ಮಡಿಕೇರಿ, ಜೂ. 28: ನಗರದ ಸರಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿಗೆ ಹೊಂದಿಕೊಂಡಂತೆ ಕರ್ಣಂಗೇರಿ ಗ್ರಾಮದ ಸರ್ವೆ ಸಂಖ್ಯೆ 311ರಲ್ಲಿ 0.45 ಎಕರೆ ಜಾಗವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಮಂಜೂರುಗೊಳಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಾ. 21ರಂದು ಅಧಿಕೃತ ಆದೇಶ ಹೊರಡಿಸಿದ್ದಾರೆ.ಸುಮಾರು 12 ವರ್ಷಗಳ ಹಿಂದೆ ರಾಜ್ಯ ಸರಕಾರದಿಂದ ಕೊಡಗು ಜಿಲ್ಲೆಗೆ ಒಂದು ಪದವಿ ಕಾಲೇಜು ಹಾಗೂ ಮಹಿಳಾ ಪದವಿ ಕಾಲೇಜು ಮಂಜೂರುಗೊಂಡಿತ್ತು. ಈ ವೇಳೆ ಇಲ್ಲಿನ ಸರಕಾರಿ ಪ್ರಾಥಮಿಕ ಶಾಲಾ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಕಾಲೇಜು ಆರಂಭಗೊಂಡಿತು. ಸರಕಾರಿ ಪದವಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಜಾಗಕ್ಕಾಗಿ ಬೇಡಿಕೆ ಸಲ್ಲಿಸಲಾಗಿತ್ತು.ಆ ದಿಸೆಯಲ್ಲಿ ಸರಕಾರದಿಂದ ರೂ. 2 ಕೋಟಿ ಹಣ ಕೂಡ ಮಂಜೂರಾಗಿದ್ದರೂ, ಈ ಹನ್ನೆರಡು ವರ್ಷಗಳಿಂದ ಎಲ್ಲಿಯೂ ಕಾಲೇಜಿಗೆ ಸೂಕ್ತ ಜಾಗ ಲಭಿಸದೆ ಶಾಲಾ ಆವರಣದೊಳಗೆ ಪದವಿ ಕಾಲೇಜನ್ನು ನಡೆಸಿಕೊಂಡು ಬರಲಾಗುತ್ತಿತ್ತು. ಅನೇಕ ಬಾರಿ ಕಾಲೇಜು ಪ್ರಮುಖರು, ಶಾಸಕರು ಜಿಲ್ಲಾಧಿಕಾರಿ ಬಳಿ ಜಾಗಕ್ಕಾಗಿ ಪ್ರಸ್ತಾವನೆ ಸಲ್ಲಿಸುತ್ತಾ ಬಂದಿದ್ದರು.ಈ ದಿಸೆಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಅವರು ಪ್ರಸಕ್ತ ಜಿಲ್ಲಾಧಿಕಾರಿ ಬಳಿ ಕರ್ಣಂಗೇರಿ ಗ್ರಾಮದ ಸರ್ವೆ ನಂ. 311ರಲ್ಲಿ 8.76 ಎಕರೆ ಜಾಗದ ಪೈಕಿ 0.45 ಎಕರೆ ಜಾಗವನ್ನು ಪದವಿ ಕಾಲೇಜಿಗೆ ಒದಗಿಸಿಕೊಡಬೇಕೆಂದು ಬೇಡಿಕೆ ಸಲ್ಲಿಸಿದ್ದರು. ಜಿಲ್ಲಾಧಿಕಾರಿ ಈ ಬಗ್ಗೆ ಖುದ್ದು ಪರಿಶೀಲಿಸಿ ಇದೀಗ ಅಧಿಕೃತ ಆದೇಶ ಹೊರಡಿಸಿದ್ದಾರೆ.
(ಮೊದಲ ಪುಟದಿಂದ) ಕಾಲೇಜಿನ ಉಪನ್ಯಾಸಕ ಡಾ. ಕೆ.ಸಿ. ದಯಾನಂದ ಹಾಗೂ ಇತರರು ಜಾಗ ಕಲ್ಪಿಸುವಂತೆ ಶಾಸಕರ ಬಳಿ ನಿರಂತರ ಬೇಡಿಕೆ ಇರಿಸಿದ್ದಾಗಿ ಪ್ರತಿಕ್ರಿಯಿಸಿರುವ ಅಪ್ಪಚ್ಚು ರಂಜನ್ ಜಾಗ ಒದಗಿಸಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಕ್ರಮವನ್ನು ಶ್ಲಾಘಿಸುವದರೊಂದಿಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಜಾಗ ಪರಿಶೀಲನೆ : ಇಂದು ಸಂಬಂಧಿಸಿದ ಜಾಗವನ್ನು ಪರಿಶೀಲಿಸಿದ ಅವರು ನಗರದ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪ.ಪೂ. ಕಾಲೇಜು ಹಾಗೂ ಪದವಿ ಕಾಲೇಜು ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿದರು. ಅಲ್ಲದೆ ಭವಿಷ್ಯದಲ್ಲಿ ಯಾರಿಗೂ ಸಮಸ್ಯೆಯಾಗದಂತೆ ಸೂಕ್ತ ತಡೆಗೋಡೆಯೊಂದಿಗೆ ಕಾಲೇಜು ಕಟ್ಟಡದ ಕಾಮಗಾರಿಗೆ ಸಲಹೆ ನೀಡಿದರು. ಪ್ರಸಕ್ತ ರೂ. 2 ಕೋಟಿಯಲ್ಲಿ ಕೆಲಸ ಕೈಗೊಳ್ಳುವಂತೆ ಮತ್ತು ಮುಂದೆ ಹೆಚ್ಚಿನ ಅನುದಾನವನ್ನು ಉನ್ನತ ಶಿಕ್ಷಣ ಇಲಾಖೆಯಿಂದ ಕೊಡಿಸುವದಾಗಿ ಭರವಸೆ ನೀಡಿದರು.