ಮಡಿಕೇರಿ, ಜೂ. 27: ಕೊಡಗು ಜಿಲ್ಲೆಯಲ್ಲಿ ಈ ಹಿಂದಿನ ವರ್ಷಗಳಲ್ಲಿ ಮಳೆಯ ಅಬ್ಬರವೇ ನಿತ್ಯ ಸುದ್ದಿಯಾಗುತ್ತಿದ್ದರೆ ಪ್ರಸಕ್ತ ವರ್ಷ ಮಳೆಗಾಲ ಎನ್ನುವ ಭಾವನೆಯೇ ಮರೆತು ಹೋದಂತಹ ಸ್ಥಿತಿ ಜಿಲ್ಲೆಯ ಬಹುತೇಕ ಕಡೆ ಕಂಡುಬಂದಿದೆ. ದಕ್ಷಿಣ ಕೊಡಗಿನ ಗ್ರಾಮಾಂತರ ಪ್ರದೇಶಗಳಲ್ಲಿ ಸಾಕಷ್ಟು ಮಳೆಯಾಗಿದ್ದು, ಪಟ್ಟಣ ಪ್ರದೇಶಗಳಲ್ಲಿ ಮಳೆ ಕಣ್ಣಾಮುಚ್ಚಾಲೆ ಆಡಿದಂತೆ ಬಿಸಿಲಿನ ನಡುವೆ ಬಂದು ಹೋಗುತ್ತಿದೆ. ಆದ್ರ್ರಾ ನಕ್ಷತ್ರದ ಮಳೆ ಕ್ಷೀಣಗೊಂಡಿದ್ದು. ಜುಲೈ 6 ರಂದು ಪುನರ್ವಸು ನಕ್ಷತ್ರವೂ ಸನ್ನಿಹಿತವಾಗುತ್ತಿದ್ದರೂ ಮಳೆಯ ರಭಸ ಮಾಯವಾಗಿದೆ.

ಮಡಿಕೇರಿ ನಗರ ಸೇರಿದಂತೆ ಮಡಿಕೇರಿ ತಾಲೂಕಿನ ಬಹು ಭಾಗ ಮಳೆÉಯ ಅಭಾವ ಎದುರಿಸುತ್ತಿದ್ದು ಜಲ ಕ್ಷಾಮದ ಭಯ ಆವರಿಸಿದೆ. ಕೊಡಗಿನ ಆರಾಧ್ಯ ಜಲ ಶಕ್ತಿ, ಕರ್ನಾಟಕದ ಕಣ್ಮಣಿ ರಾಷ್ಟ್ರದ ಜೀವನದಿ ಕಾವೇರಿಯ ಪ್ರಮುಖ ಕೇಂದ್ರ ಭಾಗಮಂಡಲ ಸಂಗಮದಲ್ಲಿ ನೀರು ಕ್ಷೀಣಗೊಳ್ಳುತ್ತಿರುವದು ಆತಂಕಕ್ಕೆ ಕಾರಣವಾಗಿದೆ. ಸೋಮವಾರಪೇಟೆ ತಾಲೂಕಿನ ಪುಷ್ಪಗಿರಿ ವಲಯದ ಗ್ರಾಮಗಳಾದ ಶಾಂತಳ್ಳಿ, ಕುಂದಳ್ಳಿ, ಮಲ್ಲಳ್ಳಿ ಮೊದಲಾದೆಡೆ ಪೂರ್ವಕಾಲದಿಂದಲೂ ಭಾರೀ ಮಳೆಯಾಗುತ್ತಿದ್ದು ಈ ವರ್ಷ ಇನ್ನೂ ಮಳೆಯ ದರ್ಶನ ಮುಸುಕಾಗಿದ್ದು ರೈತರು, ಗ್ರಾಮಸ್ಥರು ಕ¼ವಳಗೊಳ್ಳುವಂತೆ ಮಾಡಿದೆ. ಹಾರಂಗಿ ನೀರಿನ ಮಟ್ಟ ಹಾಗೂ ಕುಶಾಲನಗರದಲ್ಲಿ ಕಾವೇರಿ ಮಟ್ಟವೂ ಏರಿಕೆಗೊಳ್ಳುತ್ತಿಲ್ಲ.

ಭರ್ತಿಯಾಗದ ತ್ರಿವೇಣಿ ಸಂಗಮ

ಭಾಗಮಂಡಲ: ಪ್ರಸಕ್ತ ಸಾಲಿನ ಮಳೆಯ ಕೊರತೆಯಿಂದ ಇಲ್ಲಿನ ತ್ರಿವೇಣಿ ಸಂಗಮ ಭರ್ತಿಯಾಗದೆ ಸಂಕಷ್ಟ ಎದುರಾಗಿದೆ. ಈ ವ್ಯಾಪ್ತಿಯ ರೈತರು ಮಾತ್ರವಲ್ಲ ಜನಸಾಮಾನ್ಯರು ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಪ್ರತಿವರ್ಷ ಈ ವೇಳೆಗೆ ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿ ಕಾವೇರಿ ಉಕ್ಕಿ ಹರಿಯುತ್ತಿತ್ತು. ಮುಂಗಾರು ಮಳೆ ತಡವಾದ ಹಿನ್ನೆಲೆಯಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶ ಎಂಬ ಖ್ಯಾತಿಯ ಭಾಗಮಂಡಲದಲ್ಲಿ ಕಾವೇರಿ ನದಿ ತುಂಬುವದು ಹೋಗಲಿ ಕುಡಿಯುವ ನೀರಿಗೂ ತೊಂದರೆಯಾಗಿದೆ. ಈ ಅವಧಿಯಲ್ಲಿ ಪ್ರತಿವರ್ಷವೂ ರೈತರು ಭತ್ತದ ಬಿತ್ತನೆ ಕಾರ್ಯದಲ್ಲಿ ತೊಡಗುತ್ತಿದ್ದರು. ಈ ವರ್ಷ ಭತ್ತದ ಬಿತ್ತನೆಗಾಗಿ ರೈತರು ಆಗಸದತ್ತ ದೃಷ್ಟಿ ನೆಟ್ಟಿದ್ದಾರೆ. ಮಳೆ ಬೀಳದೆ ಬಿತ್ತನೆ ಕಾರ್ಯಕ್ಕೆ ತೊಡಕಾಗಿದೆ. ಮಳೆ ಪ್ರಾರಂಭವೇ ಆಗದ್ದರಿಂದ ಹೆಚ್ಚಿನ ರೈತರು ಭತ್ತದ ಕೃಷಿಯಿಂದ ಹಿಂದೆ ಸರಿಯುತ್ತಿದ್ದಾರೆ.

ಅವಧಿಗೆ ಸರಿಯಾಗಿ ಮಳೆಯಾಗದ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯ ರೈತಾಪಿ ವರ್ಗಕ್ಕೆ ಕಾಫಿ ಮತ್ತು ಕಾಳುಮೆಣಸು ಕೈಕೊಟ್ಟಿದೆ. ಇದೀಗ ಭತ್ತದ ಕೃಷಿಯೂ ಕೈಕೊಡುವ ಲಕ್ಷಣ ತೋರುತ್ತಿದೆ. ಕಳೆದ ಬಾರಿ ಈ ವೇಳೆಗಾಗಲೆ ಎರಡು ಮೂರು ಬಾರಿ ತ್ರಿವೇಣಿ ಸಂಗಮ ಭರ್ತಿಯಾಗಿತ್ತು. ಈ ಅವಧಿಗೆ ಭಾಗಮಂಡಲದಲ್ಲಿ (2225 ಮಿ.ಮೀ). ಸುಮಾರು 85 ಇಂಚು ಮಳೆ ಸುರಿದಿತ್ತು. ಈ ವರ್ಷ ಕೇವಲ 574 ಮಿ.ಮೀ. ಅಂದರೆ 20 ಇಂಚು ಮಳೆ ಸುರಿದಿದೆ. ಕಳೆದ ವರ್ಷಕ್ಕಿಂತ 60 ಇಂಚು ಮಳೆ ಕಡಿಮೆಯಾಗಿದೆ. ಪರಿಣಾಮ ಹೋಬಳಿ ವ್ಯಾಪ್ತಿಯ ಬಾವಿಗಳಲ್ಲಿ ಕುಡಿಯುವ

(ಮೊದಲ ಪುಟದಿಂದ) ನೀರಿನ ಪ್ರಮಾಣ ಕಡಿಮೆಯಾಗಿದ್ದು ಸಮಸ್ಯೆ ಎದುರಿಸುವಂತಾಗಿದೆ.

ಮುಂಗಾರು ಮಳೆ 15-20 ದಿನ ಮುಂದೆ ಹೋಗಿದ್ದು ಇನ್ನೂ ಮಳೆ ಬರುವ ಮುನ್ಸೂಚನೆ ಇಲ್ಲ ಎನ್ನುತ್ತಾರೆ ಭಾಗಮಂಡಲದ ಅನುಭವಸ್ಥ ರೈತ ನಂಜುಡಪ್ಪ. ಬೇಸಿಗೆಯಲ್ಲಿ ಸಕಾಲದಲ್ಲಿ ಮಳೆಯಾಗದೆ ಕಾಫಿ ಹೂ ಅರಳದೆ ಕಾಫಿ ಸಂಪೂರ್ಣ ನೆಲಕಚ್ಚಿದೆ. ಮಳೆಯಿಂದ ಕಾಳು ಮೆಣಸು ಚಿಗುರೊಡೆದು ತೆನೆ ಕಟ್ಟಬೇಕಿತ್ತು. ಇನ್ನು ಮಳೆ ಬಂದರೂ ಕಾಳು ಮೆಣಸು ಇಳುವರಿ ಲಭಿಸಲು ಸಾಧ್ಯವಿಲ್ಲ. ಈಗಾಗಲೇ ಗದ್ದೆಯನ್ನು ಹದ ಮಾಡಿ ಬಿತ್ತನೆಗೆ ರೈತರು ಕಾಯುತ್ತಿದ್ದಾರೆ. ವರುಣ ಕೃಪೆ ತೋರುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಅತೀ ಹೆಚ್ಚು ಮಳೆ ಬೀಳುವ ಭಾಗಮಂಡಲದಲ್ಲೇ ಹೀಗಾದರೆ ಮುಂದೇನು? ಎಂಬ ಚಿಂತೆ ವ್ಯಕ್ತಪಡಿಸುತ್ತಾರೆ ಅವರು. ತ್ರಿವೇಣಿ ಸಂಗಮ ಈ ಹಿಂದೆ ಭರ್ತಿಯಾಗುತ್ತಿದ್ದ ಸಂದರ್ಭ ಕಳೆದ ಬಾರಿ ಬೋಟಿಂಗ್ ವ್ಯವಸ್ಥೆ ಆಗಿತ್ತು.

“ಪ್ರತಿವರ್ಷ ಜೂನ್ 1ರಿಂದ 15ರ ಒಳಗೆ ಭತ್ತದ ಬಿತ್ತನೆ ಕಾರ್ಯ ಪೂರ್ಣಗೊಳಿಸುತ್ತಿದ್ದೆವು. ಈ ವರ್ಷ ಜೂನ್ 25 ಆದರೂ ಬಿತ್ತನೆಗೆ ಸಿದ್ಧತೆ ನಡೆಸಿಲ್ಲ.ಮಳೆಯ ಕೊರತೆಯಿಂದ ಬಿತ್ತನೆ ಕಾರ್ಯಕ್ಕೆ ಸಂಪೂರ್ಣ ಹಿನ್ನಡೆಯಾಗಿದೆ. ಕಾಫಿಯ ತೋಟಗಳಿಗೆ ಹಲವು ರೈತರು ಈ ಬಾರಿ ರಾಸಾಯನಿಕ ಗೊಬ್ಬರ ಹಾಕಲೂ ಹೋಗಿಲ್ಲ. ಇದು ಕಾಫಿ ಹಾಗೂ ಕಾಳುಮೆಣಸು ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. 1983ರಲ್ಲಿಯೂ ಇದೇ ಪರಿಸ್ಥಿತಿ ಬಂದೊದಗಿತ್ತು. ಆ ಬಳಿಕ ಈಗ ಈ ರೀತಿ ಆಗಿದೆ. ಹೀಗಾದರೆ ರೈತರು ಜೀವಮಾನ ಮಾಡುವದು ಹೇಗೆ?” ಎನ್ನುತ್ತಾರೆ ಅವರು.

ತಲಕಾವೇರಿಯಲ್ಲೂ ಈ ವರ್ಷ ಮಳೆಯ ಪ್ರಮಾಣ ಕುಂಠಿತಗೊಂಡಿದೆ. ಕಳೆದ ವರ್ಷ ಮೇ ತಿಂಗಳಲ್ಲಿ 23 ಇಂಚು ಹಾಗೂ ಜೂನ್ ತಿಂಗಳಲ್ಲಿ 69 ಇಂಚು ಮಳೆ ಸುರಿದಿತ್ತು. ಈ ವರ್ಷ ಮೇ ತಿಂಗಳಲ್ಲಿ ಕೇವಲ 7 ಇಂಚು ಮಳೆ ಸುರಿದಿದೆ. ಜೂನ್ ತಿಂಗಳಲ್ಲಿ ಸುರಿದ ಮಳೆಯ ಪ್ರಮಾಣ 25 ಇಂಚು.ಕಳೆದ ವರ್ಷಕ್ಕೆ ಹೋಲಿಸಿದರೆ 60 ಇಂಚು ಮಳೆ ಕಡಿಮೆಯಾಗಿದೆ.

ಕ್ಷೀಣಗೊಂಡ ಹಾರಂಗಿ

ಕೂಡಿಗೆ: ಕಳೆದ ವರ್ಷ ಜೂನ್ ಅಂತ್ಯದಲ್ಲಿ ಹಾರಂಗಿ ಅಣೆಕಟ್ಟೆಯು ತುಂಬುವ ಹಂತ ತಲುಪಿ 4.16 ಟಿಎಂಸಿ ನೀರು ಸಂಗ್ರಹವಾಗಿತ್ತು. ಆದರೆ, ಈ ಸಾಲಿನಲ್ಲಿ ಮಳೆಯೂ ನಿಗದಿತ ಸಮಯದಲ್ಲಿ ಬೀಳದೆ, ಹಾರಂಗಿ ಜಲಾನಯನದ ಪ್ರದೇಶಗಳ ಲ್ಲಿಯೂ ಮಳೆಯ ಪ್ರಮಾಣ ಕ್ಷೀಣಿಸಿರುವ ಪರಿಣಾಮ ಹಾರಂಗಿ ಅಣೆಕಟ್ಟೆಯು ನೀರಿಲ್ಲದೆ ಬರಡಾಗುತ್ತಿದೆ.

ಹಾರಂಗಿ ಅಣೆಕಟ್ಟೆಯ ಭದ್ರತಾ ನೀರಿನ ಸಾಮಥ್ರ್ಯಕ್ಕಿಂತಲೂ ಕೆಳಮಟ್ಟದಲ್ಲಿ ಕೆರೆಯಂತೆ ನೀರು ಸಂಗ್ರಹವಾಗಿದ್ದು, 2807.33 ಸಾಮಥ್ರ್ಯದ ಜಲಾಶಯದಲ್ಲಿ ಕೇವಲ 0.915 ಟಿಎಂಸಿ ನೀರು ಮಾತ್ರ ಇದೆ.

ಹಾರಂಗಿ ಜಲಾಶಯದಿಂದ ಕೊಡಗು ಜಿಲ್ಲೆಗೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳಾದ ಮೈಸೂರು ಮತ್ತು ಹಾಸನ ಜಿಲ್ಲೆಗಳ ಗಡಿಭಾಗದ ರೈತರಿಗೆ ಬೇಸಾಯ ಮಾಡಲು ನೀರನ್ನು ಒದಗಿಸುವ ಅಣೆಕಟ್ಟೆ ಇದಾಗಿದೆ. ಈಗಾಗಲೇ ಈ ಭಾಗದ ಜಲಾನಯನ ಅಚ್ಚುಕಟ್ಟು ವ್ಯಾಪ್ತಿಯ ರೈತರು ಸಹಕಾರ ಸಂಘದಿಂದ ಬಿತ್ತನೆ ಬೀಜ ಹಾಗೂ ಭತ್ತವನ್ನು ಖರೀದಿಸಿ ಭತ್ತದ ಮಡಿಗಳನ್ನು ತಯಾರಿಸಲು ಸಿದ್ಧರಾಗಿ ಸೋರಿಕೆ ನೀರು ಇಲ್ಲದೆ, ಕೃಷಿ ಮಾಡಲು ಸಾಧ್ಯವಾಗದೆ ಮಳೆಯ ಆಗಮನಕ್ಕೆ ರೈತರು ಕಾದು ಕುಳಿತಿದ್ದಾರೆ.

ಜೂನ್ ಅಂತ್ಯದೊಳಗೆ ಅಥವಾ ಜುಲೈ ಮೊದಲ ವಾರದಲ್ಲಿ ಜಲಾಶಯ ದಲ್ಲಿ ನೀರು ಸಂಗ್ರಹವಾದಲ್ಲಿ ಮಾತ್ರ ನಾಲೆಗಳ ಮೂಲಕ ರೈತರ ಬೇಸಾಯಕ್ಕೆ ನೀರನ್ನು ಒದಗಿಸಲಾಗುತ್ತದೆ. ಆದರೆ, ಇದೀಗ ಮಳೆ ಪ್ರಮಾಣ ಕ್ಷೀಣಗೊಂಡಿದ್ದು, ಜಲಾಶಯದಲ್ಲಿ ನೀರಿಲ್ಲದೆ, ದನಕರುಗಳಿಗೂ ಕುಡಿಯಲು ನೀರಿಲ್ಲದಂತೆ ಹಾಗೂ ಬೇಸಾಯ ಮಾಡಲು ನೀರಿಲ್ಲದೆ ರೈತರಲ್ಲಿ ಆತಂಕ ಉಂಟಾಗಿದೆ.

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2807.33 ಅಡಿಗಳು, ಕಳೆದ ವರ್ಷ ಇದೇ ದಿನ 2840 ಅಡಿ. ಹಾರಂಗಿಯಲ್ಲಿ ಬಿದ್ದ ಮಳೆ 1.40 ಮಿ.ಮೀ., ಕಳೆದ ವರ್ಷ ಇದೇ ದಿನ 13.20 ಮಿ.ಮೀ. ಇಂದಿನ ನೀರಿನ ಒಳಹರಿವು 198 ಕ್ಯುಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 1824 ಕ್ಯುಸೆಕ್.

ಸುದ್ದಿಗಾರರು ಹಾರಂಗಿ ಜಲಾಶಯದ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜೇಗೌಡ ಅವರನ್ನು ಮಾತನಾಡಿಸಿ ದಾಗ, ಹಾರಂಗಿ ಜಲಾನಯನದಲ್ಲಿ ಮಳೆಯಿಲ್ಲದ ಪರಿಣಾಮ ಅಣೆಕಟ್ಟೆಯಲ್ಲಿ ನೀರು ಸಂಗ್ರಹವಾಗದೆ, ನೀರಿನ ಪ್ರಮಾಣ ಕಡಿಮೆಯಿದೆ. ಮುಂದಿನ ದಿನಗಳಲ್ಲಿ ಹಾರಂಗಿ ಜಲಾನಯನದ ಪ್ರದೇಶಗಳಲ್ಲಿ ಮಳೆ ಹೆಚ್ಚು ಬಿದ್ದಲ್ಲಿ ಹಾರಂಗಿ ಜಲಾಶಯ ದಲ್ಲಿ ನೀರಿನ ಸಂಗ್ರಹವಾಗುವ ನಿರೀಕ್ಷೆ ಇದೆ. ನೀರು ಸ್ವಲ್ಪ ಪ್ರಮಾಣದಲ್ಲಿ ಯಾದರೂ ಬಂದ ತಕ್ಷಣ ಜುಲೈ ಅಂತ್ಯದೊಳಗೆ ರೈತರು ಬೇಸಾಯ ಮಾಡಲು ಮತ್ತು ದನಕರುಗಳಿಗೆ ಕುಡಿಯುವ ನೀರಿಗಾಗಿ ನಾಲೆಗಳ ಮೂಲಕ ನೀರನ್ನು ಹರಿಸಲಾಗುವದು ಎಂದರು ತಿಳಿಸಿದ್ದಾರೆ.

ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಉತ್ತಮ ಮಳೆ

ಶ್ರೀಮಂಗಲ: ದಕ್ಷಿಣ ಕೊಡಗಿನ ಪಶ್ಚಿಮ ಘಟ್ಟ ಪ್ರದೇಶ ವ್ಯಾಪ್ತಿಯಲ್ಲಿ ಗುರುವಾರ ಬೆಳಿಗ್ಗಿನಿಂದಲೇ ಉತ್ತಮ ಮಳೆಯಾಗುತ್ತಿದೆ. ಮುಂಗಾರುವಿನ ಬಿರುಸು ಇಲ್ಲದಿದ್ದರೂ ನಿರಂತರ ಮಳೆಯಾಗುತ್ತಿದ್ದು, ಇಲ್ಲಿನ ಶ್ರೀಮಂಗಲ, ಟಿ. ಶೆಟ್ಟಿಗೇರಿ, ಬಿರುನಾಣಿ, ಕುಟ್ಟ, ಹುದಿಕೇರಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಪಶ್ಚಿಮ ಘಟ್ಟದ ಅಂಚಿನಲ್ಲಿರುವ ಗ್ರಾಮಗಳಿಗೆ ಉತ್ತಮ ಮಳೆಯಾಗಿದೆ.

ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದ್ದರೂ ದಕ್ಷಿಣ ಕೊಡಗಿನ ಪೆÇನ್ನಂಪೇಟೆ, ಗೋಣಿಕೊಪ್ಪಲು ವ್ಯಾಪ್ತಿಯಲ್ಲಿ ಗುರುವಾರ ಮಳೆಯಾಗಿದೆ ಬಿಸಿಲಿನ ವಾತಾವರಣ ಕಂಡು ಬಂದಿದೆ. ದಕ್ಷಿಣ ಕೊಡಗಿನ 10 ಕಿ.ಮೀ. ನೇರ ಅಂತರದಲ್ಲಿ ಒಂದು ಕಡೆ ಉತ್ತಮ ಮಳೆಯಾಗುತ್ತಿದ್ದರೆ, ಇನ್ನೊಂದು ಕಡೆ ಬಿಸಿಲಿನ ವಾತಾವರಣ ನಾಗರಿಕರಲ್ಲಿ ವಿಸ್ಮಯ ಮೂಡಿಸಿದೆ.

ಮಳೆ ಕೊರತೆ: ಭತ್ತದ ಕೃಷಿ ವಿಳಂಬ

ನಾಪೆÇೀಕ್ಲು: ಪ್ರತೀ ವರ್ಷದಂತೆ ಸಮಯಕ್ಕೆ ಸರಿಯಾಗಿ ಮುಂಗಾರು ಆರಂಭಗೊಂಡಿದ್ದರೆ ಪೈರಿಗೆ 15 – 20 ದಿನಗಳಾಗುತ್ತಿತ್ತು. ಮುಂದಿನ ವಾರದಲ್ಲಿ ನಾಟಿ ಕೆಲಸ ಆರಂಭಿಸಬಹುದಿತ್ತು. ಆದರೆ ಈ ಬಾರಿ ಮುಂಗಾರು ಮಳೆ ಸರಿಯಾಗಿ ಸುರಿಯದ ಕಾರಣ ಇನ್ನೂ ಪೈರಿನ ಗದ್ದೆಗೆ ನೀರು ತುಂಬಿಸಿ ಉಳುಮೆ ಮಾಡಲು ಕೂಡ ಸಾಧ್ಯವಾಗಿಲ್ಲ ಎಂದು ಭತ್ತದ ಕೃಷಿಕರು ತಮ್ಮ ಹಿಂದಿನ ನೆನಪನ್ನು ಮೆಲುಕು ಹಾಕುತ್ತಿರುವದು ಕಂಡುಬರುತ್ತಿದೆ.

ಹೂ ಮಳೆಯಾಗಲಿ, ಮಂಗಾರು ಮಳೆಯಾಗಲಿ ಮೊದಲು ಸುರಿಯುವದು ನಾಲ್ಕುನಾಡು ವ್ಯಾಪ್ತಿಗೆ. ವಾಡಿಕೆಯಂತೆ ಜೂ. 4-5 ಕ್ಕೆಲ್ಲಾ ಭತ್ತದ ಬಿತ್ತನೆ ಕಾರ್ಯ ಕೈಗೊಳ್ಳಲಾಗು ತ್ತಿತ್ತು. ಅದರಲ್ಲಿಯೂ ನಾ ಮುಂದು, ತಾ ಮುಂದು ಎಂಬ ಪೈಪೆÇೀಟಿ ನಡೆಯುತ್ತಿತ್ತು. ಆದರೆ ಈ ವರ್ಷ ಪೈಪೆÇೀಟಿ ಹಾಗಿರಲಿ, ಪೈರಿನ ಗದ್ದೆ ಉಳುಮೆ ಮಾಡಲೂ ಸಾಧ್ಯವಿಲ್ಲದ ಪರಿಸ್ಥಿತಿ ತಲೆದೋರಿದೆ. ದಿನಕ್ಕೊಂದು, ಎರಡು ಬಾರಿ ತುಂತುರು ಮಳೆ ಬಿಟ್ಟರೆ, ಒರತೆ ಕಾಣಿಸಿಕೊಳ್ಳುವದಿರಲಿ, ಕುಡಿಯಲೂ ನೀರಿಲ್ಲದ ಪರಿಸ್ಥಿತಿ ಎದುರಾಗಿದೆ.

ಭತ್ತದ ಕೃಷಿ ಲಾಭದಾಯಕವಲ್ಲ ಎಂಬ ಕಾರಣದಿಂದ ಈ ವ್ಯಾಪ್ತಿಯಲ್ಲಿ ಭತ್ತದ ಕೃಷಿ ಮಾಡುವವರು ವಿರಳವಾಗಿದ್ದಾರೆ. ಆದರೂ ಸಾಂಪ್ರದಾಯಿಕವಾಗಿ ಮಾಡಿಕೊಂಡು ಬಂದಿರುವ ಭತ್ತದ ಕೃಷಿಯನ್ನು ನಿಲ್ಲಿಸಬಾರದೆಂಬ ಕಾರಣಕ್ಕೆ ಕೆಲವು ಬೆರಳೆಣಿಕೆ ಕೃಷಿಕರು ಅದರತ್ತ ಆಸಕ್ತಿ ತೋರುತ್ತಿದ್ದಾರೆ. ಅದಕ್ಕೂ ಈ ಬಾರಿ ಮುಂಗಾರು ಮಳೆ ತಡೆ ಒಡ್ಡುವ ಲಕ್ಷಣಗಳು ಗೋಚರವಾಗುತ್ತಿದೆ ಎನ್ನುತ್ತಾರೆ ಕೃಷಿಕರು.

ನಾಲ್ಕುನಾಡು ವ್ಯಾಪ್ತಿಯಲ್ಲಿ ಹೆಚ್ಚಿನ ಭತ್ತದ ಗದ್ದೆಗಳು ಅತಿ ಶೀತದಿಂದ ಕೂಡಿದೆ. ಬೇರೆ ಕಡೆಗಳಂತೆ ಇಲ್ಲಿ 20-22 ದಿನಗಳ ಪೈರನ್ನು ನಾಟಿ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ನಾಟಿ ಮಾಡಿದರೂ ಹೆಚ್ಚಿನ ಭಾಗ ಕೊಳೆತು ಹೋಗಿ ನಷ್ಟ ಸಂಭವಿಸುತ್ತದೆ. ಇಲ್ಲಿನ ಗದ್ದೆಗಳಲ್ಲಿ ನಾಟಿ ಮಾಡಲು 30-32 ದಿನಗಳ ಪೈರನ್ನು ಬಳಸಲಾಗುತ್ತದೆ. ಈ ಕಾರಣದಿಂದ ಇಲ್ಲಿ ಭತ್ತದ ಬೀಜ ಬಿತ್ತನೆ ಕಾರ್ಯ ಮುಂಗಾರು ಆರಂಭದಲ್ಲಿಯೇ ಮಾಡಬೇಕಾಗುತ್ತದೆ ಎನ್ನುತ್ತಾರೆ ಅನುಭವಿ ಕೃಷಿಕರು.

ಹಿಂದಿನಿಂದಲೂ ಕೃಷಿ ಮಾಡಿಕೊಂಡು ಬಂದಿರುವ ಗದ್ದೆಗಳನ್ನು ಪಾಳು ಬಿಡಬಾರದು ಎಂಬ ಉದ್ಧೇಶದಿಂದ ಪ್ರತೀ ವರ್ಷ ಭತ್ತದ ಕೃಷಿ ಮಾಡುತ್ತಿದ್ದೇನೆ. ಈ ವರ್ಷ ನೀರಿಲ್ಲದ ಕಾರಣ ಬೀಜ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ ಮುಂದೇನು ಎಂಬ ಚಿಂತೆ ಕಾಡುತ್ತಿದೆ ಎಂದು ನಾಪೋಕ್ಲುವಿನ ಕೃಷಿಕ ಬೊಪ್ಪಂಡ ಕಾಶಿ ನಂಜಪ್ಪ ಆಭಿಪ್ರಾಯಪಟ್ಟರು.

ಉಳುಮೆ ಮಾಡಿದರೂ ನಿಷ್ಪ್ರಯೋಜಕ

ಸೋಮವಾರಪೇಟೆ: ಪ್ರಸಕ್ತ ಸಾಲಿನಲ್ಲಿ ಮುಂಗಾರು ವಿಳಂಬ ದಿಂದಾಗಿ ಕೃಷಿ ಕಾರ್ಯಗಳಲ್ಲಿ ಹಿನ್ನಡೆ ಯಾಗಿದ್ದು, ಉತ್ತಮ ಮಳೆಗಾಗಿ ರೈತಾಪಿ ವರ್ಗ ಆಗಸದತ್ತ ದೃಷ್ಟಿ ನೆಟ್ಟಿದೆ.

ಕಳೆದ ವರ್ಷ ಈ ವೇಳೆಗಾಗಲೇ 25 ರಿಂದ 30 ಇಂಚಿನಷ್ಟು ಮಳೆಯಾಗಿದ್ದರೆ ಪ್ರಸಕ್ತ ವರ್ಷ 5 ರಿಂದ 10 ಇಂಚು ಮಳೆ ದಾಖಲಾಗಿರುವ ಹಿನ್ನೆಲೆ ಎಲ್ಲಾ ರೀತಿಯ ಕೃಷಿ ಕಾರ್ಯಗಳಿಗೆ ತೊಡಕಾಗಿದೆ. ಬಹುತೇಕ ರೈತರು ಇಂದಿಗೂ ಸಹ ಗದ್ದೆಗಳ ಉಳುಮೆ ಕಾರ್ಯವನ್ನೇ ಮಾಡಿಲ್ಲ. ಶೇ.30 ರಷ್ಟು ರೈತರು ಮಾತ್ರ ಟ್ರಾಕ್ಟರ್, ಟಿಲ್ಲರ್‍ಗಳ ಮೂಲಕ ಗದ್ದೆಗಳನ್ನು ಉತ್ತಿದ್ದು, ನೀರು ಕಟ್ಟಿ ಗದ್ದೆಯನ್ನು ಹಸನು ಮಾಡಲು ಉತ್ತಮ ಮಳೆಗಾಗಿ ಕಾಯುತ್ತಿದ್ದಾರೆ.

ನಾಲ್ಕೈದು ಇಂಚಿನಷ್ಟು ಮಳೆ ಸುರಿದು ಗದ್ದೆಯಲ್ಲಿ ನೀರು ಸಂಗ್ರಹಗೊಂಡರೆ ಮಾತ್ರ ಮುಂದಿನ ಕೃಷಿ ಚಟುವಟಿಕೆಗಳಿಗೆ ಅನುಕೂಲ ವಾಗುತ್ತದೆ. ಆದರೆ ಸೋಮವಾರ ಪೇಟೆ ಭಾಗದಲ್ಲಿ ಕೃಷಿಗೆ ಪೂರಕ ವಾದಂತೆ ಮಳೆ ಇಲ್ಲವಾದ ಹಿನ್ನೆಲೆ ಕೃಷಿ ಕಾರ್ಯಗಳಿಗೆ ಹಿನ್ನಡೆಯಾಗಿದೆ.

ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದಲ್ಲಿಯೂ ಸಹ ವಾಡಿಕೆಯಷ್ಟು ಮಳೆ ಇಲ್ಲವಾಗಿದೆ. ಹರಗ, ಶಾಂತಳ್ಳಿ, ಬೆಟ್ಟದಳ್ಳಿ, ಹಾನಗಲ್ಲು, ಗೌಡಳ್ಳಿ, ಯಡೂರು, ತಲ್ತರೆಶೆಟ್ಟಳ್ಳಿ ವ್ಯಾಪ್ತಿಯಲ್ಲಿ ಶೇ.30ರಷ್ಟು ಗದ್ದೆಗಳನ್ನು ಉಳುಮೆ ಮಾಡಿದ್ದು, ಉತ್ತಮ ಮಳೆಗಾಗಿ ಕೃಷಿಕರು ಕಾಯುತ್ತಿದ್ದಾರೆ.

-ವರದಿ: ಸುನಿಲ್ ಕುಯ್ಯಮುಡಿ, ಕೆ.ಕೆ. ನಾಗರಾಜಶೆಟ್ಟಿ, ಹರೀಶ್ ಮಾದಪ್ಪ, ಪಿ.ವಿ. ಪ್ರಭಾಕರ್, ವಿಜಯ್