ವೀರಾಜಪೇಟೆ, ಜೂ. 27: ತಂದೆ-ತಾಯಿಗಳ ವೈವಾಹಿಕ ಜೀವನ ಸರಿ ಇಲ್ಲದಿದ್ದರೆ ಮಕ್ಕಳು ಮಾದಕ ಚಟಕ್ಕೆ ಬಲಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾದ ಜಯಪ್ರಕಾಶ್ ಹೇಳಿದರು.ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವೀರಾಜಪೇಟೆ ವಕೀಲರ ಸಂಘ ಹಾಗೂ ಪಟ್ಟಣ ಪಂಚಾಯಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಬಾಲ ಕಾರ್ಮಿಕ ಪದ್ಧತಿ ವಿರೋಧಿ ಹಾಗೂ ಸರಕು ಸಾಗಾಣಿಕೆ ವಾಹನದಲ್ಲಿ ಕರೆದೊಯ್ಯುವದನ್ನು ನಿಷೇಧಿಸಿರುವ ಕುರಿತಂತೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಬಾಲ್ಯ ಮಕ್ಕಳ ಜೀವನದ ಪ್ರಮುಖ ಘಟ್ಟ. ಬಾಲ್ಯದಲ್ಲಿ ನಾವು ಅಳವಡಿಸಿಕೊಂಡ ನಡವಳಿಕೆಗಳು ಮಕ್ಕಳ ಜೀವನದುದ್ದಕ್ಕೂ ಉಪಯೋಗವಾಗುತ್ತದೆ. ಪೋಷಕರು ಮಕ್ಕಳಿಗೆ ಮಾರ್ಗದರ್ಶಿಗಳಾಗಬೇಕು ಎಂದು ಹೇಳಿದರು. ವೃತ್ತ ನಿರೀಕ್ಷಕ ಕ್ಯಾತೇಗೌಡ ಮಾತನಾಡಿ, ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ 18 ವರ್ಷದ ಒಳಗಿನ ಮಕ್ಕಳು ವಾಹನ ಚಲಾಯಿಸುವಂತಿಲ್ಲ. ಪೋಷಕರು ನಮ್ಮ ಮಕ್ಕಳು ಉತ್ತಮವಾಗಿ ಗಾಡಿ ಚಲಾಯಿಸುತ್ತಾರೆ ಎಂಬ ಹುಂಬತನ ತೋರಿಸುತ್ತಾರೆ. ಆಕಸ್ಮಿಕ ಅನಾಹುತ ಸಂಭವಿಸಿದರೆ ಜೀವನ ಪರ್ಯಂತ ಕೊರಗುತ್ತಾರೆ. ತೋಟ ಮಾಲೀಕರು ತಮ್ಮ ಸ್ವಂತ ವಾಹನ ಹಾಗೂ ಸಾಗಾಣಿಕೆ ವಾಹನದಲ್ಲಿ ಸಾಮಥ್ರ್ಯಕ್ಕೂ ಮೀರಿ ಕಾರ್ಮಿಕರನ್ನು ಕರೆದುಕೊಂಡು ಹೋಗುವದು ಅಪರಾಧ. ಅಪಘಾತ ಸಂಭವಿಸಿ ಯಾರಾದರು ಮೃತಪಟ್ಟರೆ ಯಾವದೇ ವಿಮೆ ದೊರೆಯುವದಿಲ್ಲ. ಮೃತಪಟ್ಟ ವ್ಯಕ್ತಿಯ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನ್ಯಾಯಾಧಿಶರು ವಿಧಿಸುವ ದಂಡವನ್ನು ಸ್ವಂತ ಖರ್ಚಿನಲ್ಲಿ ಭರಿಸಬೇಕಾಗುತ್ತದೆ ಎಂದರು. ವೀರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಎಂ.ಎಂ. ನಂಜಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಕೀಲ ಕೆ.ವಿ. ಸುನೀಲ್ ಬಾಲ ಕಾರ್ಮಿಕ ಪದ್ಧತಿ ಬಗ್ಗೆ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಶಿಕ್ಷಣಾಧಿಕಾರಿ ಉತ್ತಪ್ಪ ಉಪಸ್ಥಿತರಿದ್ದರು.