ಮಡಿಕೇರಿ, ಜೂ. 28: ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ಇಲ್ಲಿನ ಜಿಲ್ಲಾ ಸರಕಾರಿ ಆಸ್ಪತ್ರೆಯನ್ನು 750 ಹಾಸಿಗೆಗಳೊಂದಿಗೆ ಮೇಲ್ದರ್ಜೆಗೆ ಏರಿಸುವ ದಿಸೆಯಲ್ಲಿ ಯೋಜನೆ ರೂಪಿಸಿದ್ದು, ಈ ಸಂಬಂಧ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಆಸ್ಪತ್ರೆಗೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದರು. ಈ ವೇಳೆ ವೈದ್ಯಕೀಯ ವಿಜ್ಞಾನ ಕಾಲೇಜಿನ ಮುಖ್ಯಸ್ಥರಾದ ಡಾ. ಕೆ.ಬಿ. ಕಾರ್ಯಪ್ಪ ಹಾಗೂ ಸಂಬಂಧಿಸಿದ ಇಲಾಖಾ ಕಾರ್ಯಪಾಲಕ ಅಭಿಯಂತರ ಸತೀಶ್ ಉಪಸ್ಥಿತರಿದ್ದು, ಮಾಹಿತಿ ಒದಗಿಸಿದರು.ಜಿಲ್ಲಾ ಕೇಂದ್ರ ಮಡಿಕೇರಿ ಯಲ್ಲಿರುವ ಈ ಸರಕಾರಿ ಆಸ್ಪತ್ರೆಯು ಪ್ರಸಕ್ತ ಸುಮಾರು 400 ಹಾಸಿಗೆ ಗಳೊಂದಿಗೆ ಸಾಕಷ್ಟು ಸುಧಾರಣೆ ಯೊಂದಿಗೆ; ರೋಗಿಗಳಿಗೆ ಉತ್ತಮ ಸೇವೆ ಲಭಿಸುವಂತಾಗಿದೆ ಎಂದು ಶಾಸಕರು ಮೆಚ್ಚುಗೆಯ ನುಡಿಯಾಡಿ ದರು. ಕೊಡಗು ಮಾತ್ರವಲ್ಲದೆ ಹೊರಜಿಲ್ಲೆಗಳಿಂದಲೂ ಇಲ್ಲಿಗೆ ರೋಗಿಗಳು ಬರುತ್ತಿರುವ ಕುರಿತು ಪ್ರಸ್ತಾಪಿಸಿದ ಅವರು; ಭವಿಷ್ಯದಲ್ಲಿ ಸರಕಾರದಿಂದ ಹೆಚ್ಚಿನ ಅನುದಾನ ಪಡೆದು ‘ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ‘ಯಾಗಿ ಮೇಲ್ದರ್ಜೆಗೆ ಏರಿಸಲಾಗುವದು ಎಂದು ವಿವರಿಸಿದರು. ಕೊಡಗಿಗೆ ಅಂತಹ ವ್ಯವಸ್ಥೆ ಅನಿವಾರ್ಯವೆಂದು ನುಡಿದ ಶಾಸಕರು ಬಹಳಷ್ಟು ಸಂದರ್ಭ ತುರ್ತು ಸೇವೆಗಾಗಿ ದೂರದ ಮೈಸೂರು ಅಥವಾ ಮಂಗಳೂರಿಗೆ ಕೊಡಗಿನ ಜನತೆ ಚಿಕಿತ್ಸೆಗಾಗಿ ತೆರಳುವಂತಾಗಿದೆ ಎಂದು ಬೊಟ್ಟು ಮಾಡಿದರು. ಹಾಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಎಲ್ಲಾ ವೈದ್ಯಕೀಯ ಸೇವೆ ಕಲ್ಪಿಸಲು ಪ್ರಯತ್ನಿಸುವದಾಗಿ ಭರವಸೆ ನೀಡಿದರು.
ಸಚಿವರಿಗೆ ಪತ್ರ : ಮಡಿಕೇರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಂಬಂಧ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಸಂಬಂಧಿಸಿದ ಇಲಾಖೆ ಮುಖ್ಯ ಕಾರ್ಯದರ್ಶಿಗಳ ಗಮನ ಸೆಳೆಯಲಾಗುವದು ಎಂದು ಅವರು ಮಾಹಿತಿ ನೀಡಿದರು. ಅಲ್ಲದೆ ನೂತನ ಕಟ್ಟಡ ಕಾಮಗಾರಿ ಸಂಬಂಧ ವೈದ್ಯಕೀಯ ಕಾಲೇಜಿನ ಡೀನ್ ಡಾ.ಕೆ.ಬಿ. ಕಾರ್ಯಪ್ಪ ಹಾಗೂ ಇಂಜಿನಿಯರ್ ಸತೀಶ್ ಅವರೊಂದಿಗೆ ಚರ್ಚಿಸಿ; ಸಲಹೆಗಳನ್ನು ನೀಡಿದರು.
ವೈದ್ಯ - ಸಿಬ್ಬಂದಿಗೆ ಕಿವಿಮಾತು : ಆಸ್ಪತ್ರೆಯ ಪ್ರಯೋಗಾಲಯ, ಶಸ್ತ್ರಚಿಕಿತ್ಸಾ ಘಟಕ, ಸ್ಕ್ಯಾನಿಂಗ್, ಸಿಟಿಸ್ಕ್ಯಾನ್ ಮುಂತಾದ ಘಟಕಗಳ ಕುರಿತು ಪರಿಶೀಲಿಸಿದ ಶಾಸಕರು, ತಮ್ಮ ಮಗ ಕೂಡ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಆಸ್ಪತ್ರೆಯ ಪ್ರತಿಯೊಂದು ವಿಭಾಗವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕೆಂದು ಸೂಚಿಸಿದರು. ರೋಗಿಗಳ ಜತೆಯಲ್ಲಿ ಪೊಲೀಸರಂತೆ ವರ್ತಿಸದೆ, ಸೌಮ್ಯತೆಯಿಂದ ನಡೆದುಕೊಂಡು ವಾತ್ಸಲ್ಯದಿಂದ ಮಾತನಾಡಿಸಿ; ಕಾಯಿಲೆಯಿಂದ ಗುಣ ಮುಖರಾಗುವಂತೆ ನೋಡಿ ಕೊಳ್ಳಬೇಕೆಂದು ಕಿವಿಮಾತು ಹೇಳಿದರು.
450 ಹಾಸಿಗೆ ಕಟ್ಟಡ : ಮುಂಗಡ ಪತ್ರದಲ್ಲಿ ರಾಜ್ಯ ಸರಕಾರ ರೂ. ಒಂದು ನೂರು ಕೋಟಿ ಘೋಷಿಸಿರುವ ಮೊತ್ತದಲ್ಲಿ ಈಗಿನ ಆಸ್ಪತ್ರೆ ಕಟ್ಟಡಕ್ಕೆ ಹೊಂದಿಕೊಂಡಂತೆ ಹೊಸತಾಗಿ 450 ಹಾಸಿಗೆಗಳಿಗೆ ಪೂರಕ ಕಾಮಗಾರಿಯನ್ನು ಆಗಸ್ಟ್ ಬಳಿಕ ಆರಂಭಿಸಲಾಗುವದು ಎಂದು ಅಪ್ಪಚ್ಚುರಂಜನ್ ಇದೇ ವೇಳೆ ನುಡಿದರು. ಈಗಿನ ಆಸ್ಪತ್ರೆಯ ಮುಖ್ಯ ಕಟ್ಟಡಕ್ಕೆ ಹೊಂದಿಕೊಂಡಂತೆ, 3 ಅಂತಸ್ತಿನ 300 ಹಾಸಿಗೆಯುಳ್ಳ ನೂತನ ಸಂಕೀರ್ಣ ನಿರ್ಮಿಸಲಾಗುತ್ತಿದ್ದು, ಪ್ರಸಕ್ತ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಹಳೆಯ
(ಮೊದಲ ಪುಟದಿಂದ) ಕಟ್ಟಡ ಪಕ್ಕದಲ್ಲಿ ಇದೇ ಉದ್ದೇಶಕ್ಕಾಗಿ 150 ಹಾಸಿಗೆಗಳ ಕಾಮಗಾರಿಗೆ ಯೋಜನೆ ರೂಪಿಸಿ ರುವದಾಗಿಯೂ ವಿವರಿಸಿದರು.
ಭವಿಷ್ಯದಲ್ಲಿ ಎಲ್ಲ ಚಿಕಿತ್ಸೆ : ನೂತನ ಕಟ್ಟಡಗಳ ನಿರ್ಮಾಣದೊಂದಿಗೆ ಭವಿಷ್ಯದಲ್ಲಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಕಾಲೇಜಿನ ಸಹಕಾರದಿಂದ ರೋಗಿಗಳ ಎಲ್ಲಾ ಕಾಯಿಲೆಗಳಿಗೆ ಚಿಕಿತ್ಸೆ ಲಭಿಸುವಂತೆ ಆಸ್ಪತ್ರೆಯಲ್ಲಿ ಸುಸಜ್ಜಿತ ವ್ಯವಸ್ಥೆ ಕಲ್ಪಿಸುವದಾಗಿ ನುಡಿದರು. ಅಲ್ಲದೆ ನುರಿತ ವೈದ್ಯ ಸಿಬ್ಬಂದಿಗಳನ್ನು ನೇಮಿಸಲು ಕ್ರಮ ವಹಿಸುವದಾಗಿ ಅಪ್ಪಚ್ಚುರಂಜನ್ ಆಶಯ ವ್ಯಕ್ತಪಡಿಸಿದರು.
24 ಗಂಟೆ ಸೇವೆ : ಡಾ.ಕೆ.ಬಿ. ಕಾರ್ಯಪ್ಪ ಮಾಹಿತಿ ನೀಡುತ್ತಾ; ರೋಗಿಗಳಿಗೆ ತೊಂದರೆಯಾಗದಂತೆ ತುರ್ತು ಸೇವೆಯೊಂದಿಗೆ 24 ಗಂಟೆಯೂ ಎಕ್ಸರೆ, ಸಿಟಿಸ್ಕ್ಯಾನ್ ಇನ್ನಿತರ ಚಿಕಿತ್ಸೆ ಕಲ್ಪಿಸಲಾಗುತ್ತಿದ್ದು, ಒಂದುವಾರದಿಂದ ‘ಲಾಂಡ್ರಿ’ ಕೂಡ ಕಾರ್ಯಾರಂಭಗೊಂಡಿದೆ ಎಂದರು. ಬಟ್ಟೆಗಳ ಒಗೆಯುವಿಕೆ ಹಾಗೂ ಒಣಗಿಸಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು. ಶಾಸಕರ ಭೇಟಿ ಸಂದರ್ಭ ಆಸ್ಪತ್ರೆಯ ಇತರ ವೈದ್ಯಸಿಬ್ಬಂದಿ, ತಾಂತ್ರಿಕ ವಿಭಾಗದ ಪ್ರಮುಖರು ಹಾಜರಿದ್ದು, ಅಗತ್ಯ ಮಾಹಿತಿ ಒದಗಿಸಿದರು.