ಕೂಡಿಗೆ, ಜೂ. 28: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಹೊಂದಿಕೊಂಡಿರುವ ಕಕ್ಕೆಹೊಳೆ ಅಣೆಕಟ್ಟೆಯಿಂದ ಸೀಗೆಹೊಸೂರು ಗ್ರಾಮದ ರೈತರ ಬೇಸಾಯಕ್ಕೆ ನೀರೊದಗಿಸುವ ಕಕ್ಕೆಹೊಳೆ ಮುಖ್ಯ ನಾಲೆಯ ದುರಸ್ತಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ನಾಲೆಯು ಅಣೆಕಟ್ಟೆಯಿಂದ ಮೂರು ಕಿ.ಮೀ ದೂರ ವ್ಯಾಪ್ತಿಯ ಮುಖ್ಯನಾಲೆಯನ್ನು ಹೊಂದಿದೆ. ಈ ನಾಲೆಯು ತೀರಾ ಕಾಡುಮಯ ವಾಗಿದ್ದು, ನಾಲೆಯ ಇಕ್ಕೆಲಗಳಲ್ಲಿ ಮಣ್ಣು ಕುಸಿದು ನೀರು ಹರಿಯದಂತಾಗಿದೆ. ಸಣ್ಣ ನೀರಾವರಿ ಇಲಾಖೆಯವರು ಕಳೆದ ಮೂರು ವರ್ಷದ ಹಿಂದೆ ಟೆಂಡರ್ ಕರೆದು ಕಾಮಗಾರಿ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದು, ಈವರೆಗೆ ಯಾವದೇ ಕಾಮಗಾರಿಯನ್ನು ಪೂರ್ಣಗೊಳಿಸಿರುವದಿಲ್ಲ.
ಈಗಾಗಲೇ ಮಳೆಯು ಕ್ಷೀಣಗೊಂಡಿರುವದರಿಂದ ಅಣೆಕಟ್ಟೆಗೆ ಸ್ವಲ್ಪ ಪ್ರಮಾಣದ ನೀರು ಸಂಗ್ರಹವಾಗಿರುವದಿಲ್ಲ. ಸೋರಿಕೆಯ ನೀರಾದರೂ ಹರಿದು ಈ ವ್ಯಾಪ್ತಿಯ ದನಕರುಗಳಿಗೆ ಕುಡಿಯುವ ನೀರಿನ ಸೌಲಭ್ಯಕ್ಕಾದರೂ ಅನುಕೂಲವಾಗು ವಂತೆ ಗಿಡಗಂಟಿಗಳನ್ನು ಕಡಿದು ದುರಸ್ತಿ ಪಡಿಸಬೇಕು ಎಂದು ಕಕ್ಕೆಹೊಳೆ ಅಚ್ಚುಕಟ್ಟು ವ್ಯಾಪ್ತಿಯ ನೂರಾರು ರೈತರು ಆಗ್ರಹಿಸಿದ್ದಾರೆ.