ಕೂಡಿಗೆ, ಜೂ. 27: ಕೂಡಿಗೆ ಗ್ರಾಮ ಪಂಚಾಯಿತಿಯ ಹುದುಗೂರಿನ ಸರ್ವೆ ನಂ.8/1 ರಲ್ಲಿ ನಿವೇಶನಕ್ಕಾಗಿ ಕಾದಿರಿಸಿದ್ದ 4 ಎಕರೆ ಜಾಗದಲ್ಲಿ ಪಶುವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯ ಉಪ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮತ್ತು ಸರ್ಕಾರಿ ಶಾಲೆಯನ್ನು ತೆರೆಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕೂಡಿಗೆ ಗ್ರಾಮ ಪಂಚಾಯ್ತಿಯ ಹುದುಗೂರಿನಲ್ಲಿ ಆ ವಾರ್ಡಿನ ಸದಸ್ಯ ರವಿ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಡ್ ಸಭೆಯಲ್ಲಿ ನಿವೇಶನ ಬಗ್ಗೆ ಸುಧೀರ್ಘ ಚರ್ಚೆಗಳು ನಡೆದವು. ನಿವೇಶನಕ್ಕೆ ಕಾದಿರಿಸಿದ ಜಾಗವು ಕಕ್ಕೆಹೊಳೆಯು ಹಾರಂಗಿ ನದಿಗೆ ಸೇರುವ ಸಮೀಪದ ಜಾಗವಾಗಿರುತ್ತದೆ. ಹಾರಂಗಿ ಅಣೆಕಟ್ಟೆಯಿಂದ ಹೆಚ್ಚುವರಿಗೆ ನೀರನ್ನು ಹರಿಸಿದಾಗಿ ಈ ಜಾಗವು ನೀರಿನಿಂದ ಮುಳುಗಡೆಯಾಗುತ್ತದೆ. ಅಲ್ಲದೆ, ಕಾದಿರಿಸಿದ ನಾಲ್ಕು ಎಕರೆಯಲ್ಲಿ ಎರಡೂವರೆ ಎಕರೆ ಜಾಗವು ಅರಣ್ಯ ಇಲಾಖೆಯ ಹೆಸರಿನಲ್ಲಿದೆ. ಪಹಣಿಯಲ್ಲಿ ಕಾರ್ಯನಿರ್ವ ಹಣಾಧಿಕಾರಿಗಳ ಹೆಸರಿನಲ್ಲಿದ್ದರೂ ಸರ್ವೆ ನಂ.8/1 ಅರಣ್ಯ ಇಲಾಖೆಯ ಸುಪರ್ದಿಯಲ್ಲಿದೆ. ಅದರಿಂದಾಗಿ ಈ ಜಾಗದಲ್ಲಿ ನಿವೇಶನ ನೀಡುವ ಬದಲು ಪೈಸಾರಿ ಜಾಗದಲ್ಲಿ ನಿವೇಶನ ನೀಡಿ, ಈ ಜಾಗವನ್ನು ಗ್ರಾಮದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಉಮಾಮಹೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಎಂ. ಚಾಮಿ, ಗ್ರಾಮಸ್ಥರಾದ ರವಿಕುಮಾರ್, ಜಗದೀಶ್, ರವಿ, ಕುಮಾರ್ ಒತ್ತಾಯಿಸಿದರು.
ಸಭೆಯಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪ್ರೇಮಲೀಲಾ, ಅಭಿವೃದ್ಧಿ ಅಧಿಕಾರಿ ಅಶ್ವಿನಿ, ಕಾರ್ಯದರ್ಶಿ ಶಿಲ್ಪ, ಕಂದಾಯ ವಸೂಲಿಗಾರ ಕೆ.ಸಿ.ರವಿ ಸೇರಿದಂತೆ ಗ್ರಾಮಸ್ಥರು ಇದ್ದರು.