ಬೆಂಗಳೂರು, ಜೂ. 28: ಕೊಡಗಿನ ಭಾಗಮಂಡಲದ ಬಳಿ ಮೇಲ್ಸೇತುವೆ ನಿರ್ಮಾಣದ ವಿಚಾರದಲ್ಲಿ ಹಸ್ತಕ್ಷೇಪ ಮಾಡುವದಿಲ್ಲ ಎಂದಿರುವ ರಾಜ್ಯ ಉಚ್ಚನ್ಯಾಯಾಲಯ ಈ ಬಗ್ಗೆ ಮಧ್ಯಪ್ರವೇಶಿಸಲು ನಿರಾಕರಿಸಿದೆ. ಈ ಕುರಿತು ಅರ್ಜಿದಾರ ಎಸ್. ಇ. ಜಯಂತ್, ವಕೀಲ ರವಿಕುಮಾರ್ ಎಂಬವರ ಮೂಲಕ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಇದನ್ನು ಸ್ಪಷ್ಟಪಡಿಸಿದೆ.ಕಾವೇರಿ ಉಗಮ ಸ್ಥಾನದಲ್ಲೇ ನದಿ ಮಲಿನ ಹಿನ್ನೆಲೆ ವಿಭಾಗೀಯ ಪೀಠದಲ್ಲಿ ಪಿಐಎಲ್ ಸಲ್ಲಿಕೆ ವಿಚಾರಣೆ ನಡೆಯಿತು. ಕಾವೇರಿ ನದಿ, ಪರಿಸರ ರಕ್ಷಣೆ ಸರಕಾರದ ಕರ್ತವ್ಯ. ನದಿ ಮಲಿನವಾಗದಂತೆ ನೋಡಿಕೊಳ್ಳುವದು ಸರಕಾರದ ಹೊಣೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ಅಭಯಾ ಎಸ್. ಒಕಾ ಅವರು ನಾಲ್ಕುವಾರದಲ್ಲಿ ಈ ಬಗ್ಗೆ ವಿವರಣೆ ನೀಡಲು ಸರಕಾರಕ್ಕೆ ಸೂಚನೆ ನೀಡಿದರು.
ಭಾಗಮಂಡಲ ಗ್ರಾಮದ ಒಳಚರಂಡಿ ನೀರು ನದಿ ಸೇರುವ ಹಿನ್ನೆಲೆ ನದಿ ಮಲಿನವಾಗದಂತೆ ಕ್ರಮಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಆದರೆ ಸರಕಾರ ಹಣ ಬಿಡುಗಡೆ ಮಾಡಿಲ್ಲ ಎಂದು ಅರ್ಜಿದಾರರ ಪರ ವಕೀಲರು ಆರೋಪಿಸಿದ್ದರು. ಹಣ ಬಿಡುಗಡೆಗೆ ಸರಕಾರ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಸರಕಾರಕ್ಕೆ ನಿರ್ದೇಶನ ನೀಡಲಾಗುವದು ಎಂದು ವಿಭಾಗೀಯ ಪೀಠ ಎಚ್ಚರಿಕೆ ನೀಡಿದೆ.