ಮಡಿಕೇರಿ, ಜೂ. 28: ಅರಣ್ಯ ಹಕ್ಕು ಕಾಯ್ದೆಯಡಿ ಜಿಲ್ಲೆಯ ಅರಣ್ಯ ವಾಸಿಗಳಿಗೆ ಸಮರ್ಪಕ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ ತುರ್ತು ಕ್ರಮ ಕೈಗೊಳ್ಳುವಂತೆ ಐಟಿಡಿಪಿ ಇಲಾಖಾ ಅಧಿಕಾರಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅನುಸೂಚಿತ ಜಾತಿ ಮತ್ತು ಪಂಗಡಗಳ ದೌರ್ಜನ್ಯ ನಿಯಂತ್ರಣ ನಿಯಮ ರೀತ್ಯಾ ರಚಿಸಲಾಗಿರುವ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವೀರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದಲ್ಲಿ ಸ್ಮಶಾನಕ್ಕೆ ಬದಲಿ ಪರ್ಯಾಯ ಜಾಗ ಗುರುತಿಸುವಂತೆ ವೀರಾಜಪೇಟೆ ತಹಶೀಲ್ದಾರರಿಗೆ ಸೂಚನೆ ನೀಡಿದರು. ಸೋಮವಾರಪೇಟೆ ತಾಲೂಕಿನ ನಿಡ್ತ ಗ್ರಾ.ಪಂ. ವ್ಯಾಪ್ತಿಯ ಸ್ಮಶಾನದ ಸಮಸ್ಯೆಗೆ ಸ್ಥಳ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವಂತೆ ಸೋಮವಾರಪೇಟೆ ತಾ.ಪಂ. ಇಒಗೆ ನಿರ್ದೇಶನ ನೀಡಿದರು.
ಕಳೆದ ಬಾರಿ ನಡೆದ ಸಭೆಯ ಅನುಪಾಲನಾ ವರದಿ ಪ್ರಗತಿ ಕುರಿತು ವಿವಿಧ ಇಲಾಖೆಯ ಅಧಿಕಾರಿಗಳಿಂದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ ಪಡೆದರು. ಜೇನು ಕುರುಬರಿಗೆ ಅವಶ್ಯವಿರುವ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ದಿಸೆಯಲ್ಲಿ ಅಗತ್ಯ ಕ್ರಮಕೈಗೊಂಡು ಕೃಷಿ ಚಟುವಟಿಕೆಗಳಿಗೆ ನೆರವು ನೀಡುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪೆನ್ನೇಕರ್ ಅವರು ಅರಣ್ಯ ಹಕ್ಕು ಕಾಯ್ದೆಯಡಿ ಅನುಷ್ಠಾನದಲ್ಲಿ ಜಿಲ್ಲೆಯಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಿ ಅರ್ಹ ಅರಣ್ಯ ವಾಸಿಗಳಿಗೆ ಅನುಕೂಲವಾಗಬೇಕು. ಹಲವು ದಶಕಗಳಿಂದ ಅರಣ್ಯದಲ್ಲಿಯೇ ವಾಸವಿರುವ ಮೂಲ ನಿವಾಸಿಗಳ ಹಕ್ಕುಗಳ ರಕ್ಷಣೆ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಐಟಿಡಿಪಿ ಅಧಿಕಾರಿ ಶಿವಕುಮಾರ್ಗೆ ತಿಳಿಸಿದರು. ಸಮಿತಿಯ ಸದಸ್ಯರಾದ ಮುತ್ತಪ್ಪ ಮಾತನಾಡಿ, ನಾಪೋಕ್ಲು ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಹಾಡಿಗಳಲ್ಲಿ ವಿದ್ಯುತ್ ಸಮಸ್ಯೆಯನ್ನು ನಿವಾರಿಸಬೇಕು. ಹಾಡಿಯ ಪ್ರದೇಶಕ್ಕೆ ಸಂಚಾರಿ ನ್ಯಾಯಬೆಲೆ ಅಂಗಡಿ, ರಸ್ತೆ ವ್ಯವಸ್ಥೆ, ಅಂಬೇಡ್ಕರ್ ಭವನ ಹಾಗೂ 94 ಸಿಸಿ ರಡಿಯಲ್ಲಿ ಹಕ್ಕುಪತ್ರ ವಿತರಣೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಈ ವ್ಯಾಪ್ತಿಯಲ್ಲಿ ಇರುವ ಹಾಡಿಗಳಲ್ಲಿ ವಾಸಿಸುವ ಕುಟುಂಬಗಳಿಗೆ ತುರ್ತಾಗಿ ಅವಶ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಮಿತಿಯ ಸದಸ್ಯರಾದ ಸುಕುಮಾರ್, ಜೇನುಕುರುಬರ ಕೆಂಪ ಅವರು ಪರಿಶಿಷ್ಟರ ಹಲವು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಭಾರತಿ, ತಹಶೀಲ್ದಾರರಾದ ಗೋವಿಂದರಾಜು, ಕುಸುಮ, ತಾ.ಪಂ. ಇಒಗಳಾದ ಲಕ್ಷ್ಮಿ, ಸುನಿಲ್ ಕುಮಾರ್ ಜಯಣ್ಣ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಇತರರು ಇದ್ದರು.
ಪ್ರಗತಿ ಪರಿಶೀಲನಾ ಸಭೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರಿಗಾಗಿ ವಿವಿಧ ಇಲಾಖೆಯಲ್ಲಿ ಮೀಸಲಿರುವ ಅನುದಾನವನ್ನು ಕಾಲ ಮಿತಿಯೊಳಗೆ ವಿನಿಯೋಗಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆ ಕಾರ್ಯಕ್ರಮದಡಿ ಸಾಧಿಸಿದ ಪ್ರಗತಿ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು.
ಕೃಷಿ, ತೋಟಗಾರಿಕೆ, ಪಶುಪಾಲನೆ, ಪಂಚಾಯತ್ ರಾಜ್, ಅರಣ್ಯ, ಆರೋಗ್ಯ, ವಸತಿ, ಲೋಕೋಪಯೋಗಿ ಹೀಗೆ ವಿವಿಧ ಇಲಾಖೆಗಳಲ್ಲಿ ಕಾರ್ಯಕ್ರಮಗಳನ್ನು ಅರ್ಹರಿಗೆ ತಲಪಿಸಿ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ವಿದ್ಯಾರ್ಥಿ ನಿಲಯಗಳಿಗೆ ಮತ್ತು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನಿವೇಶನ ಮತ್ತಿತರ ಬಗ್ಗೆ ಜಿಲ್ಲಾಧಿಕಾರಿ ಅವರು ಮಾಹಿತಿ ಪಡೆದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಭಾರತಿ ಅವರು ನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ರೂ. 10 ಕೋಟಿ ನಿಗದಿಯಾಗಿದ್ದು, ಸೂಕ್ತ ಸ್ಥಳ ಗುರುತಿಸಬೇಕಿದೆ ಎಂದರು.
ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್ ವೀರಾಜಪೇಟೆ ಬಳಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಉತ್ತಮ ಜಾಗ ಕಲ್ಪಿಸಬೇಕಿದೆ ಎಂದು ಮನವಿ ಮಾಡಿದರು. ಜಿ.ಪಂ. ಸಿಇಒ ಕೆ. ಲಕ್ಷ್ಮೀಪ್ರಿಯಾ ಅವರು ಎಸ್ಸಿ-ಎಸ್ಪಿ-ಟಿಎಸ್ಪಿ ಯೋಜನಾ ಕಾರ್ಯಕ್ರಮಗಳನ್ನು ಅರ್ಹರಿಗೆ ತಲಪಿಸಬೇಕು. ಯಾವದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಸೂಚಿಸಿದರು. ಲೋಕೋಪಯೋಗಿ ಇಲಾಖೆಯ ಇಇ ಇಬ್ರಾಹಿಂ, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ತಮ್ಮಯ್ಯ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ್, ತಹಶೀಲ್ದಾರ್ ಕುಸುಮ, ಗೋವಿಂದರಾಜು, ತಾ.ಪಂ. ಇಒಗಳಾದ ಸುನಿಲ್ ಕುಮಾರ್, ಲಕ್ಷ್ಮೀ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಕುಮಾರ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ ಬಾಯಿ, ಕೈಮಗ್ಗ ಮತ್ತು ಜವುಳಿ ಇಲಾಖೆಯ ಗುರುಸ್ವಾಮಿ, ಸಹಕಾರ ಇಲಾಖೆಯ ಸಹಾಯಕ ನಿಬಂಧಕ ರವಿಕುಮಾರ್ ಇತರರು ಇದ್ದರು.