ಮಡಿಕೇರಿ, ಜೂ. 27: ಕೊಡಗು ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಕೃಷಿ ಚಟುವಟಿಕೆಯಲ್ಲಿ ಹಿನ್ನಡೆಯೊಂದಿಗೆ; ಅನ್ನದಾತನ ಬಟ್ಟಲು ಕೂಡ ಕಿರಿದಾಗತೊಡಗಿದೆ. ಕಳೆದ ವರ್ಷ ಸುರಿದ ಭಾರೀ ಮಳೆಯ ನಡುವೆ ಸಂಭವಿಸಿದ ಪ್ರಾಕೃತಿಕ ವಿಕೋಪದ ಪರಿಣಾಮ ಕೃಷಿಯಲ್ಲಿ ತೊಡಕುಗಳು ಎದುರಾಗಿತ್ತು. ಪರಿಣಾಮವೆಂಬಂತೆ ಭತ್ತದ ಬೆಳೆ ಉತ್ಪಾದನೆಯೂ ಕುಂಠಿತಗೊಳ್ಳುವಂತಾಯಿತು. ಈ ಬಾರಿ ಮುಂಗಾರು ಮಳೆಯ ಹಿನ್ನೆಡೆ ನಡುವೆ ರೈತರಲ್ಲಿ ಆತಂಕ ಹೆಚ್ಚಾಗಿದೆ. ಜೂನ್ ಮಾಸ ಪೂರ್ಣಗೊಂಡರೂ ಭತ್ತದ ಕೃಷಿಗೆ ಚಾಲನೆ ಲಭಿಸಿಲ್ಲವೆಂದು ಕೃಷಿ ತಜ್ಞರು ಮಾಹಿತಿ ನೀಡಿದ್ದಾರೆ.
ಒಂದೊಮ್ಮೆ ಜಿಲ್ಲೆಯಲ್ಲಿ ಸರಿ ಸುಮಾರು 50 ಸಾವಿರ ಹೆಕ್ಟೇರ್ ಭತ್ತವನ್ನೇ ಅವಲಂಬಿಸಲಾಗಿತ್ತು; ವರ್ಷಗಳು ಉರುಳಿದಂತೆ ಅನ್ನದಾತನ ಬಟ್ಟಲು ಕಿರಿದಾಗುತ್ತಾ ಸರಾಸರಿ 35000 ರಿಂದ 40 ಸಾವಿರ ಹೆಕ್ಟೇರ್ ನಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ಕಳೆದ ಹತ್ತು ವರ್ಷಗಳಲ್ಲಿ ಈ ಬಯಲು ಪ್ರದೇಶ 35 ಸಾವಿರ ಹೆಕ್ಟೇರ್‍ಗೆ ಸೀಮಿತಗೊಂಡಿತ್ತು.
(ಮೊದಲ ಪುಟದಿಂದ)
ಕಳೆದ ಸಾಲಿನಲ್ಲಿ ಕೃಷಿ ಇಲಾಖೆಯು ಸರಾಸರಿ 30500 ಹೆಕ್ಟೇರ್ ಭತ್ತ ಬೆಳೆಯ ಗುರಿ ಇರಿಸಿಕೊಂಡರೆ; 40 ಸಾವಿರ ಹೆಕ್ಟೇರ್‍ವಷ್ಟು ಮುಸುಕಿನ ಜೋಳ ಅಂದಾಜಿಸಲಾಗಿತ್ತು. ಉಳಿದಂತೆ ಜಿಲ್ಲೆಯ ಬಯಲು ಸೀಮೆಯಲ್ಲಿ ಕೃಷಿ ಮಾಡುತ್ತಿದ್ದ ರಾಗಿ ಹಾಗೂ ತಂಬಾಕು, ದ್ವಿದಳ ಧಾನ್ಯಗಳು ಸಂಪೂರ್ಣ ಸ್ಥಗಿತಗೊಂಡಿತು.
ಪ್ರತಿಕೂಲ ಪರಿಣಾಮ : ಕಳೆದ ವರ್ಷ ಎದುರಾಗಿದ್ದ ಪ್ರಾಕೃತಿಕ ಹಾನಿಯಿಂದಾಗಿ ಕೇವಲ 23270 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭತ್ತ ಬೆಳೆಯಲು ಸಾಧ್ಯವಾಗಿದೆ. ಬಹುತೇಕ ಕಡೆ ಗದ್ದೆಗಳು ಮಣ್ಣು ಪಾಲಾಗಿ ಇಂದಿಗೂ ಕೃಷಿಗೆ ಸಾಧ್ಯವಾಗುತ್ತಿಲ್ಲ. ಪ್ರಸಕ್ತ ಹವಾಮಾನದ ಪ್ರತಿಕೂಲ ಪರಿಣಾಮದಿಂದ ಇನ್ನಷ್ಟು ಹೊಡೆತ ಬೀಳುವ ಸಂಭವ ಎದುರಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಉತ್ಪನ್ನ ಇಳಿಮುಖ : ಕಳೆದ ಸಾಲಿನ ಈ ವ್ಯತ್ಯಾಸದಿಂದಾಗಿ ಕೊಡಗಿನಲ್ಲಿ ಸರಾಸರಿ 7.91 ಲಕ್ಷ ಕ್ವಿಂಟಾಲ್ ಭತ್ತ ಬೆಳೆಯಲಾಗಿದೆ ಎಂದು ಕೃಷಿ ಇಲಾಖೆಯ ಮಾಹಿತಿ ಲಭಿಸಿದೆ. ಪ್ರತಿ ಎಕರೆಗೆ ಉತ್ತಮ ಹವಾಮಾನ ಇರುವೆಡೆಗಳಲ್ಲಿ ಸರಾಸರಿ 24 ಕ್ವಿಂಟಾಲ್ ಭತ್ತದ ಬೆಳೆ ರೈತನ ಕೈಗೆಟುಗುತ್ತಿದ್ದರೆ; ಕಳೆದ ಸಾಲಿನ ಪರಿಸ್ಥಿತಿಯಲ್ಲಿ ಎಕರೆಗೆ ಸರಾಸರಿ 13.06 ಕ್ವಿಂಟಾಲ್ ಮಾತ್ರ ಲಭಿಸುವಂತಾಗಿದೆ ಎಂದು ತಿಳಿದು ಬಂದಿದೆ.
ಎಲ್ಲೆಡೆ ಆತಂಕ : ಕೃಷಿ ಇಲಾಖೆಯ ಅಭಿಪ್ರಾಯದಂತೆ ಪ್ರಸಕ್ತ ಮುಂಗಾರು ಕ್ಷೀಣಗೊಂಡಿರುವ ಪರಿಣಾಮ ರೈತ ಸಮುದಾಯ ಉಳುಮೆಯೊಂದಿಗೆ ಸಸಿಮಡಿ ಬಿತ್ತನೆಗೆ ಈಗಷ್ಟೇ ತಯಾರಿ ನಡೆಸಿದ್ದು, ಬಿತ್ತನೆ ಬೀಜವನ್ನು ತೀರಾ ಅಲ್ಪ ಪ್ರಮಾಣದಲ್ಲಿ ಕೊಂಡೊಯ್ಯುತ್ತಿರುವದು ಕಂಡು ಬಂದಿದೆ. ಕಾರಣ ಯಾವದೇ ಗದ್ದೆ ಬಯಲುಗಳಲ್ಲಿ ಇನ್ನು ಕೂಡ ಕೃಷಿ ಕಾಯಕಕ್ಕೆ ಪೂರಕ ವಾತಾವರಣ ಸೃಷ್ಟಿಯಾಗಿಲ್ಲ. ಅಲ್ಪಸ್ವಲ್ಪ ಶೀತ ಪ್ರದೇಶಗಳಲ್ಲಿ ಉಳುಮೆಯೊಂದಿಗೆ ನಾಟಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಒಣ ಬಿತ್ತನೆ : ಒಣ ಭೂಮಿಯಲ್ಲಿ ಬಿತ್ತನೆಯೊಂದಿಗೆ ಸಸಿಮಡಿ ಸಿದ್ಧಗೊಳ್ಳುತ್ತಿದ್ದು, ತೇವಾಂಶ ಸ್ಥಳಗಳಲ್ಲಿ ಬಿತ್ತನೆಗೆ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಇದೀಗ ಮೂರು ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ಮುಂಗಾರು ವಾತಾವರಣ; ರೈತರ ಮೊಗದಲ್ಲಿ ಒಂದಿಷ್ಟು ಸಮಾಧಾನ ಕಾಣುವಂತೆ ತೋರುತ್ತಿದ್ದರೂ; ಇನ್ನು ಕೂಡ ಆತಂಕ ದೂರವಾಗಿಲ್ಲವೆಂದು ತಜ್ಞರ ಅಭಿಪ್ರಾಯವಾಗಿದೆ.
ತಾಲೂಕುವಾರು ಗುರಿ : ಪ್ರಸಕ್ತ ಸಾಲಿನಲ್ಲಿ ಮುಂಗಾರು ಬೆಳೆಯ ಗುರಿಯನ್ನು ಮಡಿಕೇರಿ ತಾಲೂಕಿನಲ್ಲಿ 6500 ಹೆಕ್ಟೇರ್ ನಿರೀಕ್ಷಿಸಲಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ 10 ಸಾವಿರ ಹೆಕ್ಟೇರ್ ಭತ್ತದೊಂದಿಗೆ 4 ಸಾವಿರ ಹೆಕ್ಟೇರ್ ಮುಸುಕಿನ ಜೋಳದ ಗುರಿ ಹೊಂದಲಾಗಿದೆ. ಈ ಪೈಕಿ 650 ಹೆಕ್ಟೇರ್ ಮಾತ್ರ ಬೀಜ ಹಾಕಿರುವದು ಗೋಚರಿಸಿದೆ. ವೀರಾಜಪೇಟೆ ತಾಲೂಕಿನಲ್ಲಿ 14 ಸಾವಿರ ಹೆಕ್ಟೇರ್ ಭತ್ತ ಬೆಳೆಯ ಗುರಿ ಹೊಂದಿದ್ದು, ಒಟ್ಟಾರೆ ಜಿಲ್ಲೆಯಲ್ಲಿ 34500 ಹೆಕ್ಟೇರ್ ಗುರಿ ಇರಿಸಿಕೊಂಡಿರುವದಾಗಿ ಇಲಾಖೆಯ ಅಂಕಿ ಅಂಶ ಲಭಿಸಿದೆ.
ಆದರೆ ಇಲಾಖೆಯ ವರದಿ ಪ್ರಕಾರ ಇನ್ನು ರೈತರು ಸಸಿಮಡಿ ಬಿತ್ತನೆಗೆ ಈಗಷ್ಟೇ ಚಾಲನೆ ನೀಡಿದ್ದಾಗಿದೆ. ಕೃಷಿ ಇಲಾಖೆಯಿಂದ ಆಯ ಹೋಬಳಿಗಳ ರೈತ ಸಂಪರ್ಕ ಕೇಂದ್ರಗಳಿಂದ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಒದಗಿಸಲಾಗಿದೆ. ಗೊಬ್ಬರ ಇತ್ಯಾದಿ ಯಾವದೇ ಕೊರತೆ ಉಂಟಾಗದಂತೆ ಅಗತ್ಯ ಕ್ರಮವಹಿಸ ಲಾಗಿದೆ ಎಂದು ಅಧಿಕಾರಿಗಳು ಮಾಹತಿ ನೀಡಿದ್ದು, ಯಾವದೇ ಕೊರತೆಗಳ ಬಗ್ಗೆ ರೈತರು ಹತ್ತಿರದ ಕೇಂದ್ರಗಳನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳುವಂತೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.