ಗೋಣಿಕೊಪ್ಪಲು, ಜೂ.29: ಇತ್ತೀಚೆಗೆ ದ.ಕೊಡಗಿನ ಕುಗ್ರಾಮಗಳಾದ ಈಸ್ಟ್‍ನೆಮ್ಮಲೆ, ವೆಸ್ಟ್‍ನೆಮ್ಮಲೆ, ಬೀರುಗ, ಕುರ್ಚಿ, ಬಿರುನಾಣಿ, ತೆರಾಲು, ಪರಕಟಗೇರಿ ಮುಂತಾದೆಡೆ ವಾಸಿಸುವ ರೈತರ, ಬೆಳೆಗಾರರ ಕಾಫಿ ತೋಟ - ಗದ್ದೆಗಳಿಗೆ ನಿರಂತರವಾಗಿ ಕಾಡಾನೆ ಲಗ್ಗೆ ಇಡುತ್ತಿರುವ ಬಗ್ಗೆ ಖುದ್ದಾಗಿ ಪರಿಶೀಲಿಸಿದ ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್ ಕಾಡಾನೆಯನ್ನು ಕಾಡಿಗೆ ಅಟ್ಟಲು ಅಗತ್ಯ ಕ್ರಮ ಕೈಗೊಳ್ಳಲು ಶ್ರೀಮಂಗಲ ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ 30ಕ್ಕೂ ಹೆಚ್ಚಿನ ಅರಣ್ಯ ಸಿಬ್ಬಂದಿಗಳು 3 ತಂಡಗಳಲ್ಲಿ ಬ್ರಹ್ಮಗಿರಿ ಅರಣ್ಯದ ಬೀರುಗ, ಇರ್ಪು, ಕುರ್ಚಿ, ಗ್ರಾಮದ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಸಿದರು. ಮುಂಜಾನೆಯಿಂದಲೇ ಆನೆ ಓಡಿಸುವ ಕಾರ್ಯದಲ್ಲಿ ತೊಡಗಿರುವ ಅರಣ್ಯ ಸಿಬ್ಬಂದಿಗಳು ಬೆಟ್ಟ ಗುಡ್ಡಗಳೆನ್ನದೆ ತಡರಾತ್ರಿಯವರೆಗೂ ಕಾಡಾನೆಗಳನ್ನು ಅರಣ್ಯಕ್ಕೆ ಸೇರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕಾರ್ಯಾಚರಣೆ ನಡೆಸುತ್ತಿರುವ ಸ್ಥಳಗಳಿಗೆ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಅರಣ್ಯ ಸಿಬ್ಬಂದಿಗಳು ಬಿಡುವಿಲ್ಲದಂತೆ ಆನೆಯನ್ನು ಕಾಡಿಗೆ ಅಟ್ಟುತ್ತಿದ್ದಾರೆ. ತುಂತುರು ಮಳೆಯ ನಡುವೆ ಕಾರ್ಯಾಚರಣೆಗೆ ಅಡಚಣೆ ಉಂಟಾದರೂ, ಲೆಕ್ಕಿಸದೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗುಂಪು ಗುಂಪಾಗಿ ಆನೆಗಳು ಕಾಫಿ ತೋಟಗಳಲ್ಲಿ ನೆಲೆನಿಂತಿದ್ದು ಇವುಗಳನ್ನು ಓಡಿಸಲು ಕೋವಿ, ಸಿಡಿಮದ್ದುಗಳನ್ನು ಬಳಸುತ್ತಿದ್ದು, ಆನೆ ಕಿರುಚುವ ಮಾದರಿಯ ವಸ್ತುಗಳನ್ನು ಬಳಸಿ ಆನೆ ಕಿರುಚಿದಂತೆ ಸದ್ದು ಮಾಡಿಕೊಂಡು ಅರಣ್ಯ ಸಿಬ್ಬಂದಿ ಕಾರ್ಯದಲ್ಲಿ ತೊಡಗಿದ್ದಾರೆ.

ಕಳೆದ ಅನೇಕ ಸಮಯಗಳಿಂದ ಕಾಡಾನೆಗಳು ಈ ಭಾಗದಲ್ಲಿ ಹೆಚ್ಚಾಗಿ ಸಂಚರಿಸುತ್ತಿರುವದರಿಂದ ಈ ಭಾಗದ ಬೆಳೆಗಾರರಿಗೆ ಹಾಗೂ ರೈತರಿಗೆ ಕಾಡಾನೆಯಿಂದ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗಿತ್ತು. ಅನೇಕ ಪ್ರಾಣ ಹಾನಿಯೂ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಧಿಕಾರಿ ಗಳು ಸ್ಥಳಕ್ಕೆ ಆಗಮಿಸಿ ಸಮಗ್ರ ಮಾಹಿತಿ ಪಡೆಯುವದರೊಂದಿಗೆ ಆನೆ ಕಾರ್ಯಾಚರಣೆ ನಡೆಸುವಂತೆ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಕಾಫಿ ತೋಟದಲ್ಲಿದ್ದ ಕಾಡಾನೆಗಳನ್ನು ಬ್ರಹ್ಮಗಿರಿ ಅರಣ್ಯ ಪ್ರದೇಶಕ್ಕೆ ಓಡಿಸುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸದ್ಯದ ಮಟ್ಟಿಗೆ ಯಶಸ್ವಿಯಾಗಿದ್ದಾರೆ.

ತಮ್ಮ ಜೀವವನ್ನು ಪಣಕ್ಕಿಟ್ಟು ಅರಣ್ಯದಲ್ಲಿರುವ ಕಾಡಾನೆಗಳನ್ನು ಓಡಿಸುವ ಕಾರ್ಯಕ್ಕೆ ಮುಂದಾಗುತ್ತೇವೆ. ಕಾಡಾನೆಗಳು ನಮ್ಮತ್ತ ತಿರುಗಿದಾಗ ದಿಕ್ಕೆ ತೋಚದಂತಾಗುತ್ತದೆ. ಓಡುವ ಸಂದರ್ಭ ಗುಂಡಿಗಳಲ್ಲಿ ಬಿದ್ದು ಗಾಯಗಳಾಗುವದು ಸಹಜ. ಗುಂಪಾಗಿ ಕಾರ್ಯಾಚರಣೆಗೆ ತೆರಳುವದರಿಂದ ಒಂದಷ್ಟು ದೈರ್ಯ ಬರುತ್ತದೆ. ಈ ಭಾಗದ ಕಾಫಿ ಬೆಳೆಗಾರರು, ರೈತರು ಇಲಾಖಾ ಸಿಬ್ಬಂದಿಗಳಿಗೆ ಸಹಕಾರ ನೀಡುತ್ತಾ ಬಂದಿದ್ದಾರೆ. ತಮ್ಮಲ್ಲಿರುವ ಕರ್ಕಶ ಶಬ್ದ ಬರುವ ಸಾಮಾಗ್ರಿಗಳಿಂದ ಆನೆಯನ್ನು ಓಡಿಸಲು ಅವಕಾಶವಾಗುತ್ತಿದೆ ಎಂದು ಅರಣ್ಯಾಧಿಕಾರಿಗಳಾದ ದಯಾನಂದ, ವೀರೇಂದ್ರ ಕುಮಾರ್ ಹಾಗೂ ಸಿಬ್ಬಂದಿ ಅಭಿಪ್ರಾಯಪಟ್ಟಿದ್ದಾರೆ.