ಮಡಿಕೇರಿ, ಜೂ. 28: ಕಡಗದಾಳು ಗ್ರಾಮ ಪಂಚಾಯಿತಿಯ ಕತ್ತಲೆಕಾಡು-ಕ್ಲೋಸ್‍ಬರ್ನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಕಾಮಗಾರಿಗೆ ತಾಲೂಕು ಪಂಚಾಯಿತಿ ಸದಸ್ಯ ಬಿ.ವೈ. ರವೀಂದ್ರ (ಅಪ್ರು) ಗುರುವಾರ ಭೂಮಿಪೂಜೆ ನೆರವೇರಿಸಿ ದರು. ಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಶಿಕ್ಷಣ ಇಲಾಖೆಯಿಂದ ರೂ. 21.20 ಲಕ್ಷ ಬಿಡುಗಡೆಯಾಗಿ ಪಿಡಬ್ಲ್ಯೂಡಿ ಮೂಲಕ ಟೆಂಡರ್ ಆಗಿದ್ದರೂ ಕಾಮಗಾರಿ ಆರಂಭವಾಗದಿರುವ ಬಗ್ಗೆ ಕೆಲವು ದಿನದ ಹಿಂದೆ ಇಲಾಖೆ ಅಧಿಕಾರಿಗಳನ್ನು ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ತರಾಟೆಗೆ ತೆಗೆದುಕೊಂಡಿದ್ದರು. ಇದಾದ ನಂತರ ತಾ. 24 ರಂದು ಶಾಲೆಗೆ ಭೇಟಿ ನೀಡಿದ್ದ ಇಂಜಿನಿಯರ್ ಹಾಗೂ ಗುತ್ತಿಗೆದಾರರು ಈ ವಾರದಿಂದಲೇ ಕಾಮಗಾರಿ ಆರಂಭಿಸುವ ಭರವಸೆ ನೀಡಿದ್ದರು.

ಕೊಟ್ಟ ಮಾತಿನಂತೆ ಕಾಮಗಾರಿ ಆರಂಭಿಸಿದ್ದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ರವೀಂದ್ರ ಅಪ್ರು, ಶಾಲೆಯ ಹಳೇ ಕಟ್ಟಡ ಶಿಥಿಲಾವಸ್ಥೆ ತಲಪಿದ ಬಳಿಕ ಹೊಸ ಕಟ್ಟಡ ನಿರ್ಮಾಣವಾಗಬೇಕೆಂದು ಸಾರ್ವಜನಿಕರಿಂದ ನಿರಂತರ ಒತ್ತಡ ಬರುತಿತ್ತು. ಎಲ್ಲರ ಕಾಳಜಿಯಿಂದ ಕಟ್ಟಡ ನಿರ್ಮಾಣವಾಗುತ್ತಿದೆ. ಉತ್ತಮ ಗುಣಮಟ್ಟ ಕಾಯ್ದುಕೊಂಡು ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. ಕಾಮಗಾರಿ ಬಗ್ಗೆ ಮಾಹಿತಿ ನೀಡಿದ ಗುತ್ತಿಗೆದಾರ ಪರಮೇಶ್ವರ್, ಈ ವರ್ಷಾಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸ ಲಾಗುವದು. ಆಧುನಿಕ ಶೈಲಿಯಲ್ಲಿ ಎರಡು ಕೊಠಡಿಯನ್ನೊಳಗೊಂಡ ಕಟ್ಟಡ ನಿರ್ಮಿಸುವದಾಗಿ ಹೇಳಿದರು.

ಶಾಲೆ ಮುಖ್ಯ ಶಿಕ್ಷಕಿ ಸುಜಾತ, ಎಸ್‍ಡಿಎಂಸಿ ಅಧ್ಯಕ್ಷ ಕೆ.ಕೆ. ಬಾಲಕೃಷ್ಣ, ಹಳೇ ವಿದ್ಯಾರ್ಥಿ ಬಳಗದ ಪ್ರತಿನಿಧಿ ಕಿಶೋರ್ ರೈ ಕತ್ತಲೆಕಾಡು ನೂತನ ಕಟ್ಟಡ ನಿರ್ಮಾಣವಾಗುತ್ತಿರುವದರ ಹಿಂದಿನ ಶ್ರಮದ ಬಗ್ಗೆ ಅನಿಸಿಕೆ ಹಂಚಿಕೊಂಡರು. ಗ್ರಾ.ಪಂ. ಸದಸ್ಯೆ ಬಿ.ಎನ್. ಪುಷ್ಪಾವತಿ ರೈ, ಎಸ್‍ಡಿಎಂಸಿ ಮಾಜಿ ಅಧ್ಯಕ್ಷ ಹೊನ್ನಪ್ಪ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.