ಶ್ರೀಮಂಗಲ, ಜೂ. 28: ಶಾಖಾಹಾರಿ ಆಹಾರದಲ್ಲಿ ವೈವಿದ್ಯಮಯ ಮೀನು ತುಂಬಾ ಪ್ರಾಮುಖ್ಯತೆ ಪಡೆದಿದೆ. ಬಗೆಬಗೆಯ ಮೀನು ವಿವಿಧ ರೀತಿಯ ರುಚಿಯಿಂದ ಆಹಾರದ ಅವಿಭಾಜ್ಯ ಅಂಗವೆನಿಸಿದೆ. ಪ್ರಮುಖವಾಗಿ ಸಮುದ್ರ, ಕೆರೆ, ನದಿ, ಅಣೆಕಟ್ಟುಗಳಲ್ಲಿ ಹಿಡಿಯುವ ಮೀನುಗಳನ್ನು ತಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ.

ಕೋಳಿ, ಕುರಿ ಮತ್ತು ಹಂದಿ ಮಾಂಸಗಳು ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಒಂದೇ ರೀತಿಯ ದರವಿರುತ್ತದೆ. ಆದರೇ ದಕ್ಷಿಣ ಕೊಡಗಿನ ಪೊನ್ನಂಪೇಟೆ ಪಟ್ಟಣದಲ್ಲಿ ಮೀನಿಗೆ ಒಂದು ದರವಿದ್ದರೆ ಅಲ್ಲಿಂದ ಕೇವಲ 1 ಕಿ.ಮೀ ಅಂತರದ ಮಾರುಕಟ್ಟೆಯಲ್ಲಿ ಮೀನಿಗೆ ದೊಡ್ಡಮಟ್ಟದ ಆಶ್ಚರ್ಯ ಮೂಡಿಸಿದೆ.

ಪೊನ್ನಂಪೇಟೆಯ ಸಮುದ್ರ ಮೀನು ಮಾರಾಟ ಮಾಡುವ ಮಳಿಗೆಯಲ್ಲಿ ಒಂದು ದರವಿದ್ದರೆ ಅಲ್ಲಿಂದ 1 ಕಿ.ಮೀ ದೂರವಿರುವ ಬೇಗೂರು ಮಾರುಕಟ್ಟೆಯಲ್ಲಿ ದರ ಕಡಿಮೆ ಇರುವದು ಕಂಡು ಬಂದಿದೆ. ಗ್ರಾ.ಪಂ. ಯಲ್ಲಿ ಮೀನು ಮಾರುಕಟ್ಟೆ ಮಾರಾಟ ಸಂದರ್ಭ ಪೈಪೋಟಿ ಏರ್ಪಟ್ಟು ಅಧಿಕ ದರಕ್ಕೆ ಖರೀದಿಸಿದ ಲೈಸನ್ಸ್‍ದಾರರು ತಮ್ಮ ಇಷ್ಟದಂತೆ ಮೀನು ಮಾರಾಟ ದರವನ್ನು ನಿಗದಿ ಪಡಿಸುತ್ತಿರುವದು ಗ್ರಾಹಕರಿಗೆ ಹೊರೆಯಾಗುತ್ತಿದೆ.

ಸಮುದ್ರ ಮೀನುಗಳಲ್ಲಿ ಜನಪ್ರಿಯವಾಗಿರುವ ಮತ್ತಿ ಮೀನಿಗೆ ಪೊನ್ನಂಪೇಟೆ ಮಾರುಕಟ್ಟೆಯಲ್ಲಿ ಕೆ.ಜಿ. ಒಂದಕ್ಕೆ 200 ರೂ. ಇದ್ದರೆ ಬೇಗೂರು ಗ್ರಾಮದ ಮಾರುಕಟ್ಟೆಯಲ್ಲಿ 160 ರೂ. ಇದ್ದು 40 ರೂ. ಕಡಿಮೆಗೆ ಬೇಗೂರು ಮಾರುಕಟ್ಟೆಯಲ್ಲಿ ದೊರೆಯುತ್ತಿದೆ.

ಮತ್ತೊಂದು ಜನಪ್ರಿಯ ಮೀನು ಐಲೆ (ಬಾಂಗಡ) ಪೊನ್ನಂಪೇಟೆಯಲ್ಲಿ 220 ಇದ್ದರೆ ಬೇಗೂರಿನಲ್ಲಿ 160 ಧಾರಣೆ ಇದೆ. 1 ಕೆ.ಜಿ.ಗೆ 60 ರೂ. ಹೆಚ್ಚು ಪೊನ್ನಂಪೇಟೆ ಮಾರುಕಟ್ಟೆಯಲ್ಲಿ ಧಾರಣೆ ಇದೆ. ಹಾಗೆಯೇ ಚೆಮ್ಮಿನ್ 360 (ಬೇಗೂರು), 400 (ಪೊನ್ನಂಪೇಟೆ), ಕಾಟ್ಲ 180 (ಬೇಗೂರು), 200 (ಪೊನ್ನಂಪೇಟೆ) ಧಾರಣೆ ಇದೆ.

ಈ ಧಾರಣೆ ವ್ಯತ್ಯಾಸಕ್ಕೆ ಮುಖ್ಯ ಕಾರಣವೆಂದರೆ ಮೀನು ಮಾರುಕಟ್ಟೆಯನ್ನು ಹರಾಜು ಹಾಕಿರುವ ಸಂದರ್ಭ ಪೈಪೋಟಿ ಏರ್ಪಟ್ಟಿರುವದರಿಂದ ಹೆಚ್ಚಿನ ದರಕ್ಕೆ ಮಾರುಕಟ್ಟೆಯನ್ನು ಕೊಂಡುಕೊಳ್ಳುತ್ತಾನೆ. ಪೊನ್ನಂಪೇಟೆ ಮಾರುಕಟ್ಟೆಯು ಪೊನ್ನಂಪೇಟೆ ಗ್ರಾ.ಪಂ. ವ್ಯಾಪ್ತಿಗೆ ಬರುತ್ತಿದ್ದು ಈ ವ್ಯಾಪ್ತಿಗೆ 2 ಮೀನು ಮಾರಾಟ ಲೈಸನ್ಸ್ ನೀಡಲಾಗಿದೆ. ಒಂದನ್ನು ರೂ. 2.90 ಲಕ್ಷ ಮತ್ತೊಂದು ಲೈಸನ್ಸ್ ಅನ್ನು ರೂ. 2.94 ಲಕ್ಷ ಒಟ್ಟು ರೂ. 5.84 ಲಕ್ಷಕ್ಕೆ ಮಾರಾಟ ಮಾಡಲಾಗಿದೆ. ಇದರಿಂದ ಗ್ರಾ.ಪಂ.ಗೆ ಹೆಚ್ಚಿನ ಆದಾಯ ದೊರೆತಿದೆ. ಹೆಚ್ಚಿನ ದರಕ್ಕೆ ಲೈಸನ್ಸ್ ಖರೀದಿಸಿರುವ ಮಾರುಕಟ್ಟೆಯವರು ಅನಿವಾರ್ಯವಾಗಿ ಹೆಚ್ಚಿನ ದರಕ್ಕೆ ಮೀನು ಮಾರಾಟ ಮಾಡುತ್ತಿದ್ದಾರೆ.

ಬಲ್ಯಮುಂಡೂರು ಗ್ರಾ.ಪಂ ವ್ಯಾಪ್ತಿಗೆ ಬರುವ ಬೇಗೂರು ಮೀನು ಮಾರುಕಟ್ಟೆಯ 5 ಲೈಸನ್ಸ್ ತಲಾ ರೂ. 10 ಸಾವಿರದಂತೆ ಒಟ್ಟು 50 ಸಾವಿರಕ್ಕೆ ಮಾರಾಟವಾಗಿದೆ. ಇದರಿಂದ ಕಡಿಮೆ ದರಕ್ಕೆ ಮಾರುಕಟ್ಟೆ ಪಡೆದಿರುವದರಿಂದ ಕಡಿಮೆ ದರಕ್ಕೆ ಮೀನು ಮಾರಾಟ ಮಾಡಲಾಗುತ್ತಿದೆ.

ಒಟ್ಟಿನಲ್ಲಿ ಗ್ರಾ.ಪಂ. ಗೆ ಮಾರುಕಟ್ಟೆಯ ಆದಾಯ ಹೆಚ್ಚಾದಷ್ಟು ಗ್ರಾಹಕರಿಗೆ ಮೀನುದರ ಹೆಚ್ಚಾಗುವ ಮೂಲಕ ಹೊರೆಯಾಗುತ್ತಿದೆ. ವಿಶೇಷವೆಂದರೆ ಪೊನ್ನಂಪೇಟೆ ಪಟ್ಟಣದಿಂದ 1 ಕಿ.ಮೀ. ವ್ಯಾಪ್ತಿಯಲ್ಲಿ ಬಲ್ಯಮುಂಡೂರು ಗ್ರಾ.ಪಂ. ನ ಭೌಗೋಳಿಕ ಸರಹದ್ದು ಬರುವದರಿಂದ ಕೇವಲ 1 ಕಿ.ಮೀ. ಅಂತರದ ಮಾರುಕಟ್ಟೆಯಲ್ಲಿ ಸಮುದ್ರ ಮೀನುಗಳ ದರದಲ್ಲಿ ಅಜಗಜಾಂತರ ವ್ಯತ್ಯಾಸದಲ್ಲಿ ಮಾರಾಟವಾಗುತ್ತಿರುವದು ಜನರಲ್ಲಿ ಆಶ್ಚರ್ಯ ಮೂಡಿಸಿದೆ.