ಮಡಿಕೇರಿ, ಜೂ. 29: ಕೊಡಗಿನ ನಿರಾಶ್ರಿತರಿಗಾಗಿ ನಿರ್ಮಿಸಲಾಗುತ್ತಿರುವ ಮನೆಗಳ ಪೈಕಿ ಬಹುಪಾಲು ಮನೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಿ ನಿರಾಶ್ರಿತರಿಗೆ ಜುಲೈ ಅಂತ್ಯದೊಳಗೆ ಹಸ್ತಾಂತರಿಸಲಾಗುವದು ಎಂದು ರಾಜ್ಯ ವಸತಿ ಖಾತೆ ಸಚಿವ ಎಂಟಿಬಿ ನಾಗರಾಜ್ ಭರವಸೆ ನೀಡಿದ್ದಾರೆ.ಪ್ರಾಕೃತಿಕ ವಿಕೋಪದಲ್ಲಿ ನಿರಾಶ್ರಿತರಾದವರಿಗಾಗಿ ಮನೆಗಳನ್ನು ನಿರ್ಮಿಸಲಾಗುತ್ತಿರುವ ಜಂಬೂರು, ಕರ್ಣಂಗೇರಿ ಹಾಗೂ ಮದೆನಾಡಿಗೆ ಭೇಟಿ ನೀಡಿ ಮನೆಗಳ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಸಚಿವರು ಮಾತನಾಡಿದರು. ಮನೆಗಳನ್ನು ವಸತಿ ಇಲಾಖೆ ವತಿಯಿಂದ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ನಿರ್ಮಾಣ ಮಾಡಲಾಗುತ್ತಿದೆ. ವಸತಿ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಅವರು ವಿಶೇಷ ಕಾಳಜಿ ವಹಿಸಿ ಕಾಮಗಾರಿಗಳ ಗುಣಮಟ್ಟ ಕಾಪಾಡಿಕೊಳ್ಳುವಲ್ಲಿ ಶ್ರಮಿಸಿದ್ದಾರೆ. ನಿರಾಶ್ರಿತರಿಗೆ ಉತ್ತಮ ಮನೆಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾಂಕ್ರಿಟ್ ಗೋಡೆಗಳನ್ನು ಒಳಗೊಂಡು ವಿಶೇಷ ತಂತ್ರಜ್ಞಾನದೊಂದಿಗೆ 560 ಚ. ಅಡಿ ಸುತ್ತಳತೆಯ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಗುಣಮಟ್ಟದ ಕಾಮಗಾರಿ ನಿರ್ವಹಣೆ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗುತ್ತಿದ್ದು, ಆದಷ್ಟು ಶೀಘ್ರ ಎಲ್ಲ ಮನೆಗಳ ನಿರ್ಮಾಣ ಕಾರ್ಯ ಪೂರ್ಣ ಗೊಳಿಸುವದಾಗಿ ಸಚಿವ ನಾಗರಾಜ್ ಆಶ್ವಾಸನೆಯಿತ್ತರು.
ವಸತಿ ಕಲ್ಪಿಸಲು ಕ್ರಮ ಜಿಲ್ಲೆಯಲ್ಲಿ ನಿವೇಶನಕ್ಕೆ 16 ಸಾವಿರ ಹಾಗೂ ವಸತಿಗಾಗಿ 9,976 ಬೇಡಿಕೆ ಇದ್ದು, ನಿವೇಶನ ಹಾಗೂ ವಸತಿ ರಹಿತರಿಗೆ ಮನೆ ನಿರ್ಮಿಸಿಕೊಡಲು ಮೈತ್ರಿ ಸರ್ಕಾರ (ಮೊದಲ ಪುಟದಿಂದ) ಪ್ರಯತ್ನಿಸುತ್ತಿದೆ ಎಂದು ವಸತಿ ಸಚಿವ ಎಂಟಿಬಿ ನಾಗರಾಜು ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಪ್ರಕೃತಿ ವಿಕೋಪದಿಂದ ತೊಂದರೆಗೆ ಸಿಲುಕಿದ ನಿರಾಶ್ರಿತರ ಜೊತೆಗೆ, ಇತರರಿಗೂ ಬಸವ, ಅಂಬೇಡ್ಕರ್, ಡಿ. ದೇವರಾಜ ಅರಸು, ವಸತಿ ಯೋಜನೆ ಮತ್ತು ಪ್ರಧಾನಮಂತ್ರಿ ನಗರ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡಲಾಗುವದು ಎಂದರು.
ಪ್ರಸ್ತುತ 318 ಮನೆಗಳ ಕಾಮಗಾರಿ ಭರದಿಂದ ಸಾಗಿದ್ದು, ಶೀಘ್ರ ಪೂರ್ಣಗೊಳ್ಳಲಿದೆ. ಹಾಗೆಯೇ ಕರ್ಣಂಗೇರಿಯಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣವಾಗುತ್ತಿದ್ದು, 20 ದಿನದಲ್ಲಿ ಪೂರ್ಣಗೊಳ್ಳಲಿದೆ. ಜಿಎಸ್‍ಐ ವರದಿಯಂತೆ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳ ಬಗ್ಗೆ ಕೂಡಲೇ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಸಚಿವರು ತಿಳಿಸಿದರು.
ಸಚಿವರ ಸಭೆ: ನಗರದ ಜಿಲ್ಲಾಡಳಿತ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು ನಿವೇಶನ ರಹಿತ ಹಾಗೂ ವಸತಿ ರಹಿತರಿಗೆ ಮನೆಗಳ ಅವಶ್ಯಕತೆಯಿದ್ದು. ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ವೈದ್ಯಕೀಯ ಕಾಲೇಜಿನ ಬಾಕಿ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.
ಶಾಸಕರಾದ ಅಪ್ಪಚ್ಚು ರಂಜನ್ ಅವರು ಮಾತನಾಡಿ ಜಿಲ್ಲೆಗೆ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ಅವಶ್ಯಕತೆಯಿದ್ದು, ಮಡಿಕೇರಿ ನಗರದ ಅರಣ್ಯ ಭವನ ಬಳಿ ಮೂರು ಎಕರೆ ಸರ್ಕಾರಿ ಜಾಗವಿದ್ದು ಈ ಜಾಗದಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣವಾದಲ್ಲಿ ಜಿಲ್ಲೆಯ ಜನತೆಗೆ ಅನುಕೂಲ ವಾಗಲಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಚಿವರ ಗಮನಕ್ಕೆ ತಂದರು.
ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ ಹಾಗೂ ವೀಣಾ ಅಚ್ಚಯ್ಯ ಅವರು ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಿನಿ ಬಸ್ಸು ಸೌಲಭ್ಯ ಕಲ್ಪಿಸಬೇಕು, ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ವಾಗುತ್ತದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸಚಿವರ ಗಮನಕ್ಕೆ ತಂದರು.
ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ.ಸಿಇಒ ಕೆ. ಲಕ್ಷ್ಮಿಪ್ರಿಯಾ, ಸಚಿವರ ಆಪ್ತ ಕಾರ್ಯದರ್ಶಿ ಜಗದೀಶ್, ಪುನರ್ ವಸತಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶ್ರೀನಿವಾಸ್ ಇತರರು ಇದ್ದರು. ಜಂಬೂರಿಗೆ ಸಚಿವರ ಭೇಟಿ ಸಂದರ್ಭ ಸೋಮವಾರಪೇಟೆ ತಾ.ಪಂ. ಅಧ್ಯಕ್ಷೆ ಪುಷ್ಪಾರಾಜೇಶ್, ಉಪಾಧ್ಯಕ್ಷ ಅಭಿಮನ್ಯುಕುಮಾರ್, ತಲಕಾವೇರಿ ದೇವಾಲಯ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಇತರರಿದ್ದರು.