ಶನಿವಾರಸಂತೆ, ಜೂ. 27: ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಆಟೋ ರಿಕ್ಷಾ ಮಾಲೀಕರು ಮತ್ತು ಚಾಲಕರು ಸರಕು ಸಾಗಾಣಿಕೆ ವಾಹನಗಳ ಮಾಲೀಕರು ಚಾಲಕರು ಹಾಗೂ ಖಾಸಗಿ ಶಾಲಾ - ಕಾಲೇಜು ಮಾಲೀಕರು, ಶಾಲಾ ಬಸ್ ಚಾಲಕರು, ಮಾಲೀಕರುಗಳಿಗೆ ಅರಿವು ಕಾರ್ಯಕ್ರಮ ನಡೆಯಿತು.
ಸೋಮವಾರಪೇಟೆ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರಕು ಸಾಗಾಟ ವಾಹನಗಳಲ್ಲಿ ಯಾವದೇ ಕಾರಣಕ್ಕೂ ಪ್ರಯಾಣಿಕರನ್ನು ಕೂರಿಸಿಕೊಂಡು ಸಾಗಾಟ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಆಟೋ ರಿಕ್ಷಾ ಚಾಲಕರಿಗೆ ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳನ್ನು ಕೂರಿಸಿಕೊಂಡು ಸಾಗಾಟ ಮಾಡದಂತೆ ಸೂಚಿಸಿದರು. ಸಂಚಾರಿ ನಿಯಮಗಳ ಬಗ್ಗೆ ಸಭೆಯಲ್ಲಿದ್ದ ವಾಹನಗಳ ಮಾಲೀಕರು ಹಾಗೂ ಚಾಲಕರುಗಳಿಗೆ, ಸಹಾಯಕ ಠಾಣಾಧಿಕಾರಿ ಹೆಚ್.ಎಂ. ಗೋವಿಂದ್ ಮಾಹಿತಿಯಿತ್ತರು.