ಗೋಣಿಕೊಪ್ಪಲು, ಜೂ. 28: ಪ್ರತಿ ತಿಂಗಳ ರೈತರ, ಬೆಳೆಗಾರರ ನಡುವೆ ಚೆಸ್ಕಾಂ ಅಧಿಕಾರಿಗಳು ಸಭೆ ನಡೆಸುವ ಮೂಲಕ ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವಂತೆ ಚೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಗೋಣಿಕೊಪ್ಪಲುವಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪೊನ್ನಂಪೇಟೆ, ಹುದಿಕೇರಿ, ಬಾಳೆಲೆ ಹಾಗೂ ಶ್ರೀಮಂಗಲ ಹೋಬಳಿಯ ರೈತರು ಹಾಗೂ ಬೆಳೆಗಾರರು ಪಾಲ್ಗೊಂಡಿದ್ದರು.
ದಕ್ಷಿಣ ಕೊಡಗಿನ ಭಾಗಗಳಲ್ಲಿ ನಿರಂತರ ವಿದ್ಯುತ್ ಸಮಸ್ಯೆ ಎದುರಾಗುತ್ತಿದ್ದು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಹಾಗೂ ಸಾರ್ವಜನಿಕರ ನಡುವೆ ಇಲಾಖಾಧಿಕಾರಿಗಳು ಉತ್ತಮ ಬಾಂಧವ್ಯ ವೃದ್ಧಿಸಿಕೊಳ್ಳುವ ಮೂಲಕ ಜನರ ಸಹಕಾರ ಪಡೆದುಕೊಂಡು ಆಗಿಂದಾಗ್ಗೆ ವಿದ್ಯುತ್ ನಿಲುಗಡೆ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳ ಬೇಕೆಂದು ರೈತರು ಅಧಿಕಾರಿಗಳನ್ನು ಮನವಿ ಮಾಡಿದರು. ಗೋಣಿಕೊಪ್ಪ ದಿಂದ ತಿತಿಮತಿಗೆ ಎಕ್ಸ್‍ಪ್ರೆಸ್ ಲೈನ್ ಟಿ ಎಸ್ಟೇಟ್‍ನ ಒಳಗೆ ಚೆಸ್ಕಾಂ ಸಿಬ್ಬಂದಿಗಳು ಪ್ರವೇಶ ಮಾಡಲು ಅವಕಾಶ ಕಲ್ಪಿಸುವದು, ವಿದ್ಯುತ್ ಕಂಬಗಳಿಗೆ ತೊಂದರೆ ಯಾಗುವ ಮರಗಳ ಕೊಂಬೆಗಳನ್ನು ಮಳೆಗಾಲದ ಮುಂಚೆಯೇ ಕಡಿಯುವದು, ವಿದ್ಯುತ್ ಲೈನ್‍ಗಳು ಅಪಾಯ ಮಟ್ಟದಿಂದ ಎತ್ತರಗೊಳಿಸುವದು 15 ದಿನಗಳಿ ಗೊಮ್ಮೆ ಚೆಸ್ಕಾಂನ ಹಿರಿಯ ಅಧಿಕಾರಿಗಳು ಲೈನ್‍ಮ್ಯಾನ್ ಹಾಗೂ ಇಂಜಿನಿಯರ್‍ಗಳ ಸಭೆ ಕರೆಯುವದು, ಶ್ರೀಮಂಗಲ ಹೋಬಳಿ ವಿಸ್ತ್ರೀರ್ಣ ಅಧಿಕವಿರುವದರಿಂದ ಹೆಚ್ಚುವರಿ ಎರಡು ಇಂಜಿನಿಯರ್‍ಗಳ ನೇಮಕ, ಹುದಿಕೇರಿ ಹೋಬಳಿಯಲ್ಲಿ ಹೊಸ ಸ್ಟೇಷನ್ ಸ್ಥಾಪನೆ ನಲ್ಲೂರು ಗ್ರಾಮದಲ್ಲಿ ಪಿಡಬ್ಲ್ಯೂಡಿ ಇಲಾಖೆ ಹಾಗೂ ಚೆಸ್ಕಾಂ ಇಲಾಖೆಯ ನಡುವೆ ಇರುವ ಗೊಂದಲ ನಿವಾರಿಸಿ ಟ್ರಾನ್ಸ್ ಫಾರಂ ಸ್ಥಳಾಂತರಗೊಳಿಸುವದು. ಕಾನೂರಿನಲ್ಲಿ ನಿಯಮ ಬಾಹಿರವಾಗಿ ಬಿಎಸ್‍ಎನ್‍ಎಲ್ ತಂತಿಯ ಮೇಲೆ ವಿದ್ಯುತ್ ಕಂಬ ಹಾಕಿರುವದನ್ನು ತೆರವುಗೊಳಿಸುವದು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.
ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ವಿಶೇಷವಾಗಿ ದ.ಕೊಡಗಿನಲ್ಲಿ ನಿರಂತರ ವಿದ್ಯುತ್ ನಿಲುಗಡೆಯಾಗುತ್ತಿದೆ ಈ ಬಗ್ಗೆ ಹಲವು ಬಾರಿ ಇಲಾಖೆಯ ಅಧಿಕಾರಿಗಳ ಗಮನ ಸೆಳೆದಿದ್ದೇವೆ. ಆದರೂ ಪರಿಹಾರ ಕ್ರಮ ಸರಿಯಾಗಿ ನಡೆಯುತ್ತಿಲ್ಲ. ಕಿರಿಯ ಅಧಿಕಾರಿಗಳು ಕೆಲಸ ನಿರ್ವಹಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವದು ಇದಕ್ಕೆ ಕಾರಣವಾಗಿದೆ. ಆದ್ದರಿಂದ ಇಂತಹ ಸಭೆಗಳನ್ನು ನಡೆಸುವ ಅವಶ್ಯಕತೆ ಬಂದೊದಗಿದೆ. ವಿವಿಧ ಹೋಬಳಿ ಗಳಲ್ಲಿ ಇರುವ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದರು.
ಚೆಸ್ಕಾಂನ ಮಡಿಕೇರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಸೋಮಶೇಖರ್ ಮಾತನಾಡಿ ಈ ಭಾಗದಲ್ಲಿ ಆಗಿಂದಾಗ್ಗೆ ವಿದ್ಯುತ್ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಿರ್ದೇಶನ ನೀಡಲಾಗಿದೆ. ಇಲಾಖೆಯಲ್ಲಿ ವಿದ್ಯುತ್ ಸಾಮಗ್ರಿಗಳಿಗೆ ಯಾವದೆ ಕೊರತೆ ಇಲ್ಲ. ಮಳೆಗಾಲದಲ್ಲಿ ಸಕಾಲದಲ್ಲಿ ಕರ್ತವ್ಯ ನಿರ್ವಹಿಸಲು ಪ್ರತಿ ಇಂಜಿನಿಯರ್ ಗಳಿಗೆ ವಾಹನದ ವ್ಯವಸ್ಥೆ ಕಲ್ಪಿಸಲಾಗಿದೆ. ತಾತ್ಕಾಲಿಕವಾಗಿ ಹೆಚ್ಚುವರಿ ಲೈನ್‍ಮ್ಯಾನ್‍ಗಳ ನೇಮಕ ಮಾಡಿಕೊಳ್ಳಲಾಗಿದೆ. ಕಿರಿಯ ಅಧಿಕಾರಿಗಳು ರೈತರೊಂದಿಗೆ ಉತ್ತಮ ಬಾಂಧವ್ಯ ಕಂಡುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗೋಣಿಕೊಪ್ಪಲುವಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಂಕಯ್ಯ ಮಾತನಾಡಿ, ನಾಲ್ಕು ಹೋಬಳಿಗಳಲ್ಲಿ ರೈತರು, ಬೆಳೆಗಾರರು ಹೇಳಿರುವ ಸಮಸ್ಯೆಗಳನ್ನು ಬಗೆ ಹರಿಸಲು ಕ್ರಮ ಕೈಗೊಳ್ಳಲಾಗುವದು 15 ದಿನದ ಒಳಗೆ ಕೆಲವು ಸಮಸ್ಯೆಗಳು ಪರಿಹಾರ ಕಾಣಲಿವೆ. ಇನ್ನು ಕೆಲವು ಸಮಸ್ಯೆಗಳನ್ನು ಆದಷ್ಟು ಬೇಗನೆ ಬಗೆ ಹರಿಸಲು ಪ್ರಯತ್ನ ನಡೆಸಲಾಗುವದು. ರೈತರು ಇಲಾಖೆಯೊಂದಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕೆಲವು ಲೈನ್‍ಮ್ಯಾನ್‍ಗಳು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳದೆ, ಸಕಾಲದಲ್ಲಿ ತಮ್ಮ ದೂರವಾಣಿಯನ್ನು ಸ್ವೀಕರಿಸದೆ ತಮಗೆ ಇಷ್ಟ ಬಂದಂತೆ ಉಡಾಫೆಯ ಮಾತನಾಡುತ್ತಾರೆ. ರಾತ್ರಿ ಪೂರ್ತಿ ವಿದ್ಯುತ್ ನಿಲುಗಡೆಗೊಳಿಸಿ ಮುಂಜಾನೆಯಾದರು ವಿದ್ಯುತ್ ಸಂಪರ್ಕ ನೀಡುತ್ತಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕೆಂದು ಹಲವು ರೈತ ಮುಖಂಡರು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಹಿರಿಯ ಅಧಿಕಾರಿಗಳು ಅಂತಹ ಲೈನ್‍ಮ್ಯಾನ್‍ಗಳನ್ನು ವರ್ಗಾವಣೆಗೊಳಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವದು ಉಳಿದ ಸಿಬ್ಬಂದಿ ಗಳಿಗೆ ಎಚ್ಚರಿಕೆ ನೀಡಲಾಗುವದು ಎಂದರು. ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಪೊನ್ನಂಪೇಟೆ ಹೋಬಳಿ ಸಂಚಾಲಕ ಆಲೆಮಾಡ ಮಂಜುನಾಥ್, ಅಮ್ಮತ್ತಿ ಹೋಬಳಿ ಸಂಚಾಲಕ ಮಂಡೇಪಂಡ ಪ್ರವೀಣ್, ತಿತಿಮತಿಯ ಚೆಪ್ಪುಡಿರ ಕಾರ್ಯಪ್ಪ, ಮಾಯಮುಡಿಯ ಎಸ್.ಎಸ್. ಸುರೇಶ್, ರೈತ ಮುಖಂಡ ರಾದ ಎಂ.ಬಿ. ಅಶೋಕ್, ಕೋದೇಂಗಡ ಸುರೇಶ್, ಗಾಣಂಗಡ ಉತ್ತಯ್ಯ, ಚಿರಿಯಪಂಡ ಗಣಪತಿ, ಚೆಪ್ಪುಡಿರ ಪ್ರವೀಣ್, ಕೊಕ್ಕೆಂಗಡ ಪೂಣಚ್ಚ, ಹೆಚ್.ಎ.ಹರೀಶ್, ವಾಸಪ್ಪ, ನಂಬುಡುಮಾಡ ಸುರೇಶ್, ಶ್ರೀಮಂಗಲ ಗಿರೀಶ್, ದಿನೇಶ್, ಪುಚ್ಚಿಮಾಡ ಪ್ರಾಣ್, ತೀತರಮಾಡ ರಾಜ, ಚೆಪ್ಪುಡಿರ ಸೋಮಯ್ಯ, ತಿತಿಮತಿ ನವೀನ್, ಶ್ರೀಮಂಗಲದ ಬಾಚಮಾಡ ಭವಿ ಕುಮಾರ್, ಹುದಿಕೇರಿಯ ಚಂಗುಲಂಡ ಸೂರಜ್, ತಿಲಕ್, ಟಿ. ಶೆಟ್ಟಿಗೇರಿ ಮೋಟಯ್ಯ, ಕಾರ್ಯಪ್ಪ, ಮಂಡೇಪಂಡ ಅರ್ಜುನ್ ಸೇರಿದಂತೆ ಮುಂತಾದವರು ಹಾಜರಿದ್ದರು. ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಸ್ವಾಗತಿಸಿ, ಚೆಪ್ಪುಡೀರ ಕಾರ್ಯಪ್ಪ ವಂದಿಸಿದರು. - ಹೆಚ್.ಕೆ. ಜಗದೀಶ್