ಮಡಿಕೇರಿ, ಜೂ. 28: ಸಮಾಜದಿಂದ ಸಂಪಾದಿಸಿದ್ದನ್ನು ಮರಳಿ ಸಮಾಜಕ್ಕೆ ನೀಡುವ ಮೂಲಕ ಮಾನವೀಯತೆ ಮೆರೆಯ ಬೇಕೆಂದು ಉಪವಿಭಾಗಾಧಿಕಾರಿ ಜವರೇಗೌಡ ಕರೆ ನೀಡಿದ್ದಾರೆ.
ಮಕ್ಕಂದೂರು ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು. ಜೇನಿನ ತುಪ್ಪ ಮತ್ತು ಜಿಪುಣ ಬಚ್ಚಿಟ್ಟ ಹಣ ಯಾವತ್ತೂ ಪರರ ಪಾಲು ಹಾಗಾಗಿ ಸಮಾಜದಲ್ಲಿ ಸಂಕಷ್ಟದಲ್ಲಿ ರುವವರಿಗೆ ಸದಾ ಸ್ಪಂದಿಸುವ ಮೂಲಕ ಸಮಾಜಮುಖಿ ಕೆಲಸಗಳಲ್ಲಿ ತೊಡಗುವಂತೆ ಅವರು ಕರೆ ನೀಡಿದರು.
ಆಸ್ಟ್ರೇಲಿಯಾದ ಸಿಡ್ನಿ ಕೊಡವ ಕೂಟದ ವತಿಯಿಂದ ಮಕ್ಕಂದೂರು ಶಾಲೆಯ 53 ವಿದ್ಯಾರ್ಥಿಗಳಿಗೆ ಸಮವಸ್ತ್ರ, ಸ್ವೆಟರ್, ಟೈ ಮತ್ತು ಪಾದರಕ್ಷೆಗಳನ್ನು ವಿತರಿಸಲಾಯಿತು. ಈ ಸಂದರ್ಭ ಮಾತನಾಡಿದ ಸಿಡ್ನಿ ಕೊಡವ ಕೂಟದ ಸದಸ್ಯ ಜಗದೀಶ್ ಐಮಂಡ, ತಾವು ದೂರ ದೂರುಗಳಲ್ಲಿ ಕರ್ತವ್ಯದಲ್ಲಿದ್ದರೂ ತವರೂರಿನ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವ ಮೂಲಕ ಧನ್ಯತಾಭಾವ ಪಡೆಯುತ್ತಿರುವದಾಗಿ ಹೇಳಿದರು.
ಮಕ್ಕಂದೂರು ಪ್ರೌಢಶಾಲೆಯ ಯಾವದೇ ವಿದ್ಯಾರ್ಥಿ ಮುಂದಿನ ಬಾರಿ ಹತ್ತನೇ ತರಗತಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದರೆ ಆ ವಿದ್ಯಾರ್ಥಿಗೆ ರೂ. 25 ಸಾವಿರ ನಗದು ಬಹುಮಾನ ನೀಡುವದಾಗಿ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಇದೇ ಸಂದರ್ಭ ಘೋಷಿಸಿದರು.
ಸಮಾರಂಭದಲ್ಲಿ ಎಸ್‍ಡಿಎಂಸಿ ಅಧ್ಯಕ್ಷ ಎನ್.ಪಿ. ಮಾದಯ್ಯ, ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ ಹರಿಣಾಕ್ಷಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.