ಕೂಡಿಗೆ, ಜೂ. 27: ಕರ್ನಾಟಕ ಪಶು ವೈದ್ಯಕೀಯ ಪದವೀಧರರಿಗೆ ವನ್ಯಜೀವಿ ವಿಷಯದಲ್ಲಿ ತರಬೇತಿ ಮತ್ತು ಸಂಶೋಧನೆ ನಡೆಸಲು 2010ರಲ್ಲಿ ದೊಡ್ಡ ಅಳುವಾರದಲ್ಲಿ ವನ್ಯಜೀವಿ ಪಶುವೈದ್ಯಕೀಯ ಸಂಸ್ಥೆಯನ್ನು ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ ಬೀದರ್ ಇವರ ವತಿಯಿಂದ ಪ್ರಾರಂಭಿಸಲಾಗಿದೆ. ಈ ಸಂಸ್ಥೆಯು ಮೊದಲಿಗೆ 2007ರಲ್ಲಿ ಕೂಡಿಗೆಯ ಜರ್ಸಿ ತಳಿ ಸಂವರ್ಧನಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ನಂತರ ಕೊಡಗು ಜಿಲ್ಲೆಯ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡ ಅಳುವಾರ ಗ್ರಾಮದಲ್ಲಿ 2010 ರಿಂದ ನೂತನ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ವನ್ಯಜೀವಿ ವಿಷಯದಲ್ಲಿ ಸಂಶೋಧನೆ, ಪಶು ವೈದ್ಯಕೀಯ ಪದವೀಧರರಿಗೆ ವನ್ಯಜೀವಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿ (ಎಂವಿಎಸ್‍ಸಿ ಮತ್ತು ಪಿಎಚ್‍ಡಿ), ವನ್ಯಜೀವಿ ವಿಷಯದಲ್ಲಿ ತರಬೇತಿ, ವನ್ಯಜೀವಿ ತರಬೇತಿಯಲ್ಲಿ ಸಾರ್ವಜನಿಕರಿಗೆ ಶಿಕ್ಷಣ ನೀಡುವದು ಈ ಕೇಂದ್ರದ ಉದ್ದೇಶವಾಗಿದೆ.

ಈ ಕೇಂದ್ರದಿಂದ ಈಗಾಗಲೇ 15 ಕ್ಕೂ ಹೆಚ್ಚು ಪದವೀಧರರ ತಂಡಗಳು ತರಬೇತಿ ಪಡೆದು ತಮ್ಮ ತಮ್ಮ ಕಾರ್ಯಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಸಂಶೋಧನಾ ಸಂಸ್ಥೆಯಲ್ಲಿ ತರಬೇತಿ ಪಡೆದವರು ಆನೆಗಳಿಗೆ ಮದ್ದು ಅಳವಡಿಕೆ, ಪ್ರಾಣಿಗಳ ಹಾವಳಿಯನ್ನು ತಪ್ಪಿಸಲು ಅವುಗಳಿಗೆ ಬೇಕಾಗುವ ಮುಂಜಾಗ್ರತಾ ಕ್ರಮಗಳು ಹಾಗೂ ವನ್ಯಪ್ರಾಣಿಗಳ ಇರುವಿಕೆಯ ಬಗ್ಗೆ ತಿಳಿದು, ಅವುಗಳಿಗೆ ಗನ್‍ಗಳ ಮೂಲಕ ನಿದ್ರೆ ಬರುವ ಔಷಧಿಯುಳ್ಳ ಇಂಜೆಕ್ಷನ್ ನೀಡುವದು ಜೊತೆಗೆ ಸಾಂಕ್ರಾಮಿಕ ರೋಗಕ್ಕೆ ಔಷಧಿಗಳನ್ನು ನೀಡುವಿಕೆ, ನಿರ್ವಹಣೆ, ಆಹಾರ ನೀಡುವಿಕೆ ಬಗ್ಗೆ ಈ ಕೇಂದ್ರದಲ್ಲಿ ಪ್ರಾಯೋಗಿಕವಾಗಿ ತರಬೇತಿ ನೀಡಲಾಗುತ್ತದೆ.

ರಾಜ್ಯದ ಮೂಲೆ ಮೂಲೆಗಳಿಂದ ಪಶು ವೈದ್ಯರು ಈ ಸಂಶೋಧನಾ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇವರಿಗೆ ತಜ್ಞ ಪಶು ವೈದ್ಯರು ತರಬೇತಿ ನೀಡುತ್ತಿದ್ದಾರೆ.

ಈಗಾಗಲೇ ಒಂದು ತಂಡದಲ್ಲಿ 25 ಜನರಂತೆ ಸುಮಾರು 15ಕ್ಕೂ ಹೆಚ್ಚು ತಂಡಗಳು ತರಬೇತಿ ಪಡೆದು ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಹಾಗೂ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿ ತರಬೇತಿ ಪಡೆದ ಪಶುವೈದ್ಯರು ಜಿಲ್ಲೆಯಲ್ಲಿ ಆನೆ ಹಾವಳಿ ಸಂದರ್ಭ ಕಾಡಾನೆಗಳನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯೊಂದಿಗೆ ಸಹಕಾರ ನೀಡುತ್ತಿದ್ದಾರೆ.

ರಾಜ್ಯ ಸರ್ಕಾರವು ಈ ಕೇಂದ್ರಕ್ಕೆ ದೊಡ್ಡ ಅಳುವಾರ ಗ್ರಾಮದಲ್ಲಿ 89 ಎಕರೆ ಜಾಗವನ್ನು ಮಂಜೂರು ಮಾಡಿ ಉತ್ತಮವಾದ ಕಟ್ಟಡವನ್ನು ನಿರ್ಮಿಸಿಕೊಟ್ಟಿದೆ ಹಾಗೂ ಉತ್ತಮವಾದ ಕಟ್ಟಡವಿದ್ದು, ವಸತಿ ನಿಲಯದ ವ್ಯವಸ್ಥೆ ಮತ್ತು ಆಡಳಿತಾತ್ಮಕದ ಕಟ್ಟಡದ ವ್ಯವಸ್ಥೆಯನ್ನು ಮಾಡಬೇಕಿದೆ.

ಈ ಕಾಮಗಾರಿಗೆ ಬೀದರ್‍ನ ಕರ್ನಾಟಕ ಪಶು ವೈದ್ಯಕಿಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ 2 ಕೋಟಿ ರೂಗಳನ್ನು ಮಂಜೂರು ಮಾಡಿದೆ ಹಾಗೂ ಸಂಶೋಧನಾ ವಿದ್ಯಾರ್ಥಿ ಗಳಿಗೆ ಪ್ರತ್ಯಕ್ಷತೆಗಾಗಿ ನಾಲೆ, ಅಣೆಕಟ್ಟೆ ನಿರ್ಮಾಣ ಮತ್ತು ಕೆರೆ ಅಭಿವೃದ್ಧಿ ವ್ಯವಸ್ಥೆಯನ್ನು ಮಾಡಬೇಕಿದೆ.

ದೊಡ್ಡಅಳುವಾರದ ಸಂಸ್ಥೆಯಲ್ಲಿ ಪಠ್ಯಗಳನ್ನು ಬೋಧಿಸುವದಕ್ಕೂ ಹಾಗೂ ಆಧುನಿಕ ತಂತ್ರಜ್ಞಾನವುಳ್ಳ ಪ್ರಯೋಗಾಲಯದ ಸೌಕರ್ಯವಿದೆ. ಇದಕ್ಕೆ ಪೂರಕವಾಗಿ ಕರ್ನಾಟಕ ಸರ್ಕಾರ ಅರಣ್ಯ ಇಲಾಖೆಗೆ ಒಳಪಟ್ಟ ಅರಣ್ಯ ಮತ್ತು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಮೃಗಾಲಯಗಳಲ್ಲಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಬನ್ನೇರುಘಟ್ಟ, ನಾಗರಹೋಳೆ, ಬಂಡೀಪುರ, ಉದ್ಯಾನವನ ಮತ್ತು ಮೈಸೂರು ಮೃಗಾಲಯಗಳಿಗೆ ವಿದ್ಯಾರ್ಥಿಗಳನ್ನು ಸಂಶೋಧನೆಗಳಾಗಿ ಕರೆದೊಯ್ದು ಪ್ರಾಯೋಗಿಕವಾಗಿ ತರಬೇತಿ ನೀಡಲಾಗುತ್ತಿದೆ. ಪ್ರಾಣಿಗಳು ಮರಣ ಹೊಂದಿದ ನಂತರ ಶವ ಸಂಸ್ಕಾರ ಮಾಡುವುದರ ಬಗ್ಗೆ ಹೆಚ್ಚಿನ ತರಬೇತಿ ಹಾಗೂ ಆರು ತಿಂಗಳಿಗೊಮ್ಮೆ ಸಮೀಪದ ಮತ್ತಿಗೋಡು ಆನೆ ಕೇಂದ್ರ ಮತ್ತು ನಾಗರಹೊಳೆಯ ಪ್ರದೇಶಗಳಲ್ಲೇ ಪ್ರಾಣಿಗಳಿಂದ ಸಿಗುವ ರಕ್ತವನ್ನು ತಂದು ಪರೀಕ್ಷಿಸುವದು. ಅದರಲ್ಲಿ ರೋಗ ಇರುವದನ್ನು ಪತ್ತೆ ಹಚ್ಚುವದು ಈ ಕೇಂದ್ರದ ಪ್ರಮುಖ ಉದ್ದೇಶ ಆಗಿರುತ್ತದೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಎಂ.ಸಿ. ಶಿವಕುಮಾರ್ ತಿಳಿಸಿದ್ದಾರೆ.

ಈ ಕೇಂದ್ರದಲ್ಲಿ ಪಶು ವೈದ್ಯಕೀಯಕ್ಕೆ ಸಂಬಂಧಿಸಿದಂತೆ ವನ್ಯಜೀವಿ ವಿಷಯದಲ್ಲಿ ವಿಶೇಷ ಪುಸ್ತಕಗಳ ವ್ಯವಸ್ಥೆಯು ಇದೆ. ಮುಂದಿನ ದಿನಗಳಲ್ಲಿ ಸಂಶೋಧನಾ ಕೇಂದ್ರದಲ್ಲಿ ರೈತರಿಗೆ ಅನುಕೂಲ ವಾಗುವಂತೆ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವ ಆನೆ ಮತ್ತು ಮಾನವ ಸಂಘರ್ಷ ವಿಷಯಕ್ಕೆ ಸಂಬಂಧಪಟ್ಟಂತೆ ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸಲು ಉದ್ದೇಶಿಸಿದೆ. ವರ್ಷದಲ್ಲಿ ರಾಜ್ಯದ 6 ಪಶು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಈ ಕೇಂದ್ರಕ್ಕೆ ಭೇಟಿ ನೀಡಿ ಮುಂದಿನ ಉನ್ನತ ವ್ಯಾಸಂಗವಾದ ಸಂಶೋಧನಾ ತರಬೇತಿಗೆ ಪೂರಕವಾದ ಮಾಹಿತಿ ಪಡೆಯುತ್ತಾರೆ.

ರಾಜ್ಯ ಸರ್ಕಾರ ಈ ಎಲ್ಲಾ ವ್ಯವಸ್ಥೆಗಳನ್ನು ನೀಡಿದರೂ ಕೇಂದ್ರಕ್ಕೆ ತೆರಳಲು ಸಮರ್ಪಕವಾದ ರಸ್ತೆಯ ಕೊರತೆ ಇದೆ. ಜೊತೆಯಲ್ಲಿ ಈಗಿರುವ ಕೇಂದ್ರದ ವೀಸ್ತೀರ್ಣ ದೊಳಗೆ ಸುಸಜ್ಜಿತ ಕಟ್ಟಡ ನಿರ್ಮಿಸಲು ಅನುದಾನವು ಬಿಡುಗಡೆ ಗೊಂಡಿದ್ದು, ಕಾಮಗಾರಿ ನಡೆಸಲು ಕ್ರಿಯಾ ಯೋಜನೆಯನ್ನು ರೂಪಿಸಲಾಗುತ್ತಿದೆ.

-ನಾಗರಾಜಶೆಟ್ಟಿ