ಶ್ರೀಮಂಗಲ, ಜೂ. 27: ಕೊಡವ ರೈಡರ್ಸ್ ಕ್ಲಬ್ ಸಂಘಟನೆಯಿಂದ ಕೊಡಗು ಜಿಲ್ಲೆಗೆ ಅತ್ಯವಶ್ಯಕವಾದ ತುರ್ತು ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಬೇಕು ಎನ್ನುವ ಅಭಿಯಾನಕ್ಕೆ ಬೆಂಬಲಿಸಿ ಮತ್ತು ಕೊಡಗು ಜಿಲ್ಲೆಯಲ್ಲಿ 2018 ರ ಮಳೆಗಾಲದಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾದ ಸಂತ್ರಸರಿಗೆ ಆದಷ್ಟು ಬೇಗ ಪುನರ್‍ವಸತಿ ಕಲ್ಪಿಸಿಕೊಡಬೇಕೆನ್ನುವ ಬೇಡಿಕೆಯನ್ನಿಟ್ಟು ತಾ. 29 ರಂದು ಬೆಂಗಳೂರಿನಿಂದ ಕೊಡಗು ಜಿಲ್ಲೆಗೆ ಬೈಕ್ ಜಾಥಾ ನಡೆಸಲು ನಿರ್ಧರಿಸಿದೆ. ಪೊನ್ನಂಪೇಟೆಯಲ್ಲಿ ಸಂಘಟಕರು ಪೂರ್ವಸಿದ್ಧತಾ ಸಭೆಯಲ್ಲಿ ಈ ಬಗ್ಗೆ ಪ್ರಕಟಿಸಿದರು. ಬೆಂಗಳೂರಿನ ವಸಂತ ನಗರದಲ್ಲಿರುವ ಕೊಡವ ಸಮಾಜದಿಂದ ತಾ. 29 ರಂದು ಮುಂಜಾನೆ 4 ಗಂಟೆಗೆ ಜಾಥಾ ಹೊರಟು ಮೈಸೂರು ವಿಜಯನಗರದ ಕೊಡವ ಸಮಾಜಕ್ಕೆ 8 ಗಂಟೆಗೆ ತಲಪಲಿದೆ. ಮೈಸೂರಿನಿಂದ 9.30 ಕ್ಕೆ ಹೊರಟು ಗೋಣಿಕೊಪ್ಪಲುವಿಗೆ 11.30 ಕ್ಕೆ ತಲಪಲಿದೆ. 12 ಗಂಟೆಗೆ ವೀರಾಜಪೇಟೆ ಹಾಗೂ 12.30 ಕ್ಕೆ ಅಮ್ಮತ್ತಿಗೆ ತಲಪಲಿದೆ. ಅಮ್ಮತ್ತಿಯಲ್ಲಿ ಜನಸಂಪರ್ಕ ಸಭೆಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಈ ಮೂಲಕ ಸರಕಾರದ ಗಮನ ಸೆಳೆಯಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ತದನಂತರ ಮಡಿಕೇರಿ ಮೂಲಕ ಜಾಥಾ ತೆರಳಿ ಕುಶಾಲನಗರ ಹಾಗೂ ಕೂಡಿಗೆಗೆ ಆಗಮಿಸಿ ಕೂಡಿಗೆ ಯಲ್ಲಿರುವ ಸೈನಿಕ ಶಾಲೆಯಲ್ಲಿ ಕೊಡಗು ಫಾರ್ ಟುಮಾರೋ ಎಂಬ ಸಂಸ್ಥೆಯ ಸಹಯೋಗದೊಂದಿಗೆ ಕೊಡವ ರೈಡರ್ಸ್ ಕ್ಲಬ್ ಸಂಘಟನೆ ಗಿಡ ನೆಡುವ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭ ಯುವಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸುರಕ್ಷಿತ ವಾಹನ ಚಾಲನೆ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ. ಜಾಥಾದಲ್ಲಿ 150-200 ಬೈಕ್ ಸವಾರರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರು ವಿಶ್ವಾಸ ವ್ಯಕ್ತಪಡಿಸಿದರು.

ಸಭೆಯಲ್ಲಿ ಕೊಡವ ರೈಡರ್ಸ್ ಕ್ಲಬ್ ಜಾಥಾ ಸಂಘಟಕರಾದ ಸಣ್ಣುವಂಡ ದರ್ಶನ್ ಕಾವೇರಪ್ಪ, ಅಜ್ಜಿಕುಟ್ಟಿರ ಪೃಥ್ವಿ ಸುಬ್ಬಯ್ಯ, ನಾಳಿಯಂಡ ವಿನಿತ್ ಮುತ್ತಣ್ಣ, ಬೊಳ್ಳೆರ ಪೃಥ್ವಿ ಪೂಣಚ್ಚ, ಅಪ್ಪಂಡೇರಂಡ ಡಿ. ದೇವಯ್ಯ, ಅಪ್ಪಂಡೇರಂಡ ಯಶ್ವಂತ್ ಕಾಳಪ್ಪ, ಗುಡಿಯಂಗಡ ಲಿಖಿನ್ ಬೋಪಣ್ಣ, ತೀತರಮಾಡ ಸುಕೇಶ್ ಮಾದಯ್ಯ ಹಾಜರಿದ್ದರು.