ಗೋಣಿಕೊಪ್ಪ ವರದಿ, ಜೂ. 28 ; ಗೋಣಿಕೊಪ್ಪ ಇತಿಹಾಸದಲ್ಲಿ ಗೋಣಿಕೊಪ್ಪ ಎಂದೇ ಕರೆಸಿಕೊಳ್ಳುತ್ತಿದ್ದ ಗೋಣಿಕೊಪ್ಪ ಗ್ರಾಮದ ಹೆಸರನ್ನು ಉಳಿಸಿಕೊಳ್ಳಬೇಕಿದೆ ಎಂದು ಅಭಿಪ್ರಾಯ ಗೋಣಿಕೊಪ್ಪ ಗ್ರಾಮದ ಹೆಸರಿನಲ್ಲಿನ ಗೊಂದಲ ನಿವಾರಣೆಗೆ ಗೋಣಿಕೊಪ್ಪ ಪ್ರೆಸ್‍ಕ್ಲಬ್ ವತಿಯಿಂದ ಆಯೋಜಿಸಿದ್ದ ಮುಕ್ತ - ಮುಕ್ತ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ 98 ಇಳೀ ವಯಸ್ಸಿನ ಗೋಣಿಕೊಪ್ಪ ಪುರಸಭೆ ಪ್ರಥಮ ಅಧ್ಯಕ್ಷ ಬುಟ್ಟಿಯಂಡ ಅಪ್ಪಾಜಿ ಅಭಿಪ್ರಾಯ ವ್ಯಕ್ತಪಡಿಸಿದರು. ಗೋಣಿಕೊಪ್ಪವನ್ನು ಗೋಣಿಕೊಪ್ಪಲ್, ಗೋಣಿಕೊಪ್ಪಲು ಎಂದು ಕರೆಯಲಾಗುತ್ತಿದೆ. ಮೂಲ ಹೆಸರಿನ ರಕ್ಷಣೆಗೆ ಮುಂದಾಗಬೇಕಿದೆ ಎಂದು ಅವರು ಮನವಿ ಮಾಡಿಕೊಂಡರು.
ನಮ್ಮ ಕಾಲದಿಂದಲೂ ಗೋಣಿಕೊಪ್ಪ ಎಂದೇ ಕರೆಸಿ ಕೊಳ್ಳುತ್ತಿತ್ತು. ಕೊಡವ ಭಾಷೆಯೊಂದಿಗೆ ಇಂಗ್ಲೀಷ್‍ನಲ್ಲಿ ಗೋಣಿಕೊಪ್ಪಲ್, ಕನ್ನಡದಲ್ಲಿ ಗೋಣಿಕೊಪ್ಪಲು ಎಂದು ಕರೆಯಲಾಗುತ್ತಿದೆ. ಗೋಣಿಕೊಪ್ಪ ಎಂಬ ಹೆಸರು 1957 ರಲ್ಲಿ ಸರ್ಕಾರದ ಆಡಳಿತ ವ್ಯವಸ್ಥೆಯಡಿ ನೋಟಿಫೈ ಏರಿಯಾ ಎಂದು ಗೋಣಿಕೊಪ್ಪವನ್ನು ಗುರುತಿಸಲಾಗಿತ್ತು. ತಹಶೀಲ್ದಾರ್ ಅಧ್ಯಕ್ಷರಾಗಿದ್ದರು. ಕೊಂಗಂಡ ಗಣಪತಿ ಉಪಾಧ್ಯಕ್ಷರಾಗಿದ್ದರು. ನಂತರ ಪುರಸಭೆ, ಮಂಡಲ ಪಂಚಾಯ್ತಿ, ಗ್ರಾಮ ಪಂಚಾಯ್ತಿಯಾಗಿ ಬದಲಾಗಿದೆ. ಆದರೆ, ನೋಟಿಫೈ ಏರಿಯಾ ಎಂದು ಘೋಷಣೆಯಾಗುವ ಸಂದರ್ಭ ಮತ್ತು ಪುರಸಭೆ ಇದ್ದ ಕಾಲಘಟ್ಟದಲ್ಲಿಯೂ ಗೋಣಿಕೊಪ್ಪ ಹೆಸರು ಹೆಚ್ಚು ಚಾಲ್ತಿಯಲ್ಲಿತ್ತು. ಇದನ್ನೇ ಮುಂದುವರಿಸಿಕೊಂಡು ಮೂಲ ಹೆಸರನ್ನು ಕಾಪಾಡಿಕೊಳ್ಳುವ ಅವಶ್ಯಕತೆ ಇದೆ ಎಂದು ಅಪ್ಪಾಜಿ ಹೇಳಿದರು.
ಪುರಸಭೆ ಅಧ್ಯಕ್ಷರಾಗಿದ್ದ ಸಂದರ್ಭ ಒಂದಷ್ಟು ಇಲಾಖೆಗಳಿಗೆ ಗೋಣಿಕೊಪ್ಪಲ್ ಎಂದು ಹೆಸರನ್ನು ಬದಲಾಯಿಸಿಕೊಳ್ಳುವಂತೆ ಸಲಹೆ ನೀಡಿದ್ದೆ. ಅದು ಕಾರ್ಯಗತ ವಾಗಿರಲಿಲ್ಲ. ಮೂಲ ಹೆಸರಿನಲ್ಲಿದ್ದ ಗೋಣಿಕೊಪ್ಪ ಹೆಸರು ಉಳಿಸಲು ಮುಂದಾಗಬೇಕಿದೆ ಎಂದರು.
ಪಟ್ಟಣದಲ್ಲಿ 39 ವರ್ಷಗಳಿಂದ ಖಾಸಗಿ ಬಸ್ ಎಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಚ್ಚಕಾಳೇರ ನಂದಾ ಕಾವೇರಪ್ಪ ಮಾತನಾಡಿ, ನನ್ನ ವೃತ್ತಿ ಆರಂಭದಿಂದಲೂ ಗೋಣಿಕೊಪ್ಪ ಎಂದೇ ಕರೆಯುತ್ತಿದ್ದೇವೆ. ಇಂದು ಕೂಡ ಖಾಸಗಿ ಹಾಗೂ ಸರ್ಕಾರಿ ಬಸ್ ನಾಮಫಲಕದಲ್ಲಿ ಗೋಣಿಕೊಪ್ಪ ಎಂದೇ ಬಳಕೆಯಾಗುತ್ತಿದೆ. ಗೋಣಿಕೊಪ್ಪ ಹೆಸರನ್ನು ರಕ್ಷಿಸಿಕೊಳ್ಳಬೇಕಿದೆ ಎಂದರು.
ಅಂಚೆ ಇಲಾಖೆ ನಿವೃತ್ತ ಪೋಸ್ಟ್ ಮಾಸ್ಟರ್ ಶರೀಫಾ ಮಾತನಾಡಿ, ಅಂಚೆ ಮುದ್ರೆಯಲ್ಲೂ ಗೋಣಿಕೊಪ್ಪಲ್ ಎಂದು ಬಳಸಲಾಗುತ್ತಿದೆ. ಇದನ್ನು ಅಂಚೆ ಅದಾಲತ್‍ನಲ್ಲಿ ಸಮಸ್ಯೆ ಹಂಚಿಕೊಂಡು ಬದಲಾಯಿಸಿಕೊಳ್ಳುವ ಅವಕಾಶದ ಬಗ್ಗೆ ತಿಳಿಸಿದರು.
ಗೋಣಿಕೊಪ್ಪ, ಗೋಣಿಕೊಪ್ಪಲ್, ಗೋಣಿಕೊಪ್ಪಲು ಈ ಬಗ್ಗೆ ಗೊಂದಲ ನಿವಾರಿಸಿಕೊಂಡು ಮುಂದುವರಿಯಬೇಕಾದ ಅನಿವಾರ್ಯತೆ ಬಗ್ಗೆ ಪಾಲ್ಗೊಂಡ ಪ್ರಮುಖರು ಒತ್ತಾಯಿಸಿದರು.
ಬಸ್ ನಿಲ್ದಾಣಕ್ಕೂ ಒತ್ತಾಯ : ಗೋಣಿಕೊಪ್ಪದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸುವಂತಾಗಬೇಕು ಎಂಬ ಒತ್ತಾಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಂದ ಕೇಳಿ ಬಂತು.
ಗೋಣಿಕೊಪ್ಪ ಪಟ್ಟಣಕ್ಕೆ ದಿನಂಪತ್ರಿ ಸಾವಿರಾರು ಪ್ರಯಾಣಿಕರು ಆಗಮಿಸುತ್ತಿದ್ದರೂ ಸುಸಜ್ಜಿತ ಬಸ್ ನಿಲ್ದಾಣ ಇಲ್ಲದಿರುವದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಬಸ್ ನಿಲ್ದಾಣ ನಿರ್ಮಿಸಬೇಕು ಎಂದು ಖಾಸಗಿ ಬಸ್ ಹಿರಿಯ ಎಜೆಂಟ್ ಅಚ್ಚಕಾಳೇರ ನಂದಾ ಕಾವೇರಪ್ಪ ಒತ್ತಾಯಿಸಿದರು. ಇರುವ ತಂಗುದಾಣ ಸ್ವಚ್ಛತೆಯಲ್ಲಿಲ್ಲ. ಪ್ರಯಾಣಿಕರು ಬಳಸುವಂತಿಲ್ಲ. ಭಿಕ್ಷುಕರು, ಪುಂಡರ ಅಡ್ಡೆಯಾಗಿ ಮಾರ್ಪಟ್ಟಿದೆ. ಪೊಲೀಸರು ಈ ಬಗ್ಗೆ ಕ್ರಮಕೈಗೊಳ್ಳುತ್ತಿಲ್ಲ. ಶೌಚಗೃಹ ಗೂಡಿನಂತೆ ಇರುವದರಿಂದ ಪ್ರಯಾಣಿಕರಿಗೆ ಶೌಚಗೃಹ ಇರುವ ಬಗ್ಗೆ ಮಾಹಿತಿ ಇಲ್ಲ. ನಾವೇ ದಾರಿ ತೋರಿಸುತ್ತಿದ್ದೇವೆ. ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.
ಹಿಂದೆ ಇದ್ದ ಬಸ್ ನಿಲ್ದಾಣದಲ್ಲಿ ಬಟ್ಟೆ ಬದಲಿಸಲು ಕೂಡ ಅವಕಾಶವಿತ್ತು. ಈಗ ಶೌಚಗೃಹ ಕೂಡ ಸರಿಯಾಗಿ ಇಲ್ಲದಿರುವದು ಬೇಸರದ ಸಂಗತಿ ಎಂದು ಬುಟ್ಟಿಯಂಡ ಅಪ್ಪಾಜಿ ನೋವು ಹಂಚಿಕೊಂಡರು. ಇಂದಿನ ಜನಪ್ರತಿನಿಧಿಗಳಲ್ಲಿ ಸೇವಾ ಭಾವನೆ ಕಡಿಮೆಯಾಗುತ್ತಿದೆ. ನಾವು ಅಂದಿನ ಕಾಲದಲ್ಲಿ ಸಾಲ ಮಾಡಿ ಯೋಜನೆ ಅನುಷ್ಠಾನ ಮಾಡುತ್ತಿದ್ದೆವು. ಆಸೆ ಹೆಚ್ಚಾಗುತ್ತಿದ್ದಂತೆ ಸಾರ್ವಜನಿಕ ಸೇವೆ ಚಿಂತನೆ ಮರೆಯಾಗುತ್ತಿದೆ ಎಂದು ಅವರು ಹೇಳಿದರು.
98 ರ ಇಳಿ ವಯಸ್ಸಿನಲ್ಲಿಯೂ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೋಣಿಕೊಪ್ಪ ಹೆಸರನ್ನು ಉಳಿಸಿಕೊಳ್ಳುವ ಬಗ್ಗೆ ಒತ್ತಾಯಿಸಿದ ಹಿರಿಯರಾದ ಬುಟ್ಟಿಯಂಡ ಅಪ್ಪಾಜಿ ಚೈತನ್ಯ ಮೂಡಿಸಿದರು. ಮುಖ್ಯರಸ್ತೆಯಲ್ಲಿ ಗೋಣಿಕೊಪ್ಪ ಗ್ರಾಮವನ್ನು ಸೂಚಿಸುವ ಮೈಲುಕಲ್ಲು ಚಿತ್ರವನ್ನು ಈ ಸಂಧರ್ಭ ಅನಾವರಣಗೊಳಿಸಲಾಯಿತು.
ಪ್ರೆಸ್‍ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಪ್ರಧಾನ ಕಾರ್ಯದರ್ಶಿ ಎಚ್. ಕೆ. ಜಗದೀಶ್ ಇದ್ದರು.