ಗೋಣಿಕೊಪ್ಪಲು, ಜೂ. 28: ಮಳೆಗಾಲದಲ್ಲಿ ನೈಸರ್ಗಿಕವಾಗಿ ಸಿಗುವ ಮಳೆ ನೀರನ್ನು ಪ್ರತಿ ನಾಗರಿಕ ಶೇಖರಣೆ ಮಾಡಿದರೆ ಬೇಸಿಗೆ ಕಾಲದಲ್ಲಿ ಯಾರಿಗೂ ಕುಡಿಯುವ ನೀರಿನ ಬವಣೆ ಎದುರಾಗುವದಿಲ್ಲ ಎಂದು ದಕ್ಷಿಣ ಕನ್ನಡದ ಜಲತಜ್ಞ ಶ್ರೀಪಡ್ರೆ ತಿಳಿಸಿದರು.

ಗೋಣಿಕೊಪ್ಪಲುವಿನ ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ಜಿಲ್ಲಾ ಘಟಕ ಹಾಗೂ ಗೋಣಿಕೊಪ್ಪಲುವಿನ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ನಡೆದ ಮಳೆ ನೀರು ಕೊಯ್ಲು ಕಾರ್ಯಾಗಾರದಲ್ಲಿ ಮಾತನಾಡಿದ ಶ್ರೀಪಡ್ರೆಯವರು ಮಳೆ ನೀರು ಅನಾವಶ್ಯಕವಾಗಿ ಹರಿದು ಹೋಗುತ್ತಿದೆ. ಇದನ್ನು ಒಂದೆಡೆ ಇಂಗಿಸುವ ಕೆಲಸ ಪ್ರತಿ ನಾಗರಿಕ ಮಾಡಬೇಕು. ಮಳೆಗಾಲದಲ್ಲಿ ತಮ್ಮ ಮನೆಯ ಮೇಲೆಯಿಂದ ಸುರಿದು ಬರುವ ನೀರನ್ನು ತಮ್ಮ ಬಾವಿಗಳಿಗೆ ಶೇಖರಿಸಿದ್ದಲ್ಲಿ ಬೇಸಿಗೆ ಸಂದರ್ಭ ಈ ನೀರು ನಾಗರಿಕರ ಉಪಯೋಗಕ್ಕೆ ಲಭ್ಯವಾಗುತ್ತದೆ. ಸರಳ ವಿಧಾನಗಳಿಂದ ನೀರನ್ನು ಸಂರಕ್ಷಿಸಬಹುದು. ಪ್ರತಿ ನಾಗರಿಕನಿಗೆ ಅಮೂಲ್ಯವಾದ ನೀರನ್ನು ಸಂಗ್ರಹಿಸಲು ಇಚ್ಚಾಶಕ್ತಿ ಅವಶ್ಯವಿದೆ. ಭವಿಷ್ಯದ ದೃಷ್ಟಿಯಿಂದ ನೀರನ್ನು ಸಂಗ್ರಹಿಸಬೇಕು. ಮಳೆ ನೀರನ್ನು ಹೆಚ್ಚಾಗಿ ಹರಿದು ಬಿಡುವ ಬದಲು ರೈತರು ತಮ್ಮ ಜಮೀನು, ಗದ್ದೆಗಳಲ್ಲಿ ನೀರನ್ನು ಇಂಗುವಂತೆ ಮಾಡಿದಲ್ಲಿ ಅನುಕೂಲವಾಗಲಿದೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ಜಿಲ್ಲಾ ಘಟಕ ಖಜಾಂಚಿ ಇಟ್ಟಿರ ಸಭಿತ ಭೀಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಅಜ್ಜಿಕುಟ್ಟೀರ ಸೂರಜ್, ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಕಾಡ್ಯಮಾಡ ದೇವಯ್ಯ, ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ರೈತ ಮುಖಂಡರುಗಳಾದ ಆಲೆಮಾಡ ಮಂಜುನಾಥ್, ಕಳ್ಳಿಚಂಡ ರಾಬಿನ್, ಪುಚ್ಚಿಮಾಡ ಅಶೋಕ್, ಕಿಶೋರ್, ಚೆಕ್ಕೇರ ಮಧು ಮುಂತಾದವರು ಹಾಜರಿದ್ದರು. ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಸ್ವಾಗತಿಸಿ, ವಂದಿಸಿದರು.