ನಾಪೆÇೀಕ್ಲು, ಜೂ. 28: ಪ್ರತೀ ವರ್ಷದಂತೆ ಸಮಯಕ್ಕೆ ಸರಿಯಾಗಿ ಮುಂಗಾರು ಆರಂಭಗೊಂಡಿದ್ದರೆ ಪೈರಿಗೆ 15 – 20 ದಿನಗಳಾಗುತ್ತಿತ್ತು. ಮುಂದಿನ ವಾರದಲ್ಲಿ ನಾಟಿ ಕೆಲಸ ಆರಂಭಿಸಬಹುದಿತ್ತು. ಆದರೆ ಈ ಬಾರಿ ಮುಂಗಾರು ಮಳೆ ಸರಿಯಾಗಿ ಸುರಿಯದ ಕಾರಣ ಇನ್ನೂ ಪೈರಿನ ಗದ್ದೆಗೆ ನೀರು ತುಂಬಿಸಿ ಉಳುಮೆ ಮಾಡಲು ಕೂಡ ಸಾಧ್ಯವಾಗಿಲ್ಲ ಎಂದು ಭತ್ತದ ಕೃಷಿಕರು ತಮ್ಮ ಹಿಂದಿನ ನೆನಪನ್ನು ಮೆಲುಕು ಹಾಕುತ್ತಿರುವದು ಕಂಡುಬರುತ್ತಿದೆ.
ಹೂ ಮಳೆಯಾಗಲಿ, ಮಂಗಾರು ಮಳೆಯಾಗಲಿ ಮೊದಲು ಸುರಿಯುವದು ನಾಲ್ಕುನಾಡು ವ್ಯಾಪ್ತಿಗೆ. ವಾಡಿಕೆಯಂತೆ ಜೂ. 4-5ಕ್ಕೆಲ್ಲಾ ಭತ್ತದ ಬಿತ್ತನೆ ಕಾರ್ಯ ಕೈಗೊಳ್ಳಲಾಗುತ್ತಿತ್ತು. ಅದರಲ್ಲಿಯೂ ನಾ ಮುಂದು, ತಾ ಮುಂದು ಎಂಬ ಪೈಪೆÇೀಟಿ ನಡೆಯುತ್ತಿತ್ತು. ಆದರೆ ಈ ವರ್ಷ ಪೈಪೆÇೀಟಿ ಹಾಗಿರಲಿ, ಪೈರಿನ ಗದ್ದೆ ಉಳುಮೆ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ತಲೆದೋರಿದೆ. ದಿನಕ್ಕೊಂದು, ಎರಡು ಬಾರಿ ತುಂತುರು ಮಳೆ ಬಿಟ್ಟರೆ, ವರತೆ ಕಾಣಿಸಿಕೊಳ್ಳುವದಿರಲಿ, ಕುಡಿಯಲು ನೀರಿಲ್ಲದ ಪರಿಸ್ಥಿತಿ ಎದುರಾಗಿದೆ.
ಭತ್ತದ ಕೃಷಿ ಲಾಭದಾಯಕವಲ್ಲ ಎಂಬ ಕಾರಣದಿಂದ ಈ ವ್ಯಾಪ್ತಿಯಲ್ಲಿ ಭತ್ತದ ಕೃಷಿ ಮಾಡುವವರು ವಿರಳವಾಗಿದ್ದಾರೆ. ಆದರೂ ಸಾಂಪ್ರದಾಯಿಕವಾಗಿ ಮಾಡಿಕೊಂಡು ಬಂದಿರುವ ಭತ್ತದ ಕೃಷಿಯನ್ನು ನಿಲ್ಲಿಸಬಾರದೆಂಬ ಕಾರಣಕ್ಕೆ ಕೆಲವು ಬೆರಳೆಣಿಕೆ ಕೃಷಿಕರು ಅದರತ್ತ ಆಸಕ್ತಿ ತೋರುತ್ತಿದ್ದಾರೆ. ಅದಕ್ಕೂ ಈ ಬಾರಿ ಮುಂಗಾರು ಮಳೆ ತಡೆ ಒಡ್ಡುವ ಲಕ್ಷಣಗಳು ಗೋಚರವಾಗುತ್ತಿದೆ ಎನ್ನುತ್ತಾರೆ ಕೃಷಿಕರು.
ನಾಲ್ಕುನಾಡು ವ್ಯಾಪ್ತಿಯಲ್ಲಿ ಹೆಚ್ಚಿನ ಭತ್ತದ ಗದ್ದೆಗಳು ಅತಿ ಶೀತದಿಂದ ಕೂಡಿದೆ. ಬೇರೆ ಕಡೆಗಳಂತೆ ಇಲ್ಲಿ 20-22 ದಿನಗಳ ಪೈರನ್ನು ನಾಟಿ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ನಾಟಿ ಮಾಡಿದರೂ ಹೆಚ್ಚಿನ ಭಾಗ ಕೊಳೆತು ಹೋಗಿ ನಷ್ಟ ಸಂಭವಿಸುತ್ತದೆ. ಇಲ್ಲಿನ ಗದ್ದೆಗಳಲ್ಲಿ ನಾಟಿ ಮಾಡಲು 30-32 ದಿನಗಳ ಪೈರನ್ನು ಬಳಸಲಾಗುತ್ತದೆ. ಈ ಕಾರಣದಿಂದ ಇಲ್ಲಿ ಭತ್ತದ ಬೀಜ ಬಿತ್ತನೆ ಕಾರ್ಯ ಮುಂಗಾರು ಆರಂಭದಲ್ಲಿಯೇ ಮಾಡಬೇಕಾಗುತ್ತದೆ ಎನ್ನುತ್ತಾರೆ ಅನುಭವಿ ಕೃಷಿಕರು.
-ಪಿ.ವಿ. ಪ್ರಭಾಕರ್