ಗೋಣಿಕೊಪ್ಪ ವರದಿ, ಜೂ. 29 : ಗ್ರಾಮ ಪಂಚಾಯ್ತಿಗಳಲ್ಲಿ ಕಡ್ಡಾಯವಾಗಿ ಆರ್‍ಟಿಸಿ ವಿತರಣೆಗೆ ಕ್ರಮಕೈಗೊಳ್ಳಬೇಕು ಎಂದು ಪಂಚಾಯ್ತಿ ಅಭಿವೃಧ್ಧಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚಿಸಿದರು.ಅಮ್ಮತ್ತಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಸಮಸ್ಯೆ ಆಲಿಸಿ ಮಾತನಾಡಿದರು. ಬೆಳೆಗಾರರು, ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗುವಂತೆ ಆರ್‍ಟಿಸಿ ವಿತರಣೆಯಲ್ಲಿ ಲೋಪವಾಗದಂತೆ ಕ್ರಮಕ್ಕೆ ಸೂಚಿಸಿದರು. ಸಮಸ್ಯೆಗಳಿದ್ದಲ್ಲಿ ತಕ್ಷಣ ಪರಿಹಾರ ಕಂಡುಕೊಳ್ಳುವಂತೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು. ಪಂಚಾಯ್ತಿಗಳಲ್ಲಿ ಆರ್‍ಟಿಸಿ ಲಭ್ಯವಾಗಬೇಕು. ನಾಡಕಚೇರಿಗೆ (ಮೊದಲ ಪುಟದಿಂದ) ಅಲೆಯುವ ತೊಂದರೆ ತಪ್ಪಿಸಬೇಕು. ‘ಸರ್ವರ್’ ಸಮಸ್ಯೆ ಹೊರತು, ವಿತರಣೆಯಲ್ಲಿನ ಲೋಪ ಸರಿಪಡಿಸಿಕೊಳ್ಳುವಂತೆ ಸೂಚಿಸಿದರು. ಎರಡು ಗಂಟೆ ಅವಧಿಯಲ್ಲಿ ಸುಮಾರು 87 ಅರ್ಜಿದಾರರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಕ್ರಮಕೈಗೊಳ್ಳು ವದಾಗಿ ಭರವಸೆ ನೀಡಿದರು. ನಿತ್ಯ ಬರುವ ಎಲ್ಲಾ ಅರ್ಜಿಗಳನ್ನು ಆಯಾ ಇಲಾಖೆಗೆ ಕಳುಹಿಸಿ ಕ್ರಮಕೈಗೊಳ್ಳುವಂತೆ ಸೂಚಿಸಿದರು.

ತಾವೇ ಅರ್ಜಿ ಸ್ವೀಕರಿಸಿ ಅರ್ಜಿದಾರರಿಂದ ಸಮಸ್ಯೆಗಳನ್ನು ಆಲಿಸಿ, ಪ್ರಮುಖ ಸಮಸ್ಯೆಗಳಿಗೆ ಅಲ್ಲಿಂದಲೇ ಕರೆ ಮಾಡಿ ಸಂಬಂಧಿಸಿದ ಅಧಿಕಾರಿಗಳಿಗೆ ಕ್ರಮಕ್ಕೆ ಸೂಚಿಸಿದರು. ಮಳೆ, ಗಾಳಿಗೆ ಮನೆಗಳು ಬೀಳುವಂತೆ ಮರಗಳ ರೆಂಬೆಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ತಕ್ಷಣ ಕ್ರಮಕೈಗೊಳ್ಳುವಂತೆ ಸೂಚಿಸಿದರಲ್ಲದೆ, ವಿದ್ಯುತ್ ತಂತಿಗಳ ನಿರ್ವಹಣೆ ಮಾಡುವಂತೆ ಸೆಸ್ಕ್ ಅಧಿಕಾರಿಗಳಿಗೆ ತಿಳಿಸಿದರು.

ಬಸವ ಮನೆ ನಿರ್ಮಾಣ ಯೋಜನೆಯಲ್ಲಿ ಮೀಸಲಾತಿ ಗೊಂದಲ ನಿವಾರಣೆಗೆ ಕ್ರಮಕೊಳ್ಳ ಲಾಗುವದು. ಇದು ಜಿಲ್ಲಾ ಮಟ್ಟದ ಸಮಸ್ಯೆಯಾಗಿದ್ದು, ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳಲಾ ಗುವದು ಎಂದು ಆಶ್ವಾಸನೆ ನೀಡಿದರು.

ಕಳೆದ ವರ್ಷ ಬೆಳೆ ಕಳೆದುಕೊಂಡ ರೈತರಿಗೆ ಸರಿಯಾಗಿ ಪರಿಹಾರ ವಿತರಣೆಯಾಗಿಲ್ಲ ಎಂಬ ಆರೋಪದಲ್ಲಿ ನೈಜತೆ ಇದೆ. ಆರ್‍ಟಿಸಿ ಲೋಪ ಸಮಸ್ಯೆಗೆ ಕಾರಣವಾಗಿದೆ. ಬೆಳೆ ದಾಖಲು ವಿಚಾರದಲ್ಲಿ ತಪ್ಪಾಗಿರುವದರಿಂದ ಜಿಲ್ಲೆಯಲ್ಲಿ ಸಮಸ್ಯೆಯಾಗಿದೆ. ಮುಂದಿನ 3-4 ದಿನಗಳಲ್ಲಿ ಆರ್‍ಟಿಸಿ ಲೋಪ ಸರಿಯಾಗಲಿದೆ. ಪರಿಹಾರ ವಿತರಣೆ ಲೋಪ ಸರಿಪಡಿಸಲಾಗುವದು ಎಂದರು.

ಪಿಂಚಣಿದಾರರ ಸಮಸ್ಯೆಯನ್ನು ಕೂಡ ಗಂಭೀರವಾಗಿ ಪರಿಗಣಿಸಲಾಗು ವದು. ಸುಮಾರು 2 ರಿಂದ 6 ತಿಂಗಳವರೆಗೆ ಪಿಂಚಣಿ ಕಳೆದುಕೊಂಡಿ ರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ತಮ್ಮ ಕಚೇರಿಯಲ್ಲಿ ಸಂಬಂದಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವದು ಎಂದು ಭರವಸೆ ನೀಡಿದರು.

ಪಾಲಿಬೆಟ್ಟ ಪೊಲೀಸ್ ವಸತಿ ಗೃಹ ನಿವೇಶನದ ಹಕ್ಕುಪತ್ರ ಗೊಂದಲ ನಿವಾರಿಸಲಾಗುವದು. ಅಮ್ಮತ್ತಿ ನಾಡಕಚೇರಿಯಲ್ಲಿ ಯುಪಿಎಸ್ ಕೆಟ್ಟಿರುವದಕ್ಕೆ ಕ್ರಮಕೈಗೊಳ್ಳಲಾಗುವದು. 1 ತಿಂಗಳ ಒಳಗೆ ಸಮಸ್ಯೆ ಬಗೆಹರಿಯಲಿದೆ ಎಂದರು.

ಅಮ್ಮತ್ತಿ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆ, ಸರ್ವೆ ಇಲಾಖೆ ಮೂಲಕ ಪರಿಹಾರ ಕಾಣಬೇಕಾಗಿರುವ 271 ಕುಟುಂಬಗಳ ಸಮಸ್ಯೆ ಆಲಿಸಲು ಶೀಘ್ರದಲ್ಲಿ ವಿಶೇಷ ಜನಸಂಪರ್ಕ ಸಭೆ ಕರೆಯಲು ತಿಳಿಸಿದರು.

ಮಾಲ್ದಾರೆ ವ್ಯಾಪ್ತಿಯ ಸಾರ್ವಜನಿಕರ ಪ್ರತೀ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಶೇಷ ಸಭೆ ನಡೆಸಲಾಗುವದು. ಒಬಿಸಿ ಮೀಸಲಾತಿ ಮೂಲಕ ಮೊದಲಿಯಾರ್ ಜಾತಿ ಪ್ರಮಾಣಪತ್ರ ದೊರೆಯುವಂತೆ ಕ್ರಮಕೈಗೊಳ್ಳಲಾಗು ವದು ಎಂದರು. ಗೋಮಾಳ ಪ್ರದೇಶದಲ್ಲಿನ ಗೋವುಗಳ ಗಣತಿ ಕಾರ್ಯ ನಡೆಯುತ್ತಿದೆ. ಈ ಜಾಗದಲ್ಲಿ ಹಕ್ಕುಪತ್ರ ನೀಡಲು ಕಾನೂನು ತೊಡಕ್ಕಿದೆ ಎಂದರು.

ರೈತ ಕೇಚಂಡ ಕುಶಾಲಪ್ಪ ಬೆಳೆಗಾರರ ಸಮಸ್ಯೆ, ಕಾಫಿ ಬೆಲೆ ಕುಸಿತ, ಕಾಡಾನೆ ಸಮಸ್ಯೆ, ಸರ್ವೇ ಇಲಾಖೆಯಲ್ಲಿನ ಲೋಪದ ಬಗ್ಗೆ ಹೇಳಿಕೊಂಡರು. ಈ ಸಂದರ್ಭ ತಹಶೀಲ್ದಾರ್ ಗೋವಿಂದರಾಜು, ಇಒ ಜಯಣ್ಣ, ಡಿವೈಎಸ್ಪಿ ನಾಗಪ್ಪ ಇದ್ದರು. ಸುಮಾರು 400 ಕ್ಕೂ ಅಧಿಕ ಸಾರ್ವಜನಿಕರು ಪಾಲ್ಗೊಂಡಿದ್ದರು.

-ಸುದ್ದಿಪುತ್ರ