾರಪೇಟೆ ಉಪ ವಿಭಾಗದ ಡಿಎಸ್‍ಪಿ ಪಿ.ಕೆ. ಮುರಳೀಧರ್ ನೇತೃತ್ವದಲ್ಲಿ ಪತ್ತೆ ಕಾರ್ಯ ಕೈಗೊಂಡ ಪೊಲೀಸರ ತಂಡ ಲಾರಿಯ ಬ್ಯಾಟರಿಗಳನ್ನು ಕಳವು ಮಾಡುತ್ತಿದ್ದ ಕುಶಾಲನಗರದ ಇಂದಿರಾ ಬಡಾವಣೆಯ ತೌಸಿಫ್, ಒಂದನೇ ಬ್ಲಾಕ್‍ನ ಮಹಮದ್ ಬಷೀರ್, ಬಾಪೂಜಿ ಬಡಾವಣೆಯ ಸಮೀರ್, ಮಾರ್ಕೆಟ್ ರಸ್ತೆಯ ಎಂ. ಗುಣಶೇಖರ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿ ಅವರುಗಳಿಂದ ಬ್ಯಾಟರಿಗಳನ್ನು ವಶಪಡಿಸಿಕೊಂಡಿದೆ.
ಕಾರ್ಯಾಚರಣೆಯಲ್ಲಿ ಕುಶಾಲನಗರ ಸಿಐ ಬಿ.ಎಸ್. ದಿನೇಶ್, ಠಾಣಾಧಿಕಾರಿಗಳಾದ ಪಿ.ಜಗದೀಶ್, ಎಂ.ಕೆ. ಸದಾಶಿವ, ಸಿಬ್ಬಂದಿಗಳಾದ ಎಂ. ರವೀಂದ್ರ, ಅರುಣ್ ಕುಮಾರ್, ಸುಧೀಶ್ ಕುಮಾರ್, ಸುನಿಲ್ ಮತ್ತು ಚಾಲಕರಾದ ಪ್ರವೀಣ್ ಭಾಗವಹಿಸಿದ್ದರು.