ಮಡಿಕೇರಿ, ಜೂ. 27: ಭಾರತೀಯ ಸಮಾಜದ ಎಲ್ಲಾ ವರ್ಗದ ಜನತೆಯಲ್ಲಿ ವೇದ ಮತ್ತು ಉಪನಿಷತ್ತಿನ ಮೌಲ್ಯಗಳು ಹಾಸು ಹೊಕ್ಕಾಗಿದ್ದು, ಈ ಮೌಲ್ಯಯುತ ಜೀವನದಿಂದ ಸನ್ಮಾರ್ಗದೊಂದಿಗೆ ಆನಂದಪೂರ್ಣ ಬದುಕು ಕಂಡುಕೊಳ್ಳುವದು ಸಾಧ್ಯವೆಂದು ಕೆ.ಆರ್. ನಗರ ಎಡತೊರೆ ಶಂಕರ ಮಠದ ಶ್ರೀ ಶಂಕರಭಾರತಿ ಸ್ವಾಮೀಜಿ ನುಡಿದರು. ಅಂತಹ ಆನಂದಪೂರ್ಣ ಬದುಕು ಪಡೆದುಕೊಳ್ಳುವಲ್ಲಿ ಭಗವತ್ಪಾದ ಶಂಕರರು ಉಪನಿಷತ್ತಿಗೆ ಭಾಷ್ಯ ಬರೆಯುವ ಮೂಲಕ; ಸರಳ ಮಾರ್ಗವನ್ನು ಮನುಕುಲಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ಅವರು ನೆನಪಿಸಿದರು.
ಶ್ರೀಮಠದ ವೇದಾಂತ ಭಾರತಿ ವತಿಯಿಂದ ಇಲ್ಲಿನ ವೇದಾಂತ ಸಂಘದಲ್ಲಿ ಒಂದು ವಾರ ಆಯೋಜಿಸಿರುವ; ತೈತೀರಿಯ ಉಪನಿಷತ್ತಿನ ಸಾರ ಉಪನ್ಯಾಸದ ಕುರಿತು ಸ್ವಾಮೀಜಿ ಮಾತನಾಡಿದರು. ಮನುಷ್ಯನ ಶ್ರೇಯಸ್ಸಿಗೆ ದಾರಿ ತೋರಿಸುವ ಇಂತಹ ಸ್ತೋತ್ರ ಪಾರಾಯಣದೊಂದಿಗೆ; ಅರ್ಥ ತಿಳಿಯುವದರಿಂದ ಸ್ವಾಭಾವಿಕ ಆನಂದ ಪಡೆಯುವದು ಸಾಧ್ಯವೆಂದು ಅವರು ನೆನಪಿಸಿದರು.
ಯುವ ಸಮೂಹ ನಡೆ ವಿಷಾದನೀಯ: ಇಂದಿನ ಸಮಾಜ ವ್ಯವಸ್ಥೆಯಲ್ಲಿ ಉಪನಿಷತ್ತಿನ ಬಗ್ಗೆ ತಿಳಿಯುವಲ್ಲಿ ಯುವ ಸಮೂಹ ಮಹತ್ವ ನೀಡದಿರುವ ಕುರಿತು ವಿಷಾದಿಸಿದ ಅವರು; ತಮಗೆ ಅರಿವಿಲ್ಲದೆ
(ಮೊದಲ ಪುಟದಿಂದ) ಗುಡ್ಡಗಾಡಿನ ಸಾಮಾನ್ಯ ಜನರು ಕೂಡ ತಾಯಿಯನ್ನು ಪೂಜ್ಯ ಭಾವದಿಂದ ಕಾಣುತ್ತಾ ಮೌಲ್ಯಯುತ ಜೀವನವನ್ನು ಭಾರತೀಯ ಸಮಾಜ ವ್ಯವಸ್ಥೆಯಲ್ಲಿ ಕಂಡುಕೊಂಡಿರುವದಾಗಿ ಉದಾಹರಿಸಿದರು.
ಶಾಶ್ವತ ಆನಂದಕ್ಕಾಗಿ ಜೀವನ : ಮನುಷ್ಯ ಜೀವನವು ಶಾಶ್ವತ ಆನಂದಕ್ಕಾಗಿ ಇದ್ದು, ಹೆತ್ತ ತಾಯಿಯನ್ನು ಪೂಜಿಸುವದು, ತಂದೆ ಮೇಲಿನ ಗೌರವ, ಗುರುವಿನಲ್ಲಿ ಶ್ರದ್ಧೆ, ಅತಿಥಿಗಳಿಗೆ ಉಪಚರಿಸುವದು ಸೇರಿದಂತೆ ಮೌಲ್ಯಯುತ ಜೀವನದೆಡೆಗೆ ಶಂಕರಾಚಾರ್ಯರು ಸರಳ ರೀತಿಯಲ್ಲಿ ಬಾಷ್ಯ ಬರೆದಿದ್ದು; ಈ ಅಂಶವನ್ನು ಇತರೆಡೆಗಳಲ್ಲಿ ಕಾಣಲು ಸಾಧ್ಯವಿಲ್ಲವೆಂದು ಮೆಲುಕು ಹಾಕಿದರು. ಸತ್ಯಪಥದೊಂದಿಗೆ ಸನ್ಮಾರ್ಗದಲ್ಲಿ ಸಾಗಿದರೆ, ಮಾತ್ರ ಬ್ರಹ್ಮಾನಂದ ಪಡೆಯುವದು ಸುಲಭವೆಂದು ಉದಾಹರಣೆ ಸಹಿತ ನುಡಿದರು.
ಲೌಕಿಕ ಆನಂದವಲ್ಲ : ಕ್ಷಣಿಕ ಸುಖಕ್ಕಾಗಿ ಹಾತೊರೆಯುತ್ತಾ; ಬೇಡಿಕೆಗಳ ಕಾಮನೆಯಿಂದ ಹೊರ ಬಂದಾಗ ಮಾತ್ರ ಲೌಕಿಕ ಆನಂದದಿಂದ ಮುಕ್ತರಾಗಿ ಶಾಶ್ವತ ಆನಂದ ಹೊಂದುವದು ಅನುಭವಕ್ಕೆ ಬರಲಿದೆ ಎಂದ ಶ್ರೀಗಳು ತಿಳಿಹೇಳಿದರು. ಅಂತಹ ಪಥದಲ್ಲಿ ಮುನ್ನಡೆಯಲು ಪ್ರಥಮವಾಗಿ ನಮ್ಮ ಮನಸ್ಸನ್ನು ಶುದ್ಧಗೊಳಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.
ಪ್ರಾಣವಾಯು ಸಾಕ್ಷಿ : ಶಂಕರಭಗವತ್ಪಾದರ ಆಶಯದಂತೆ ಸರ್ವಾಂತರ್ಯಾಮಿ ಶ್ರೀಹರಿಯ ಇರುವಿಕೆಗೆ ನಮ್ಮ ಉಸಿರಾಟ ಸಾಕ್ಷಿಯೆಂದು ಉದಾಹರಿಸುತ್ತಾ; ನಿತ್ಯ ನಿದ್ರಿಸುವ ನಮ್ಮ ಶರೀರದ ಎಲ್ಲಾ ಇಂದ್ರೀಯಗಳೊಂದಿಗೆ ಪ್ರಾಣವಾಯು ತನ್ನ ಕ್ರಿಯೆಗಳನ್ನು ನಿಲ್ಲಿಸಿದರೆ ಹೇಗೆಂದು ಬೊಟ್ಟು ಮಾಡುತ್ತಾ; ಅದೂ ಕೂಡ ಭಗವಂತನ ಪ್ರೇರಣೆಯಿಂದ ಸಾಧ್ಯವಾಗಿದೆ ಎಂದು ಸ್ಪಷ್ಟಪಡಿಸಿದರು.
ನಗರದ ಶಿವಶಕ್ತಿ ಬಳಗ ಪೂರ್ಣಕುಂಭದೊಂದಿಗೆ ಸ್ವಾಮೀಜಿ ಅವರನ್ನು ಬರಮಾಡಿಕೊಂಡರೆ; ಎಸ್.ಎಸ್. ಸಂಪತ್ಕುಮಾರ್ ನಿರೂಪಿಸಿ, ಎಂ. ಈಶ್ವರ್ಭಟ್ ಪರಿಚಯಿಸಿದರು. ಅರ್ಚಕರಾದ ಸಂತೋಷ್ ಭಟ್ ಹಾಗೂ ಅಕ್ಷರ ಭಟ್ ತೈತೀರಿಯ ಉಪನಿಷತ್ ಹಾಗೂ ಮಾತೆಯರು ಹರಿಮೀಡೆ ಪಠಿಸಿದರು. ಪ್ರಮುಖರಾದ ಶಿರಸಿಯ ಮಹಾಬಲೇಶ್ವರ ಭಟ್, ಜಿ.ಟಿ. ರಾಘವೇಂದ್ರ, ಅನಂತಸುಬ್ಬರಾವ್, ಡಾ.ಎಂ.ಜಿ. ಪಾಟ್ಕರ್, ವೆಂಕಟೇಶ್ ಅಮೂಲ್ಯ ಸೇರಿದಂತೆ ಇತರರು ಪಾಲ್ಗೊಂಡಿದ್ದರು.