ಮಡಿಕೇರಿ, ಜೂ.29: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿರುವ ದಲಿತರು, ಆದಿವಾಸಿಗಳು, ಬಡರೈತರು, ಕೂಲಿ ಕಾರ್ಮಿಕರಿಗೆ ಕೃಷಿಭೂಮಿ, ನಿವೇಶನದ ಹಕ್ಕುಪತ್ರ ಹಾಗೂ ಮೂಲಭೂತ ಸೌಕರ್ಯಗಳು ಮತ್ತು ಉದ್ಯೋಗ ದೊರಕಿಸಿಕೊಡುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘದ ಕೊಡಗು ಜಿಲ್ಲಾ ಸಮಿತಿ ಜಿಲ್ಲಾಧಿಕಾರಿ ಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಡಿ.ಎಸ್. ನಿರ್ವಾಣಪ್ಪ, ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ಕಂದೆಗಾಲ್, ಜಿಲ್ಲಾ ಸಮಿತಿ ಅಧ್ಯಕ್ಷ ಹೆಚ್. ಸಣ್ಣಪ್ಪ ಅವರುಗಳ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಗಾಂಧಿ ಮಂಟಪದ ಬಳಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಸಾಗಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಸಂಘದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ಕಂದೆಗಲ್, ಜಿಲ್ಲೆಯ ಹಲವು ಭಾಗಗಳಲ್ಲಿ ದಲಿತರು, ಆದಿವಾಸಿಗಳೂ ಬಡ ರೈತರ ಕೂಲಿ ಕಾರ್ಮಿಕರು ಸ್ವಂತ ಭೂಮಿ ಇಲ್ಲದೆ ಉದ್ಯೋಗವಿಲ್ಲದೆ, ಸ್ವಂತ ನಿವೇಶನ ಇಲ್ಲದೇ ಪರದಾಡುತ್ತಿದ್ದು, ಹಲವು ವರ್ಷಗಳಿಂದ ಅರ್ಜಿ ಸಲ್ಲಿಸುತ್ತ ಇದ್ದರೂ, ಬಡವರ ಅರ್ಜಿಗಳು ವಿಲೇವಾರಿ ಆಗದೆ ಮೂಲೆ ಸೇರಿವೆಯೆಂದು ಬೇಸರ ವ್ಯಕ್ತಪಡಿಸಿದರು.

ದಿಡ್ಡಳ್ಳಿ ಆದಿವಾಸಿಗಳನ್ನು ಬಸವನಹಳ್ಳಿ ಬ್ಯಾಡಗೊಟ್ಟಗಳಿಗೆ ಸ್ಥಳಾಂತರಿಸಿದ್ದು, ಇಲ್ಲಿರುವವರಿಗೆ ಅಗತ್ಯ ಕೆಲಸವಿಲ್ಲದೆ ಆಹಾರಕ್ಕೆ ಪರದಾಡುವಂತಾಗಿದೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿದ ಕಡು ಬಡವರು, ಸರ್ಕಾರದ ಪರಿಹಾರ, ಮನೆ, ಮೂಲಭೂತ ಸೌಕರ್ಯಗಳಿಂದ ವಂಚನೆಗೆ ಒಳಗಾಗಿದ್ದಾರೆ. ಸಂಘಟನೆಯ ಮೂಲಕ ಬಡವರ್ಗದ ಮಂದಿಗೆ ನಿವೇಶನ, ಭೂಮಿ, ಹಕ್ಕುಪತ್ರ ನೀಡುವಂತೆ ಸಲ್ಲಿಸಿದ ಮನವಿಗೆ ನ್ಯಾಯ ದೊರಕಿಲ್ಲ. ಆದ್ದರಿಂದ ಜಿಲ್ಲಾಡಳಿತ ತಮ್ಮ ಬೇಡಿಕೆಗಳಿಗೆ ತಿಂಗಳ ಒಳಗೆ ನ್ಯಾಯ ಒದಗಿಸಿಕೊಡುವಂತೆ ಒತ್ತಾಯಿಸಿದರು.

ಕರ್ನಾಟಕ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹೆಚ್.ಜೆ. ಪ್ರಕಾಶ್, ಸದಸ್ಯ ಜಯಣ್ಣ, ಸಿಪಿಐಎಂಎಲ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಸ್. ಆರ್. ಮಂಜುನಾಥ್ ಸೇರಿದಂತೆ ಸೇರಿದಂತೆ ಹಲವು ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.