ಕುಶಾಲನಗರ, ಜೂ. 27: ರಾಜ ಮನೆತನದ ಮೂಲಕ ನದಿ ಪರಿಸರ ಸಂರಕ್ಷಣೆಗೆ ಎಲ್ಲಾ ರೀತಿಯ ಸಹಕಾರ ಕಲ್ಪಿಸಲು ಸದಾ ಸಿದ್ದ ಎಂದು ಮೈಸೂರು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭರವಸೆ ವ್ಯಕ್ತ ಪಡಿಸಿದ್ದಾರೆ. ಅವರು ಬೈಲುಕೊಪ್ಪೆಯ ಕಗ್ಯುಪ ನಳಂದ ಬೌದ್ಧ ವಿಹಾರದ ಆವರಣದಲ್ಲಿ ನಡೆದ 17ನೇ ಕರ್ಮಪ ಧರ್ಮಗುರುಗಳ 34ನೇ ಜನ್ಮದಿನದ ಅಂಗವಾಗಿ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.ನದಿ ಸಂರಕ್ಷಣೆಗೆ ಹಿಂದಿನ ಕಾಲದ ತಂತ್ರಗಳನ್ನು ಬಳಸಿಕೊಂಡು ಕಾರ್ಯಯೋಜನೆ ಸಿದ್ದಪಡಿಸಬೇಕು. ವೈಜ್ಞಾನಿಕವಾಗಿ ಅಭಿವೃದ್ಧಿ ನಡುವೆ ಪರಿಸರದ ಮೂಲಗಳಿಗೆ ಧಕ್ಕೆಯಾಗ ದಂತೆ ಎಚ್ಚರವಹಿಸಬೇಕು ಎಂದರು.ಈ ಸಂದರ್ಭ ನಡೆದ ಸರಳ ಸಮಾರಂಭದಲ್ಲಿ ಅವರು ಬೌದ್ಧ ಧರ್ಮ ಗುರುಗಳ ಜನ್ಮದಿನದ ಶುಭಾಶಯ ಕೋರಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನಳಂದ ಬೌದ್ಧ ವಿಹಾರ ಸಂಸ್ಥಾಪಕರಾದ ಕರ್ಮ ರಿಂಪೋಚೆ, ಪ್ರತಿಯೊಬ್ಬರೂ ಪರಿಸರದ ಬಗ್ಗೆ ಕಾಳಜಿ ಹೊಂದಬೇಕು. ತಮ್ಮ ಕೇಂದ್ರದ ಆವರಣದಲ್ಲಿ ಸುಮಾರು 100 ಎಕರೆ ಪ್ರದೇಶದಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ. ಬೌದ್ಧ ಭಿಕ್ಷುಗಳು ದಿನನಿತ್ಯ ಗಿಡಗಳ ಪೋಷಣೆ ಮಾಡುವದರೊಂದಿಗೆ ವನದುರ್ಗೆಯ ಆರಾಧನೆಯಲ್ಲಿ ತೊಡಗಿಸಿ ಕೊಳ್ಳುತ್ತಿರುವ ಬಗ್ಗೆ ಮಾಹಿತಿ ಒದಗಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಪರಿಸರ ತಜ್ಞ ಡಾ. ಎಲ್ಲಪ್ಪ ರೆಡ್ಡಿ, ಪರಿಸರದ ಮೂಲಕ ಮಾನವನಿಗೆ ಶಾಂತಿ, ನೆಮ್ಮದಿ ಪಡೆಯಲು ಸಾಧ್ಯ. ಮಾನವನ ನಿರಂತರ ದಾಳಿಯಿಂದ ನಿಸರ್ಗ ಅಳವಿನಂಚಿನಲ್ಲಿದೆ. ಪ್ರತಿಯೊಬ್ಬರೂ ಪ್ರಕೃತಿಯನ್ನು ಆರಾಧಿಸಬೇಕು ಎಂದರು. ಅತಿಥಿಗಳಾಗಿ ಉಪಸ್ಥಿತರಿದ್ದ ಮಾಜಿ ಸಚಿವ ಸಿ.ಹೆಚ್. ವಿಜಯಶಂಕರ್, ಅರ್ಪಿತ ಪ್ರತಾಪ್ ಸಿಂಹ, ಪುಷ್ಪ ಕುಪೇಂದ್ರ ರೆಡ್ಡಿ, ಪ್ರಸನ್ನ ಕುಮಾರ್, ಪ್ರೊ. ರವಿಕುಮಾರ್, ಟಿಬೇಟಿಯನ್ ಆಂತರಿಕ ಸರಕಾರದ ಪ್ರತಿನಿಧಿ ತುತ್ಪೆನ್ ಶೆರಿಂಗ್ ಮಾತನಾಡಿದರು.

ಈ ಸಂದರ್ಭ ಕಾಫಿ ಬೆಳೆಗಾರರಾದ ಮಿಟ್ಟು ಚಂಗಪ್ಪ, ವಿನೋದ್ ಶಿವಪ್ಪ, ಕಾರ್ಯಕ್ರಮ ಸಂಯೋಜಕ ಬಸವೇಗೌಡ ಮತ್ತಿತರರು ಇದ್ದರು.